ಸಿಎಂ ವಿಡಿಯೋ ಸಂವಾದ; ಮೇ 4 ರಿಂದ ಬಹುತೇಕ ಚಟುವಟಿಕೆ ಆರಂಭ
ವಲಸೆ ಕಾರ್ಮಿಕರ ಒಂದು ಕಡೆ ಸಾರಿಗೆ ವೆಚ್ಚ ಭರಿಸಲು ಸರ್ಕಾರದ ನೆರವು: ಸಿಎಂ ಭರವಸೆ
ಬೆಳಗಾವಿ,-ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ತಮ್ಮ ಊರಿಗೆ ತೆರಳಲು ಸಜ್ಜಾಗಿರುವ ವಲಸೆ ಕಾರ್ಮಿಕರಿಂದ ಒಂದು ಕಡೆ ಪ್ರಯಾಣ ದರ ಪಡೆದುಕೊಂಡು ಅವರನ್ನು ಕಳಿಸುವ ವ್ಯವಸ್ಥೆ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ದೇಶನ ನೀಡಿದರು.
ಜಿಲ್ಲೆಯ ಜನಪ್ರತಿನಿಧಿಗಳ ಜತೆ ಶನಿವಾರ(ಮೇ 2) ಅವರು ವಿಡಿಯೋ ಸಂವಾದ ನಡೆಸಿದರು.
ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳಿಸಲು ಎರಡೂ ಕಡೆ ಪ್ರಯಾಣ ದರ ಪಡೆದುಕೊಂಡು ಕಳಿಸಲು ನಿರ್ಧರಿಸಲಾಗಿತ್ತು.
ಕಾರ್ಮಿಕರ ನಿಧಿಯಿಂದ ಸಾರಿಗೆ ಇಲಾಖೆಗೆ ನೀಡಿದರೆ ಆ ಹಣದಲ್ಲಿ ವಲಸೆ ಕಾರ್ಮಿಕರನ್ನು ಅವರವರ ಜಿಲ್ಲೆಗಳಿಗೆ ಕಳಿಸಲು ಅನುಕೂಲವಾಗುತ್ತದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಆದೇಶ ನೀಡುವಂತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಕೋರಿದರು.
ಕಾರ್ಮಿಕ ಇಲಾಖೆಗೆ ನಿರ್ದೇಶನ ನೀಡಿದರೆ ಕಾರ್ಮಿಕ ನಿಧಿ ಸಾರಿಗೆ ಇಲಾಖೆಗೆ ನೀಡಿದರೆ ಅನುಕೂಲವಾಗಲಿದೆ ಎಂದು ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಒಂದು ಕಡೆ ಪ್ರಯಾಣ ದರ ಪಡೆದುಕೊಂಡು ಕಾರ್ಮಿಕರನ್ನು ಕಳಿಸುವ ಬಗ್ಗೆ ತಿಳಿಸಿದರು.
ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು, ಸದ್ಯಕ್ಕೆ ಒಂದು ಕಡೆ ಪ್ರಯಾಣ ದರ ಪಡೆದು ಕಾರ್ಮಿಕರನ್ನು ಅವರ ಊರಿಗೆ ಕಳಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ನಂತರ ಸಾರಿಗೆ ಸಂಸ್ಥೆಗೆ ಕಾರ್ಮಿಕ ಇಲಾಖೆಯ ವತಿಯಿಂದ ಕಾರ್ಮಿಕ ನಿಧಿ ಒದಗಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಮೇ 4 ರಿಂದ ಬಸ್ ಸಂಚಾರ ಆರಂಭಗೊಳ್ಳಲಿದ್ದು, ಇದಾದ ಬಳಿಕ ಸಮಸ್ಯೆ ಪರಿಹಾರಗೊಳ್ಳಲಿದೆ ಎಂದು ಸಿಎಂ ಹೇಳಿದರು.
