Breaking News
Home / Breaking News / ಶಿವಕುಮಾರ್ ಶ್ರೀಗಳು ನಮ್ಮ ದಿನಮಾನದ ಸಂತಶ್ರೇಷ್ಠರು-ತೋಂಟದಾರ್ಯ ಶ್ರೀಗಳು

ಶಿವಕುಮಾರ್ ಶ್ರೀಗಳು ನಮ್ಮ ದಿನಮಾನದ ಸಂತಶ್ರೇಷ್ಠರು-ತೋಂಟದಾರ್ಯ ಶ್ರೀಗಳು

ಬೆಳಗಾವಿ: ಸಿದ್ಧಗಂಗಾ ಕ್ಷೇತ್ರದ ಡಾ. ಶಿವಕುಮಾರ ಮಹಾಸ್ವಾಮೀಜಿ ನಮ್ಮ ದಿನಮಾನದ ಸಂತಶ್ರೇಷ್ಠರು ಎಂದು ಗದಗ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಕಂಬನಿ ಮಿಡಿದಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ನಮ್ಮ‌ಮಧ್ಯದಲ್ಲಿ ಬದುಕಿ ಬಾಳಿದ ನಡೆದಾಡುವ ದೇವರು. ಎಂಟು ದಶಕಗಳ ಕಾಲ ಸಿದ್ಧಗಂಗಾಮಠದ ಪೀಠಾಧಿಪತಿಗಳಾಗಿ ಈ ನಾಡಿಗೆ ಸ್ಮರಣೀಯ ಸೇವೆ ಸಲ್ಲಿಸಿದ್ದಾರೆ. ಸ್ವಾತಂತ್ರ್ಯಪೂರ್ವ ಕಾಲದಿಂದಲೇ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಿ ಬಡ ಮಕ್ಕಳಿಗೆ ಅನ್ನ-ಆಶ್ರಯ ನೀಡಿ ವಿದ್ಯಾದಾನ ಮಾಡುತ್ತ ಅವರ ಬಾಳನ್ನು ಬೆಳಗಿದವರು. ಅವರು ಬಸವಾದಿ ಶರಣರ ದಾಸೋಹ ತತ್ತ್ವವನ್ನು ಆಧುನಿಕ ದಿನಮಾನದಲ್ಲಿ ಸಾಕಾರಗೊಳಿಸಿದ ಪುಣ್ಯಪುರುಷರು. ಇಂದು ಅವರು ಬಯಲಿನಲ್ಲಿ ಬಯಲಾದುದು ಸಮಸ್ತ ಜನತೆಯನ್ನು ಶೋಕಸಾಗರದಲ್ಲಿ ಮುಳುಗಿಸಿದಂತಾಗಿದೆ ಎಂದರು.
ಒಬ್ಬ ಮಠಾಧಿಪತಿ ಹೇಗಿರಬೇಕು ಎಂಬುದಕ್ಕೆ ಮಾದರಿ ಎನಿಸಿದವರು ಪೂಜ್ಯ ಡಾ. ಶಿವಕುಮಾರ ಮಹಾಸ್ವಾಮಿಗಳು. ಆಧುನಿಕ ಕಾಲದಲ್ಲಿ ಬಸವಾದಿ ಶರಣರ ದಾಸೋಹ ತತ್ತ್ವಕ್ಕೆ ಬಹುದೊಡ್ಡ ನೆಲೆಯನ್ನು ಶ್ರೀಗಳು ಒದಗಿಸಿದರು. ತಮ್ಮ ಸಾಧನೆ ಸಿದ್ಧಿಗಳ ಮೂಲಕ ಬದುಕಿರುವಾಗಲೇ ಅವರು ದಂತಕತೆಯಾದವರು. ತ್ರಿವಿಧ ದಾಸೋಹಿ, ಕರ್ನಾಟಕ ರತ್ನಗಳಿಂದ ವಿಭೂಷಿತರಾದ ಶ್ರೀಗಳು ಈ ನಾಡಿಗೆ ತನ್ಮೂಲಕ ನಮ್ಮ ರಾಷ್ಟ್ರಕ್ಕೆ ಕೊಟ್ಟ ಕೊಡುಗೆ ಅಪೂರ್ವವಾದುದು. ಅವರ ಬದುಕು ಸಂಪೂರ್ಣವಾಗಿ ಸಮಾಜಕ್ಕೆ ಸಮರ್ಪಿತವಾದುದು. ನೂರಾ ಹನ್ನೆರಡು ವರ್ಷಗಳ ವರೆಗೆ ಕ್ರಿಯಾಶೀಲರಾಗಿ ಬದುಕಿದ ಶ್ರೀಗಳು ತಮ್ಮ ನಡೆ-ನುಡಿ, ಸಾಧನೆ-ಸಿದ್ಧಿಗಳಿಂದ ನಡೆದಾಡುವ ದೇವರೆನಿಸಿದ್ದರು. ಜಾತಿ ಮತ ಧರ್ಮಗಳ ಎಲ್ಲೆಯನ್ನು ಮೀರಿ ಎಲ್ಲರಿಗೂ ಆರಾಧ್ಯರೆನಿಸಿದ್ದರು. ಅವರ ಅಗಲುವಿಕೆ ನಾಡ ಜನತೆಯನ್ನು ಬಹುಕಾಲ ಬಾಧಿಸದಿರದು. ಪೂಜ್ಯರ ಆದರ್ಶದ ಮಾರ್ಗದಲ್ಲಿ ನಾವು ಮುನ್ನಡೆಯುವುದೇ ನಾವು ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿ ಎಂದು ಪೂಜ್ಯ ಶ್ರೀಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಕೇಂದ್ರ‌ ಸರ್ಕಾರ ಅವರಿಗೆ ಮರಣೋತ್ತರ ‘ಭಾರತರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕೆ‌‌‌ ಎಂದು ಕೋರಿದರು.

About BGAdmin

Check Also

ಹೊಂಡದಲ್ಲಿ ಈಜಲು ಹೋಗಿ ನೀರು ಪಾಲಾದ ಬೆಳಗಾವಿಯ ಬಾಲಕ

ಹೊಂಡದಲ್ಲಿ ಈಜಲು ಹೋಗಿ ನೀರು ಪಾಲಾದ ಬೆಳಗಾವಿಯ ಬಾಲಕ ಬೆಳಗಾವಿ- ಬಟ್ಟೆ ತೊಳೆಯಲು ಪಾಲಕರ ಜೊತೆ ಹೋದ ಬಾಲಕ ನೀರಿನ …

Leave a Reply

Your email address will not be published. Required fields are marked *