Breaking News

ಅಗಸರು, ಕ್ಷೌರಿಕರಿಗೆ 5 ಸಾವಿರ ನೆರವು- ಜಿಲ್ಲಾಧಿಕಾರಿ ಸಭೆ

ಬೆಳಗಾವಿ,-ಕೋವಿಡ್-೧೯ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅಗಸರು ಮತ್ತು ಕ್ಷೌರಿಕ ವೃತ್ತಿದಾರರಿಗೆ ಸರ್ಕಾರ ಘೋಷಿಸಿರುವ ಐದು ಸಾವಿರ ರೂಪಾಯಿ ನೆರವನ್ನು ಯಾವುದೇ ವಿಳಂಬವಿಲ್ಲದೇ ಅರ್ಹರಿಗೆ ತಕ್ಷಣ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕೋವಿಡ್-೧೯ ಹಿನ್ನೆಲೆಯಲ್ಲಿ ಅಗಸರು ಮತ್ತು ಕ್ಷೌರಿಕರಿಗೆ ಒಂದು ಬಾರಿ ಪರಿಹಾರವಾಗಿ 5 ಸಾವಿರ ರೂಪಾಯಿ ನೆರವು ಒದಗಿಸುವ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಜೂ.17) ನಡೆದ ಜಿಲ್ಲಾಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರದ ನೆರವು ಪಡೆಯಲು ಅಗತ್ಯವಿರುವ ವೃತ್ತಿ ದೃಢೀಕರಣ ಪತ್ರವನ್ನು ನೀಡಲು ವಿನಾಕಾರಣ ವಿಳಂಬ ಮಾಡುವ ಸ್ಥಳೀಯ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ನೆರವು ಪಡೆಯಲು ಲೈಸೆನ್ಸ್ ಕಡ್ಡಾಯವಲ್ಲ:

ಸರ್ಕಾರದ ನೆರವು ಪಡೆಯಲು ವೃತ್ತಿ ಲೈಸೆನ್ಸ್ ಕಡ್ಡಾಯವಲ್ಲ. ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಜೂನ್ 30 ಕಡೆಯ ದಿನವಾಗಿದೆ. ವೃತ್ತಿಯ ಲೈಸೆನ್ಸ್ ಇಲ್ಲವೆಂಬ ಕಾರಣಕ್ಕೆ ವೃತ್ತಿಯ ದೃಢೀಕರಣ ಪತ್ರ ನೀಡಲು ಯಾವುದೇ ಕಾರಣಕ್ಕೂ ನಿರಾಕರಿಸಬಾರದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸೇವಾಸಿಂಧು ಪೋರ್ಟಲ್ ನಲ್ಲೇ ಆನ್ ಲೈನ್ ಅರ್ಜಿ ಸಲ್ಲಿಸಬೇಕಿರುವುದರಿಂದ ಮುದ್ರಿತ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಬಾರದು.
ವೃತ್ತಿಯ ದೃಢೀಕರಣ ಪ್ರಮಾಣಪತ್ರದ ನಮೂನೆಯನ್ನು ಮಾತ್ರ ಎಲ್ಲರಿಗೂ ಸುಲಭವಾಗಿ ಲಭಿಸುವಂತೆ ಹೆಚ್ಚಿನ ಸಂಖ್ಯೆಯಲ್ಲಿ ಮುದ್ರಿಸಿ ಎಲ್ಲರಿಗೂ ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ದೃಢೀಕರಣ ಪತ್ರ ಪಡೆಯುವುದಕ್ಕೆ ಸಂಬಂಧಿಸಿದಂತೆ ತೊಂದರೆಗಳಿದ್ದರೆ ಕಾರ್ಮಿಕ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ಕೋವಿಡ್-೧೯ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆಯಿಂದ ಕ್ಷೌರಿಕರು, ಅಗಸರು ಸೇರಿದಂತೆ ಅನೇಕ ವೃತ್ತಿಯವರಿಗೆ ತೀವ್ರ ತೊಂದರೆಯಾಗಿತ್ತು. ಇದನ್ನು ಪರಿಗಣಿಸಿ ಸರ್ಕಾರ ರೈತರು, ನೇಕಾರರು, ಕಾರ್ಮಿಕರು, ಹೂ ಬೆಳೆಗಾರರಿಗೆ ನೆರವು ಘೋಷಿಸಿದೆ.
ಅದೇ ರೀತಿ ಅಗಸ ಮತ್ತು ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವವರಿಗೆ ಕೂಡ ಸರ್ಕಾರ ಐದು ಸಾವಿರ ರೂಪಾಯಿ ನೆರವು ಘೋಷಿಸಿದೆ.

ಅರ್ಹರಿಗೆ ಈ ಯೋಜ‌ನೆ ತಲುಪಿಸಲು ಅಧಿಕಾರಿಗಳು ಶ್ರಮಿಸಬೇಕು. ಮಧ್ಯವರ್ತಿಗಳ ಹಾವಳಿಗೆ ಅವಕಾಶ ನೀಡದೇ ಅರ್ಹ ಜನರಿಗೆ ಸರ್ಕಾರದ ನೆರವು ಸಂಪೂರ್ಣವಾಗಿ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು.

ದೃಢೀಕರಣ ಪತ್ರ ನೀಡುವ ಅಧಿಕಾರಿಗಳು ಅರ್ಜಿದಾರರನ್ನು ವಿನಾಕಾರಣ ಅಲೆದಾಡಿಸದೇ ನಿಯಮಾವಳಿ ಪ್ರಕಾರ ಪರಿಶೀಲನೆ ಕೈಗೊಂಡು ಕೂಡಲೇ ಅರ್ಜಿದಾರರಿಗೆ ಪರಿಹಾರಧನವನ್ನು ಒದಗಿಸಲು ಕ್ರಮಕೈಗೊಳ್ಳಬೇಕು.

