ಮಾಜಿ ಶಾಸಕ ಅಭಯ ಪಾಟೀಲ ಸಂಬಂಧಿಯಿಂದ ಜೀವ ಬೆದರಿಕೆಯಿದ್ದು,ರಕ್ಷಣೆ ನೀಡುವಂತೆ ಮಹಾನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಸೀಮಾ ಲಾಟ್ಕರ್ ಅವರಿಗೆ ನ್ಯಾಯವಾದಿ ಹರ್ಷವರ್ಧನ್ ಪಾಟೀಲ ಸೋಮವಾರ ದೂರು ಸಲ್ಲಿಸಿದ್ದಾರೆ.
ಸೋಮವಾರ ಬೆಳಗ್ಗೆ ಆಯುಕ್ತರ ಕಚೇರಿಗೆ ತೆರಳಿದ ಹರ್ಷವರ್ಧನ್ ಪಾಟೀಲ, ಮಾಜಿ ಶಾಸಕ ಅಭಯ ಪಾಟೀಲ ಅವರ ಸಹೋದರನ ಪುತ್ರ ತವನ್ ಪಾಟೀಲ, ೆನ್‌ನಲ್ಲಿ ಅವಾಚ್ಯ ಶಬ್ಧಗಳಿಂದ ನಿಂಧಿಸಿ ಜೀವ ಬೆದರಿಕೆಯೊಡ್ಡಿದ್ದು, ನನಗೆ ಭದ್ರತೆ ನೀಡಬೇಕು ಎಂದು ಕೋರಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಶಾಸಕ ಅಭಯ ಪಾಟೀಲ ವಿರುದ್ಧ ಸಾಕಷ್ಟು ಅವ್ಯವಹಾರದ ಆರೋಪಗಳಿವೆ. ಮುಂಬರುವ ಚುನಾವಣೆಯಲ್ಲಿ ದಕ್ಷಿಣ ವಿಧಾನಸಭೆ ಟಿಕೆಟ್‌ಗೆ ಸಂಬಂಧಿಸಿದಂತೆ ಸ್ನೇಹಿತರೊಂದಿಗೆ ಚರ್ಚೆ ನಡೆಯುವಾಗ ನನ್ನ ಅಭಿಪ್ರಾಯ ಮಂಡಿಸಿದೆ. ಸಂವಿಧಾನಾತ್ಮಕವಾಗಿ ಎಲ್ಲರಿಗೂ ಮಾತನಾಡುವ ಹಕ್ಕಿದೆ. ಆದರೆ ಶಹಾಪುರದ ಮಠಗಲ್ಲಿ ನಿವಾಸಿ ತವಣ್ ಪಾಟೀಲ, ದೂರವಾಣಿ ಕರೆ ಮಾಡಿ ಆಕ್ಷೇಪ ವ್ಯಕ್ತಪಡಿಸಿ, ನನ್ನ ಚಿಕ್ಕಪ್ಪ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಪಡೆದು ಗೆಲ್ಲುತ್ತಾರೆ. ನಂತರ ನಿಮ್ಮನ್ನು ಬಿಡುವುದಿಲ್ಲ ಎಂದು ಜೀವ ಬೆದರಿಕೆಯೊಡ್ಡಿದ್ದಾರೆ. ಅಭಯ ಪಾಟೀಲ ಹೆಸರು ಬಳಸಿಕೊಂಡು ಅವಾಚ್ಯ ಶಬ್ಧಗಳಿಂದ ಮಾತನಾಡಿರುವ ತವನ್‌ನಿಂದ ನನ್ನ ಜೀವಕ್ಕೆ ಅಪಾಯವಿದ್ದು, ಭದ್ರತೆ ನೀಡುವಂತೆ ಡಿಸಿಪಿ ಸೀಮಾ ಲಾಟ್ಕರ್ ಅವರಿಗೆ ಕೋರಿದ್ದೇನೆ ಎಂದರು.
ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಡಿಸಿಪಿ ಸೀಮಾ ಲಾಟ್ಕರ್, ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರನ್ನು ರವಾನಿಸಿ, ಪರಿಶೀಲಿಸಲು ಸೂಚಿಸಲಾಗುವುದು ಎಂದರು.