ಬೆಳಗಾವಿ ಹಲವು ತಿಂಗಳಿನಿಂದ ಬಾಕಿ ಇರುವ ಪ್ರೋತ್ಸಾಹಧನ ಬಿಡುಗಡೆ ಮಾಡಲು, ಕೇಂದ್ರ ಸರಕಾರ ಮಾಸಿಕ ವೇತನ ನಿಗದಿಗೊಳಿಸಬೇಕು ಹಾಗೂ ರಾಜ್ಯ ಸರಕಾರ ವೇತನ ಹೆಚ್ಚಿಸಬೇಕೆಂದು ಆಗ್ರಹಿಸಿ ಶುಕ್ರವಾರ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದವರು ಚನ್ನಮ್ಮ ವೃತ್ತದಿಂದ ಪ್ರತಿಭಟನೆ ನಡೆಸಿದರು. .
ಜುಲೈನಿಂದ ಇಲ್ಲಿಯವರೆಗೆ ರಾಜ್ಯ ಸರಕಾರದಿಂದ ನಿಗದಿ ಪಡಿಸಿದ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ. ಕೂಡಲೇ ಅದನ್ನು ಬಿಡುಗಡೆ ಮಾಡಬೇಕು. ಆಶಾಗಳಿಗೆ ಆಯಾ ತಿಂಗಳ ಕ್ಲೇಮ್ ಹಾಗೂ ರಿಲೀಸ್ ಫಾರ್ಮ್ ಗಳನ್ನು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಪಿಎಚ್ ಸಿಗಳಲ್ಲಿ ಎಎನ್ ಎಂಗಳ ಎಲ್ಲ ರೀತಿಯ ಕಿರುಕುಳ ತಪ್ಪಿಸಲು ಕೇಂದ್ರ ಮತ್ತು ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು. ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ ಸಿಬ್ಬಂದಿಗಳಿಂದ ಆಶಾ ಕಾರ್ಯಕರ್ತರಿಗೆ ನೀಡುತ್ತಿರುವ ಕಿರುಕುಳ ತಪ್ಪಿಸಬೇಕು ಮತ್ತು ಎಲ್ಲ ಅಂಗನವಾಡಿಗಳಲ್ಲಿ ಸುಸಜ್ಜಿತ ವಿಶ್ರಾಂತಿ ಕೊಠಡಿಗಳನ್ನು ಒದಗಿಸಿಕೊಡಬೇಕು.ಸ್ಪೂಟಮ್- ವ್ಯಾಕ್ಸಿನ್ ಕ್ಯಾರಿಯರ್ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಅನಗತ್ಯ ಸರ್ವೆಗಳನ್ನು ತಡೆಗಟ್ಟಿ, ಯಾವುದೇ ಪ್ರೋತ್ಸಾಹ ಧನವಿಲ್ಲದೆ ಕೆಲಸಗಳನ್ನು ನಿಲ್ಲಿಸಬೇಕು. ಇತ್ತೀಚಿಗೆ ಅಭಿಯಾನ ನಿರ್ದೇಶಕರ ಸಮ್ಮುಖದಲ್ಲಿ ನಡೆದ ಆಶಾ ಕುಂದುಕೊರತೆಗಳ ನಿವಾರಣಾ ಸಭೆಯಲ್ಲಿ ಸೂಚಿಸಿದ ಪರಿಹಾರೋಪಾಯಗಳನ್ನು ರಾಜ್ಯ ಸರಕಾರ ಜಾರಿಗೊಳಿಸಬೇಕು. ಇದೀಗ ಆರ್ ಸಿಎಚ್ ಪೋರ್ಟಲ್ ಜಾರಿ ಮಾಡಲಾಗುತ್ತಿದ್ದು, ಇದರಿಂದಾಗಿ ಕೇಂದ್ರ ಪ್ರೋತ್ಸಾಹ ಧನ ಪಾವತಿ ವಿಳಂಬವಾಗುವುದನ್ನು ತಡೆಗಟ್ಟಿ, ಇದಕ್ಕಾಗಿ ಪರ್ಯಾಯ ಮಾರ್ಗದ ಮೂಲಕ ಪ್ರೋತ್ಸಾಹ ಧನ ಪಾವತಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಮನವಿಯಲ್ಲಿ ಆಗ್ರಹಿಸಿದ್ದಾರೆ.
ನಾಗಲಕ್ಷ್ಮೀ ಡಿ, ಲಕ್ಷ್ಮಣ ಜಡಗನ್ನವರ, ಗೀತಾ ರಾಯಗೊಳ ಸೇರಿದಂತೆ ಸಾವಿರಾರು ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.