Breaking News

1989 ರಲ್ಲಿ ಅನೀಲ ಪೋತದಾರ ಇಲೆಕ್ಷನ್ ನಿಂತಾಗ ಏನ್ ಆಗಿತ್ತು ಗೊತ್ತಾ??

ಹಿರಿಯರಿಲ್ಲದೇ ಕೇವಲ ಯುವಕರೇ
ಸೇರಿ ಎದುರಿಸಿದ 1989 ರ
ಬೆಳಗಾವಿ ಚುನಾವಣೆ!

1989.ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆ ಸೇರಿಯೇ ಚುನಾವಣೆ.ಆ ವರ್ಷದ ಅಕ್ಟೋಬರ 30 ರಂದು ದೀಪಾವಳಿ.ಕೊತ್ವಾಲ ಬೀದಿಯಲ್ಲಿದ್ದ ನನ್ನ ” ಚಂದರಗಿ ಪ್ರಿಂಟರ್ಸ” ಮುದ್ರಣಾಲಯದಲ್ಲಿ ಪೂಜೆ.ರಸ್ತೆಯ ಮೇಲೆಯೇ ಇಪ್ಪತ್ತು ಮೂವತ್ತು ಖುರ್ಚಿ ಹಾಕಿಸಿದ್ದೆ.ಪ್ರೆಸ್ ಮುಂದೆ ದಿನಾಲೂ ಸಂಜೆ ಮೂವತ್ತರ ಆಸುಪಾಸಿನ ಕನ್ನಡ ಹೋರಾಟಗಾರರು,ರಾಜಕೀಯ ಪಕ್ಷಗಳ ಕಾರ್ಯಕರ್ತರು ಸೇರುವ ಸ್ಥಳವದು.ಪೂಜೆಗೂ ಸೇರಿದ್ದರು.
ನವ್ಹೆಂಬರ್ ನಲ್ಲಿ ನಡೆಯಲಿದ್ದ ಚುನಾವಣೆ ಬಗ್ಗೆ ಚರ್ಚೆ ನಡೆಯಿತು.ಒಂದು ಸಭೆಯನ್ನು ಮಿಲನ್ ಹೊಟೆಲ್ ನಲ್ಲಿ ಕರೆದೇ ಬಿಡೋಣವೆಂದು ತೀರ್ಮಾನಿಸಲಾಯಿತು.ಎಲ್ಲರ ತಲೆಯಲ್ಲಿ ಅನೀಲ ಪೋತದಾರ ಹೆಸರು ಬಂತು.ಆದರೆ ಅವರ ಹೆಸರು ಕೇಳುತ್ತಲೇ ಕನ್ನಡದ ಹಿರಿಯರೆಲ್ಲರಿಂದ ವಿರೋಧ ವ್ಯಕ್ತವಾಯಿತು.
ಹೊಟೆಲ್ ಮಿಲನ್ ಸಭೆಗೆ ಯಾರನ್ನೂ ಅಧ್ಯಕ್ಷರನ್ನಾಗಿ ಮಾಡುವದು? ನಮ್ಮನ್ನು ಬೆಂಬಲಿಸುವ ವ್ಯಕ್ತಿ ಅವರಾಗಿರಬೇಕು ಎಂಬುದು ನಮ್ಮ ಇಚ್ಛೆಯಾಗಿತ್ತು.ಕ್ಲಬ್ ರೋಡ್ ನಲ್ಲಿರುವ ಸವದತ್ತಿಯ ಮಾಜಿ ಶಾಸಕ ಗುಡೂಸಾಬ್ ಟಕ್ಕೇದ್ ರನ್ನು ಕರೆತಂದೆವು.ಸಭೆಯು ಬಿಸಿರಕ್ತದ ಯುವಕರಿಂದ ತುಂಬಿ ಹೋಗಿತ್ತು.ಹಿರಿಯರೆಲ್ಲ ಅನಿಲರನ್ನು ಒಪ್ಪಲಿಲ್ಲ.ನಾವು ನಮ್ಮ ಪಟ್ಟು ಬಿಡಲಿಲ್ಲ.” ಕನ್ನಡದ ಹಿರಿಯರು ಬರಲಿ ಬಿಡಲಿ.ಕನ್ನಡ ಪತ್ರಿಕೆಗಳು ಸಪೋರ್ಟ ಮಾಡಲಿ ಬಿಡಲಿ.ನಾವು ಕರಪತ್ರ ಹಂಚಿತಾದರೂ ಅನಿಲರನ್ನೇ ಅಭ್ಯರ್ಥಿಯನ್ನಾಗಿ ಮಾಡಿಯೇ ತೀರೋಣ” ಎಂಬ ಯುವಕರ ಧ್ವನಿಗೆ ಸಭೆಯಲ್ಲಿ ಯಾರೂ ವಿರೋಧ ಮಾಡುವ ಧೈರ್ಯ ಮಾಡಲಿಲ್ಲ.ಅಧ್ಯಕ್ಷತೆ ವಹಿಸಿದ್ದ ಟಕ್ಕೇದರು ಅನಿಲರ ಹೆಸರನ್ನೇ ಪ್ರಕಟಿಸಿದರು.
