Breaking News
Home / ಬೆಳಗಾವಿ ನಗರ / ಅಪಾಯದಲ್ಲಿ ನಗರದ ಮರಗಳು

ಅಪಾಯದಲ್ಲಿ ನಗರದ ಮರಗಳು

ಬೆಳಗಾವಿ:
ನಗರದಲ್ಲಿ ಅಪಾಯದ ಅಂಚಿನಲ್ಲಿರುವ ಮರಗಳು ಸಾಕಷ್ಟು ಇದ್ದರೂ ಅವುಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಮನಸ್ಸು ಮಾಡದೇ ಇರುವುದು ವಿಪರ್ಯಾಸ.
ಈಗಾಗಲೇ ಮಳೆಗಾಲ ಪ್ರಾರಂಭವಾಗಿ ಒಂದು ತಿಂಗಳು ಕಳೆದಿದೆ. ಈ ಮಳೆಯಿಂದ ರಸ್ತೆ ಬದಿಯಲ್ಲಿರುವ ಸಾಕಷ್ಟು ಮರಗಳು ನೆಲಕ್ಕುರುಳಿ ಸಂಚಾರದ ತೊಂದರೆ, ವಾಹನಗಳ ಮೇಲೆ ಮರಗಳು ಉರುಳಿ ಬಿದ್ದಿರುವುದು, ವಿದ್ಯುತ್ ತಂತಿಯ ಮೇಲೆ ಮರಗಳ ಟೊಂಗೆ ಬಿದ್ದು, ಶಾರ್ಟಸರ್ಕಿಟ್ ಆಗಿರುವುದು, ಹೀಗೆ ಹತ್ತು ಹಲವು ಸಮಸ್ಯೆಗಳಾಗಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಇದನ್ನೆಲ್ಲ ನೋಡಿಯಾಗಿದೆ. ಇನ್ನೂ ಹಲವು ಮರಗಳು ಬೀಳಬಹುದು, ಯಾರಿಗಾದರೂ ಜೀವಕ್ಕೆ ಹಾನಿಯಾಗಬಹುದು ಎಂದು ಆಲೋಚಿಸಿ ಅಪಾಯದ ಅಂಚಿನಲ್ಲಿರುವ ಮರಗಳನ್ನು ತೆಗೆಯುವ ಕೆಲಸ ಪ್ರಾರಂಭಿಸಬೇಕಿತ್ತು. ಆದರೆ ಕೆಲಸ ಇನ್ನೂ ವರೆಗೆ ಪ್ರಾರಂಭಿಸಿಲ್ಲ.! ನಗರದಲ್ಲಿ ಮಳೆ ಗಾಳಿಯಿಂದ ನೆಲಕ್ಕುರುಳಿದ ಮರಗಳನ್ನು ಮಾತ್ರ ತೆರವುಗೊಳಿಸಲು ಯಶಸ್ವಿಯಾಗಿದ್ದಾರೆ.
ನಗರದ ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿ, ಎಲ್ಐಜಿ ಕಚೇರಿಯ ಎದುರು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ, ಹಿಂಡಲಗಾ ರಸ್ತೆ ಸೇರಿದಂತೆ ನಗರದ ಹತ್ತು ಹಲವು ಸ್ಥಳಗಳಲ್ಲಿ ಅಪಾಯದ ಅಂಚಿನಲ್ಲಿರುವ ಮರಗಳು ಇವೆ. ಗಟ್ಟಿ ಮರಗಳೂ ಸಹಿತ ನೆಲಕ್ಕುರುಳುತ್ತಿರುವುದರಿಂದ ಪುಟ್ ಪಾತ್ ಮೇಲೆ ಓಡಾಡುವ ಜನರು