ಕೇಂದ್ರ ಮಾರ್ಗಸೂಚಿ ಪ್ರಕಾರ ಮೇ 4 ರಿಂದ ಆರಂಭ:
ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ನಿಗದಿಪಡಿಸಿರುವ ಚಟುವಟಿಕೆಗಳಿಗೆ ಆಯಾ ಝೋನ್ ಗಳಲ್ಲಿ ಅವಕಾಶ ನೀಡಲಾಗಿದೆ.
ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಪ್ರಕರಣಗಳು ಕಂಡುಬಂದಿರುವುದರಿಂದ ಬೆಳಗಾವಿ ಸೇರಿದಂತೆ ಗಡಿ ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಬೇಕು ಎಂದು ಸೂಚನೆ ನೀಡಿದರು.
ಈಗಾಗಲೇ ಆಗಮಿಸಿದವರಿಗೆ ಸೂಕ್ತ ಆರೋಗ್ಯ ತಪಾಸಣೆ ಮಾಡಬೇಕು. ಇನ್ನು ಮುಂದೆ ಯಾರೂ ಕೂಡ ಗಡಿ ಜಿಲ್ಲೆ ಪ್ರವೇಶಿಸದಂತೆ ಸೂಕ್ತ ಕ್ರಮ ವಹಿಸಬೇಕು.
ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು.
ನೇಕಾರರ ಸಮಸ್ಯೆಗಳನ್ನು ಪರಿಹರಿಸಲು ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮೇ 4 ರ ನಂತರ ಚಟುವಟಿಕೆ ಆರಂಭ-ಶೆಟ್ಟರ್:
ಬೆಳಗಾವಿ ಜಿಲ್ಲೆಯ ಒಂಬತ್ತು ತಾಲ್ಲೂಕಿನಲ್ಲಿ ಕೋವಿಡ್ ಪ್ರಕರಣ ಇಲ್ಲ. ಆದ್ದರಿಂದ ಮೇ 4 ರಿಂದ ಎಲ್ಲ ಚಟುವಟಿಕೆಗಳನ್ನು ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ತಿಳಿಸಿದರು.
ಮಹಾರಾಷ್ಟ್ರದ ಲ್ಲಿ ಅತೀ ಹೆಚ್ಚು ಪ್ರಕರಣಗಳು ಇರುವುದರಿಂದ ಸದ್ಯಕ್ಕೆ ಅಲ್ಲಿಂದ ಯಾರನ್ನೂ ಕರೆತರುವ ಅಗತ್ಯವಿಲ್ಲ. ಆದರೆ ಗ್ರೀನ್ ಝೋನ್ ಆಗಿರುವ ಗೋವಾ ರಾಜ್ಯದಿಂದ ಆಗಮಿಸಲು ಅವಕಾಶ ನೀಡಲಾಗುವುದು ಎಂದರು.
★* ನರೇಗಾ ಜಾಬ್ ಕಾರ್ಡ ಇರುವ ಹಿರೇಬಾಗೇವಾಡಿ ಪ್ರತಿ ಕುಟುಂಬಕ್ಕೆ 2 ಸಾವಿರ- ಸಿಎಂ ಸೂಚನೆ:
ಸರ್ಕಾರದ ಮಾರ್ಗಸೂಚಿ ಪ್ರಕಾರ ಜಿಲ್ಲಾಡಳಿತ ಉತ್ತಮ ಕೆಲಸ ಮಾಡುತ್ತಿದೆ. ಆದರೆ ತಮ್ಮ ಕ್ಷೇತ್ರದ ಹಿರೇಬಾಗೇವಾಡಿಯಲ್ಲಿ ಒಂದೇ ಊರಿನಲ್ಲಿ 37 ಪ್ರಕರಣಗಳು ಕಂಡುಬಂದಿವೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಇದರಿಂದ ಜನರು ಅನಿವಾರ್ಯವಾಗಿ ಬೀದಿಗೆ ಇಳಿಯುತ್ತಿದ್ದಾರೆ ಎಂದು ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ್ ವಿವರಿಸಿದರು.