ದೇವೇಗೌಡರ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಅನಿಲರನ್ನು ಕಣಕ್ಕಿಳಿಸುವ ನಿರ್ಧಾರ ಕೈಕೊಂಡೆವು.ಜನತಾ ದಳದ ನಾಯಕರಾಗಿದ್ದ ಅನಿಲರ ಚಿಕ್ಕಪ್ಪ ರಾಮಭಾವು ಪೋತದಾರರಿಗೆ ಎಲ್ಲಿಲ್ಲದ ಸಂಕಟವಾರಂಭವಾಯಿತು.ಜನತಾ ದಳದ ಅಭ್ಯರ್ಥಿಯನ್ನಾಗಿ ಅನಿಲನ ಕಾಕು ಆಗಿದ್ದ ನ್ಯಾಯವಾದಿ ಆಶಾಬಾಯಿ ಪೋತದಾರ ಅವರನ್ನು ಕಣಕ್ಕಿಳಿಸಿಬಿಟ್ಟರು!!
ಖಡೇಬಜಾರದ ಶಿವಾನಂದ ಥೇಟರ್ ನಮ್ಮ ಪ್ರಚಾರ ಕಾರ್ಯಾಲಯ.ಓಣಿ ಓಣಿಗಳಲ್ಲಿ ಪ್ರಚಾರ ಸಭೆಗಳು.ನಮ್ಮಿಂದ ಹಿರಿಯ ಕನ್ನಡ ಹೋರಾಟಗಾರರು ದೂರವೇ ಉಳಿದರು.ಎಮ್.ಇ.ಎಸ್.ದಿಂದ ಬಿ.ಆರ್.ಮಹಾಗಾವಕರ ಕಣದಲ್ಲಿದ್ದರು.ಎಲ್ಲೆಲ್ಲೂ ಅನಿಲರ ಗಾಳಿ ಬೀಸತೊಡಗಿತು.
ಲೋಕಸಭೆ ಸ್ಥಾನಕ್ಕೆ ಜನತಾ ದಳದಿಂದ ಅಮರಸಿಂಹ ಪಾಟೀಲ,ಸಮಾಜವಾದಿ ಜನತಾದಳದಿಂದ ಶಿವಪುತ್ರಪ್ಪ ನಾವಲಗಟ್ಟಿ ,ಕಾಂಗ್ರೆಸ್ ದಿಂದ ಎಸ್.ಬಿ.ಸಿದ್ನಾಳ ಸ್ಪರ್ಧಿಸಿದ್ದರು.ನಾವು ಕೆಲವರು ಲೋಕಸಭೆ ಚುನಾವಣೆಗಾಗಿ ಅಮರಸಿಂಹ ಪ್ರಚಾರ ಮಾಡಿದೆವು.” ನಾವು ನಿಮ್ಮ ಪ್ರಚಾರ ಮಾಡುತ್ತೇವೆ.ನೀವು ಬೆಳಗಾವಿಯಲ್ಲಿ ನಿಮ್ಮ ಪಕ್ಷದ ಆಶಾಬಾಯಿ ಪ್ರಚಾರ ಮಾಡದೇ ಅನಿಲರ ಪ್ರಚಾರ ಮಾಡಿ” ಎಂದು ನಾನು ಅಮರ ಹಾಗೂ ಅವರ ತಂದೆ ವಸಂತರಾವ ಪಾಟೀಲರನ್ನು ಕೋರಿದೆ.ಅವರೂ ಒಪ್ಪಿದರು.
ಇತ್ತ ರಾಮಭಾವು ಆಶಾಬಾಯಿ ಪ್ರಚಾರಕ್ಕಾಗಿ ರಾಮಕೃಷ್ಣ ಹೆಗಡೆಯವರನ್ನು ಕರೆಸಿ ಟಿಳಕ ಚೌಕದಲ್ಲಿ ಬಹಿರಂಗ ಭಾಷಣ ಏರ್ಪಡಿಸಲು ತಯಾರಿ ನಡೆಸಿದ್ದು ನನಗೆ ಗೊತ್ತಾಯಿತು.ದಿನವೂ ನಿಗದಿಯಾಯಿತು.ಹಿಂದಿನ ದಿನ ರಾತ್ರಿ ವಿಜಾಪುರದಲ್ಲಿ ಹೆಗಡೆಯವರ ವಾಸ್ತವ್ಯ ಮಾಡಿದ್ದರು.ಅವರೊಂದಿಗೆ ವಸಂತರಾವ ಇದ್ದರು.ಹೆಗಡೆಯವರನ್ನು ಬೆಳಗಾವಿಗೆ ಕರೆತರದಂತೆ ಅವರಿಗೆ ಆಗ್ರಹಿಸಿದೆ.ಅವರೂ ಒಪ್ಪಿದರು.ಹೆಗಡೆಯವರ ಬೆಳಗಾವಿ ಭೆಟ್ಟಿ ರದ್ದಾಗಿದ್ದೂ ಸಹ ಜನತಾ ದಳದ ಜಿಲ್ಲಾಧ್ಯಕ್ಷ ಎನ್.ಬಿ.ಮತ್ತಿಕೊಪ್ಪರಿಗೂ ಗೊತ್ತಿರಲಿಲ್ಲ.ಬೆಳಿಗ್ಯೆ 6 ಗಂಟೆಗೆ ರಿಕ್ಷಾವೊಂದು ಅನೌನ್ಸಮೆಂಟ್ ಆರಂಭಿಸಿ,” ಮುಂಜಾನೆ 9 ಗಂಟೆಗೆ ಟಿಳಕ ಚೌಕದಲ್ಲಿ ರಾಮಕೃಷ್ಣ ಹೆಗಡೆಯವರ ಭಾಷಣ ಇದೆ” ಎಂದು ಹೇಳುತ್ತ ತಿರುಗುತ್ತಿತ್ತು.ರಾಘವೇಂದ್ರ ಜೋಶಿಯವರು ನನಗೆ ಫೋನ್ ಮಾಡಿ ,ಹೆಗಡೆಯವರು ಬಂದರೆ ನಿಮಗೆ ತೊಂದರೆಯಾಗುತ್ತದೆ ಎಂದರು.ಹೆಗಡೆಯವರ ಬೆಳಗಾವಿ ಭೆಟ್ಟಿ ರದ್ದಾಗಿದ್ದನ್ನು ಅವರಿಗೆ ತಿಳಿಸಿದಾಗ ಅವರಿಗೂ ಅಚ್ಚರಿಯಾಯಿತು!
ಚುನಾವಣೆಯ ಕೊನೆಕೊನೆಗೆ ನಮ್ಮ ಗಾಳಿ ನೋಡಿ ಕನ್ನಡದ ಹಿರಿಯರೆಲ್ಲರೂ ನಮ್ಮ ಜೊತೆಗೆ ಬಂದರು.ಎಮ್.ಇ.ಎಸ್. ನಾಯಕರೂ ಗಾಬರಿಯಾದರು.ಅವರ ಬಂಡುಕೋರ ಅಭ್ಯರ್ಥಿಯಾಗಿದ್ದ ದೀಪಕ ದಳವಿ ಹತ್ತು ಸಾವಿರ ಮತ ಪಡೆದರು.ನಮ್ಮ ಅಭ್ಯರ್ಥಿ 29809 ಹಾಗೂ ಮಹಾಗಾವಕರ 35196 ಮತಗಳನ್ನು ಪಡೆದರು.ರಾಮಭಾವೂ ನಿಲ್ಲಿಸಿದ್ದ ಆಶಾಬಾಯಿ ಕೇವಲ ಐದೇ ಸಾವಿರ ಮತ ಪಡೆದರು.ಮತ ಎಣಿಕೆಯ ಮೊದಲ ಏಳು ಸುತ್ತಿನವರೆಗೂ ಅನಿಲರೇ ಮುಂದಿದ್ದರು.ಕೊನೆಯ ಎರಡು ಸುತ್ತಿನವರೆಗೂ ಎಮ್ ಇ ಎಸ್ ಮುನ್ನಡೆ ಸಾಧಿಸಿತು.
ನಮ್ಮ ಯುವಕರ ಪಡೆಯ ಉತ್ಸಾಹ,ಛಲ ಕಂಡ ಹಿರಿಯ ಪತ್ರಕರ್ತ ದಿ.ಆರ್.ಎಚ್.ಕುಲಕರ್ಣಿ” ಚಂದರಗಿ ಹ್ಯಾಟ್ಸ ಆಫ್ ಯು” ಎಂದು ಬೆನ್ನು ಚಪ್ಪರಿಸಿದ್ದರು.

ಅಶೋಕ ಚಂದರಗಿ

Check Also

ಸಂಘ ದೋಷ, ಗೆಳೆಯನ ಜೊತೆ ಸೇರಿ ಗಂಡನ ಮರ್ಡರ್ ಮಾಡಲು ಸುಫಾರಿ ಕೊಟ್ಟ ಹೆಂಡತಿ…..!!!

ಬೆಳಗಾವಿ-ಅದೊಂದು ಸುಖ ಸಂಸಾರವಾಗಿತ್ತು ಸಾಲಕ್ಕಾಗಿ ಆ ಸಂಘ ಈ ಸಂಘವೆಂದು ಅಲೆದಾಡಿದ ಮನೆಯ ಯಜಮಾನಿ ಯುವಕನ ಜೊತೆ ಗೆಳೆತನ ಮಾಡಿ …

Leave a Reply

Your email address will not be published. Required fields are marked *