ಭಯದ ವಾತಾವರಣದಲ್ಲಿ ಓಡಾಡುತ್ತಿದ್ದಾರೆ. ಅಲ್ಲದೇ ಜಿಲ್ಲಾಡಳಿತ ಕಚೇರಿ ಎದುರಲ್ಲೇ ಆಲದ ಮರದ ಟೊಂಗೆ ವಿದ್ಯುತ್ ತಂತಿಯ ಮೇಲೆ ಹಾಯ್ದು ಹೋಗಿದೆ. ಯಾವಾಗ ಬೀಳುತ್ತದೆಯೋ ಗೊತ್ತಿಲ್ಲ. ಜಿಲ್ಲಾಧಿಕಾರಿ ಕಚೇರಿಗೆ ದಿನಾಲು ಸಾವಿರಾರು ಸಂಖ್ಯೆಯಲ್ಲಿ ಜನರು ಬಂದು ತಮ್ಮ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಾರೆ. ಆದರೆ ಆ ಟೊಂಗೆಗಳು ಮುರಿದು ತಂತಿಯ ಮೇಲೆ ಬಿದ್ದರೇ ನಿರಂತರ ವಿದ್ಯತ್ ಇರುವುತ್ತದೆ. ಜನರಿಗೆ ಅಪಾಯವಾಗಬಹುದು. ಅದನ್ನು ತೆರವುಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಆಲೋಚನೆ ಅಲ್ಲಿನ ಅಧಿಕಾರಿಗಳಿಗೆ ಇಲ್ಲದಿರುವುದು ವಿಪರ್ಯಾಸ.
ಬೇಸಿಗೆ ಹಾಗೂ ಚಳಿಗಾಲದ ಸಂದರ್ಭದಲ್ಲಿ ಪಾಲಿಕೆ ಹಾಗೂ ಅರಣ್ಯ ಅಧಿಕಾರಗಳು ಯಾರೂ ಕೇಳುವುದಿಲ್ಲವೆಂದು ನಗರದಲ್ಲಿನ ಮರಗಳಿಗೆ ಅನಧಿಕೃತವಾಗಿ ಜಾಹೀರಾತುಗಳನ್ನು ಮೊಳೆ ಹೊಡೆಯುವುದು ಹಾಗೂ ತಂತಿಯ ಮೂಲಕ ತಮ್ಮ ಜಾಹೀರಾತುಗಳನ್ನು ಕಟ್ಟಿ ಪ್ರಚಾರ ಪಡೆದುಕೊಳ್ಳುತ್ತಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಅಕ್ರಮ ಜಾಹೀರಾತುಗಳನ್ನು ಪ್ರಕಟಿಸಿದವರ ವಿರುದ್ಧ ಕ್ರಮ ಕೈಗೊಳ್ಳದೇ ನಮಗೇನು ಸಂಬಂಧವಿಲ್ಲದಂತೆ ವರ್ತಿಸುತ್ತಿರುವುದು ಸರಿಯಾದುದ್ದಲ್ಲ. ಆದರೆ ಆ ಮರಗಳು ಮೊಳೆ ಹೊಡೆದಿರು ಹಾಗೂ ಕಟ್ಟಿರುವ ಸ್ಥಳಗಳಲ್ಲಿ ಹುಳುಗಳು ಆಗಿ ಆ ಸ್ಥಳದಲ್ಲಿ ಕೊಳೆತು ಅಥವಾ ಮರದೊಳಗೆ ಸೇರ್ಪಡೆಯಿಂದ ಮರಗಳು ನಾಶವಾಗಿ ಹಾಗೇ ನಿಂತಿರುತ್ತದೆ. ಮಳೆಗಾಲ ಬಂದಾಗ ಮಳೆ ಆ ಸ್ಥಳಗಳಲ್ಲಿ ಹೋದರೆ ಮರಗಳ ಟೊಂಗೆ ನೆಲ್ಲಕ್ಕುರುಳಿ ಬಿಡುತ್ತವೆ. ಇದಷ್ಟೇ ಅಲ್ಲ. ವಿವಿಧ ಸಮಸ್ಯೆಗಳಿಂದಲೂ ಮರಗಳು ನೆಲಕ್ಕುರಳಬಹುದು. ಇದರಿಂದ ಸಾರ್ವಜನಿಕ ತೊಂದರೆ ಆಗುತ್ತದೆ. ಇಷ್ಟೇಲ್ಲ ಗೊತ್ತಿದ್ದ ಅಧಿಕಾರಿಗಳು ಕಟ್ಟುನಿಟ್ಟಾಗಿ ಆದೇಶಗಳನ್ನು ಪಾಲಿಸದೇ ಇರುವುದರಿಂದ ನಗರದ ಎಲ್ಲ ಮರಗಳಿಗೆ ಜಾಹೀರಾತುಗಳು ನೇತು ಹಾಕಲಾಗುತ್ತಿದೆ.
ಇನ್ನು ಗಣೇಶ ಹಬ್ಬ ಆಗಮಿಸುತ್ತಿದೆ. ಮರವಣಿಗೆ ಸಂದರ್ಭದಲ್ಲಿ ಅಡ್ಡಿಯಾಗುವ ಸಾಧ್ಯಗಳಿವೆ ಎಂದು ಅವುಗಳನ್ನು ತೆಗೆಯುತ್ತಾರೆ. ಆದರೆ ನಗರದಲ್ಲಿನ ಉಳಿದ ಅಪಾಯದಂಚಿನ ಮರಗಳನ್ನು ಹಾಗೇ ಬಿಡುತ್ತಾರೆ. ಕೇಳಿದರೇ ಅದು ನಮಗೆ ಬರುವುದಿಲ್ಲ. ಬೇರೆ ಇಲಾಖೆಗೆ ಬರುತ್ತದೆ ಎಂಬ ಹಾರಿಕೆ ಉತ್ತರಗಳನ್ನು ಕೊಡುತ್ತಾರೆ. ಈ ಹಾರಿ ಉತ್ತರಗಳಿಗೆ ಜಿಲ್ಲಾಧಿಕಾರಿಗಳು ಮಂಗಳವಾರ ನಡೆದ ಸಭೆಯಲ್ಲಿ ಅಂತ್ಯ ಹಾಡಿದ್ದಾರೆ. ಎಲ್ಲೆಲ್ಲಿ ಅಪಾಯದ ಅಂಚಿನಲ್ಲಿರುವ ಮರಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ತೆಗೆಯಬೇಕು. ಯಾವ ಇಲಾಖೆಗೆ ಬರುತ್ತದೆಯೋ ಅವರು ಹರಾಜು ಹಾಕಿಕೊಳ್ಳುತ್ತಾರೋ ಅಥವಾ ಬಿಡುತ್ತಾರೋ ಅವರಿಗೆ ಬಿಟ್ಟಿದ್ದು, ಅಪಾಯದಂಚಿನಲ್ಲಿರುವ ಮರಗಳನ್ನು ತೆಗೆಯಬೇಕೆಂದು ಆದೇಶ ಹೊರಡಿಸಿದ್ದಾರೆ. ಆ ಆದೇಶ ಎಷ್ಟುದಿನಗಳವೆರಗೆ ಅರಣ್ಯ ಇಲಾಖೆಯವರು ಪಾಲಿಸುತ್ತಾರೋ ಕಾದು ನೋಡಿಕೊಳ್ಳಬೇಕಿದೆ.

Check Also

ಸಂವಿಧಾನ ಶಿಲ್ಪಿಯ ಮೂರ್ತಿ ಉದ್ಘಾಟನೆಗೆ ಸಿಎಂ

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ,ಭಾರತ ರತ್ನ,ಮಹಾ ಮಾನವತಾ ವಾದಿ,ಡಾ.ಬಾಬಾ ಸಾಹೇಬ ಅಂಬೇಡ್ಕರ್ ಪ್ರತಿಮೆ ಅನಾವರಣ …

Leave a Reply

Your email address will not be published. Required fields are marked *