ಗ್ರಾಮದ 4000 ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಆದ್ದರಿಂದ ಸರ್ಕಾರದ ವತಿಯಿಂದಲೇ ಹಾಲು, ದಿನಸಿ ಹಾಗೂ ಜಾನುವಾರುಗಳಿಗೆ ಮೇವು ಒದಗಿಸಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಕಾರ್ಮಿಕ ಇಲಾಖೆಯ ವತಿಯಿಂದ ಮಾನವೀಯತೆ ದೃಷ್ಟಿಯಿಂದ ಎಲ್ಲ ಕುಟುಂಬಗಳಿಗೆ ಕಿಟ್ ನೀಡಲು ಮನವಿ ಮಾಡಿಕೊಂಡರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಈಗಾಗಲೇ ಪಡಿತರ ಮತ್ತು ಪಿಂಚಣಿ ಕೂಡ ಎರಡು ತಿಂಗಳು ಮುಂಚಿತವಾಗಿ ನೀಡಲಾಗಿದೆ. ದಾನಿಗಳಿಂದ ನೆರವು ಪಡೆದುಕೊಂಡು ಜನರಿಗೆ ನೆರವಾಗಬೇಕು ಎಂದು ಸಲಹೆ ನೀಡಿದರು.
ನರೇಗಾ ಜಾಬ್ ಕಾರ್ಡ ಇರುವ ಹಿರೇಬಾಗೇವಾಡಿಯ ಪ್ರತಿ ಕುಟುಂಬಕ್ಕೆ ಕಾರ್ಮಿಕ ಇಲಾಖೆಯ ವತಿಯಿಂದ ತಲಾ ಎರಡು ಸಾವಿರ ರೂಪಾಯಿ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದರು.
ಈ ಬಗ್ಗೆ ಸ್ಥಳೀಯವಾಗಿ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವಂತೆ ತಿಳಿಸಿದರು.
ಹಣದ ಬದಲು ಅಗತ್ಯವಿರುವ ಆಹಾರಧಾನ್ಯಗಳ ಕಿಟ್ ನೀಡುವ ಕುರಿತು ಬಗ್ಗೆ ಕೂಡ ಚರ್ಚೆ ನಡೆಸಲಾಯಿತು.
ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ, ವಿಧಾನ ಸಭಾ ಉಪ ಸಭಾಪತಿ ಆನಂದ ಮಾಮನಿ, ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ್ ಕೋರೆ, ಶಾಸಕರಾದ ಪಿ.ರಾಜೀವ, ದುರ್ಯೋಧನ ಐಹೊಳೆ, ಅನಿಲ್ ಬೆನಕೆ, ಲಕ್ಷ್ಮೀ ಹೆಬ್ಬಾಳಕರ್, ಮಹಾಂತೇಶ ದೊಡಗೌಡ್ರ, ಮಹೇಶ್ ಕುಮಠಳ್ಳಿ, ಮಹಾದೇವಪ್ಪ ಯಾದವಾಡ, ಮಹಾಂತೇಶ ಕೌಜಲಗಿ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಜಿಲ್ಲೆಯಲ್ಲಿ ೧೧ ಕಂಟೈನ್ಮೆಂಟ್ ಝೋನ್ ಇದ್ದು, ಅದರಲ್ಲಿ ಬೆಳಗುಂದಿಯನ್ನು ಡಿನೋಟಿಫೈ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಗರಿಷ್ಠ ಜನರ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿದೆ ಎಂದು ವಿವರಿಸಿದರು.
ಹಿರೇಬಾಗೇವಾಡಿಯಲ್ಲಿ ಕಾರ್ಮಿಕ ಇಲಾಖೆಯ ವತಿಯಿಂದ 2000 ಕಿಟ್ ವಿತರಿಸಲಾಗುತ್ತಿದೆ ಎಂದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ.ಅತೀಕ್,ಜಿಲ್ಲೆಯ ಕೋವಿಡ್-೧೯ ಉಸ್ತುವಾರಿ ಅಧಿಕಾರಿ ರಾಜೇಂದ್ರ ಚೋಳನ್, ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಐಜಿಪಿ ರಾಘವೇಂದ್ರ ಸುಹಾಸ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. , ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮತ್ತಿತರರು ಉಪಸ್ಥಿತರಿದ್ದರು.
***