ವಿನಾಕಾರಣ ವಿಳಂಬ ಮಾಡದೇ ಸಂಕಷ್ಟದಲ್ಲಿ ಇರುವವರಿಗೆ ಸಕಾಲಕ್ಕೆ ನೆರವಾಗಬೇಕು ಎಂದು ಕಾರ್ಮಿಕ ಇಲಾಖೆ ಸೇರಿದಂತೆ ಸಂಬಂಧಿಸಿದ ಇತರೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅರ್ಜಿ ಸಲ್ಲಿಸಲು ಜೂನ್ 30 ಕಡೆಯ ದಿನಾಂಕ ಆಗಿರುವುದರಿಂದ ಕಡೆಯ ದಿನದವರೆಗೆ ಕಾಯದೇ ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಉಪ ಕಾರ್ಮಿಕ ಆಯುಕ್ತರಾದ ವೆಂಕಟೇಶ ಶಿಂಧಿಹಟ್ಟಿ ಮಾತನಾಡಿ, ಸರ್ಕಾರದ ನೆರವು ಪಡೆಯಲು ಕಡ್ಡಾಯವಾಗಿ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಬೇಕು. ಜಾತಿಯ ಬದಲು ವೃತ್ತಿ ಆಧಾರಿತವಾಗಿ ಸರ್ಕಾರ ನೆರವು ನೀಡುತ್ತಿದೆ. ಅಗತ್ಯ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.

ಉದ್ಯೋಗ ಪ್ರಮಾಣ ಪತ್ರವನ್ನು ಕಾರ್ಮಿಕ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಕಂದಾಯ ಅಧಿಕಾರಿ ಅಥವಾ ನಿರೀಕ್ಷಕರು, ಗ್ರಾಮ ಪಂಚಾಯತಿ ಕಾರ್ಯದರ್ಶಿಗಳು ಪ್ರಮಾಣಪತ್ರ ನೀಡಲಿದ್ದಾರೆ.
ನಂತರ ಡಿಬಿಟಿ ಮೂಲಕ ನೇರವಾಗಿ ಅರ್ಜಿದಾರರ ಖಾತೆಗೆ ನೆರವು ಸಂದಾಯವಾಗಲಿದೆ.
ಜಿಲ್ಲೆಯಲ್ಲಿ ಇದುವರೆಗೆ 1226 ಕ್ಷೌರಿಕರು ಮತ್ತು 311 ಅಗಸರು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಉಳಿದವರು ಕೂಡ ಅಗತ್ಯ ದಾಖಲೆಗಳೊಂದಿಗೆ ಜೂನ್ 30 ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.

ಅರ್ಜಿಯ ಜತೆಗೆ ಕಡ್ಡಾಯವಾಗಿ ಕೆಲವರು ಲೈಸೆನ್ಸ್ ಕೇಳುತ್ತಿರುವುದರಿಂದ ಅರ್ಜಿ ಸಲ್ಲಿಸಲು ವಿಳಂಬವಾಗುತ್ತಿದೆ ಈ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಹಡಪದ ಸಮಾಜದ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.

ಮಹಾನಗರ ಪಾಲಿಕೆ ಆಯುಕ್ತರಾದ ಜಗದೀಶ್ ಕೆ.ಎಚ್., ಸಹಾಯಕ ಕಾರ್ಮಿಕ ಆಯುಕ್ತ ಡಿ.ಜಿ.ನಾಗೇಶ್, ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ತರನ್ನುಮ್, ಮಲ್ಲಿಕಾರ್ಜುನ ಜೋಗೂರ ಮತ್ತಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಅಗಸರ ಮತ್ತು ಕ್ಷೌರಿಕ ಸಮಾಜದ ಮುಖಂಡರು ಸಭೆಯಲ್ಲಿ ಪಾಲ್ಗೊಂಡು ಸಲಹೆಗಳನ್ನು ನೀಡಿದರು.
****

ನೆರವು ಯಾರಿಗೆ? ಅರ್ಜಿ ಸಲ್ಲಿಸುವುದು ಹೇಗೆ?

ಅಗಸರು ಮತ್ತು ಕ್ಷೌರಿಕ ವೃತ್ತಿಯಲ್ಲಿ ಇರುವವರು ಒಂದು ಬಾರಿ ಐದು ಸಾವಿರ ನೆರವು ಪಡೆಯಬಹುದು.

* ವಯೋಮಿತಿ 18 ರಿಂದ 65 ವರ್ಷ
* ಕುಟುಂಬದಲ್ಲಿ ಒಬ್ಬರಿಗೆ ಮಾತ್ರ
* ಕರ್ನಾಟಕದಲ್ಲಿ ಇರುವ ಹೊರ ರಾಜ್ಯದ ಕಾರ್ಮಿಕರು ಅರ್ಹರು
* ಬಿಪಿಎಲ್ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು
* ಆಧಾರ್ ಸಂಖ್ಯೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಹೊಂದಿರುವುದು ಕಡ್ಡಾಯ
* ವೃತ್ತಿ ನಿರ್ವಹಿಸುತ್ತಿರುವ ಕುರಿತು ಅಧಿಕಾರಿಗಳಿಂದ ಪಡೆದ ಪ್ರಮಾಣಪತ್ರದೊಂದಿಗೆ sevasindhu.Karnataka. gov.in ಮೂಲಕ ಅರ್ಜಿ ಸಲ್ಲಿಸಬೇಕು
* ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ/ತಾಲ್ಲೂಕು ಕಾರ್ಮಿಕ ಅಧಿಕಾರಿಗಳನ್ನು ಸಂಪರ್ಕಿಸವುದು

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *