ಬೆಳಗಾವಿ:ಭಾರತದಲ್ಲಿ ಜಾತಿ, ಭಾಷೆ, ಗಡಿ ಮತ್ತು ಸಾಂಸ್ಕ್ರತಿಕ ಭಿನ್ನಾಭಿಪ್ರಾಯಗಳಿಂದ ಆಂತರಿಕ ಅಶಾಂತಿ ಕಾಡುತ್ತಿದೆ ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶ ಅಶೋಕ ನಿಜಗನ್ನವರ ತಿಳಿಸಿದರು.
ಇಂದು ನಗರದ ಡಿಎಆರ್ ಹುತಾತ್ಮ ಸ್ಮಾರಕ ಮೈದಾನದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿ ಇಂದು ದೇಶಕ್ಕೆ ಬಾಹ್ಯ ಶಕ್ತಿಗಿಂತ ಆಂತರಿಕ ದುಷ್ಟ ಸ್ವಹಿತಾಸಕ್ತಿಗಳ ಆಟಾಟೋಪ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಪ್ರತಿಯೊಂದು ದೇಶ ಶಾಂತಿಯ ಜೀವನ ನಡೆಸಲು ಪೊಲೀಸ್ ವ್ಯವಸ್ಥೆಯ ದಕ್ಷತೆ ಹೆಚ್ಚು ಪ್ರಸ್ತುತ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದೇಶಾದ್ಯಂತ ಹುತಾತ್ಮರಾದ ಪೊಲೀಸ್ ಸಿಬ್ಬಂಧಿಯ ಹೆಸರುಗಳನ್ನು ಎಸ್ ಪಿ ಡಾ. ರವಿಕಾಂತೇಗೌಡ ವಾಚಿಸಿದರು. ಹುತಾತ್ಮ ಧ್ವಜವನ್ನು ಅರ್ಧಕ್ಕೆ ಇಳಿಸಿ, ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಎನ್. ಜಯರಾಮ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ್ದರು. ಪೊಲೀಸ್ ಆಯುಕ್ತ ಟಿ. ಜೆ. ಕೃಷ್ಣಭಟ್, ಡಿಸಿಪಿ ಜಿ. ರಾಧಿಕಾ, ಡಿಸಿಪಿ ಕ್ರೈಂ ಅಮರನಾಥರೆಡ್ಡಿ ಮತ್ತಿತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.