ಬೆಳಗಾವಿ ಮಹಾನಗರದಲ್ಲಿ ಹನಿಟ್ರ್ಯಾಪ್ ದಂಧೆ, ಜೋರಾಗಿದೆ. ಮಲಗಿದ್ದ ವೇಳೆ ಭುಜ ಮುಟ್ಟಿ ಎಬ್ಬಿಸಿದ ವಿಡಿಯೋವನ್ನಿಟ್ಟುಕೊಂಡು 25 ಲಕ್ಷ ರೂ ಡಿಮ್ಯಾಂಡ್ ಮಾಡಿ ಹದಿನೈದು ಲಕ್ಷ ರೂ ವಸೂಲಿ ಮಾಡಿ ಉಳಿದ ಹತ್ತು ಲಕ್ಷಕ್ಕಾಗಿ ಪೀಡಿಸುತ್ತಿರುವಾಗ ಹನಿ ಟ್ರಾಪ್ ಗ್ಯಾಂಗ್ ಖಾಕಿ ಬಲೆಗೆ ಬಿದ್ದಿದೆ.
ಬೆಳಗಾವಿ ನಗರದಲ್ಲಿ ಹನಿಟ್ರ್ಯಾಪ್ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಾಪುರ ಪೊಲೀಸರು ಯುವತಿ ಸೇರಿದಂತೆ ನಾಲ್ವರನ್ನು ಬುಧವಾರ ಬಂಧಿಸಿದ್ದಾರೆ.
ಶಹಾಪುರ ಬಸವಣ ಗಲ್ಲಿಯ ವಿದ್ಯಾರ್ಥಿನಿ ದಿವ್ಯಾ ಪ್ರದೀಪ ಸಪಕಾಳೆ ( 23), ಶಹಾಪುರ ಗಾಡೆ ಮಾರ್ಗದ ವಿದ್ಯಾರ್ಥಿ ಪ್ರಶಾಂತ ಉರ್ಫ ಸ್ಪರ್ಷ ಕಲ್ಲಪ್ಪ ಕೋಲಕಾರ ( 25), ಕಣಬರಗಿಯಜ್ಯೋತಿರ್ಲಿಂಗ್ ಗಲ್ಲಿಯ ಕುಮಾರ ಉರ್ಫ ಡಾಲಿ ಅರ್ಜುನ ಗೋಕರಕ್ಕನವರ ( 23) ಮತ್ತು ಕಣಬರಗಿಯ ವಾಲ್ಮೀಕಿ ಗಲ್ಲಿಯ ರಾಜು ಸಿದ್ರಾಯಿ ಜಡಗಿ ( 29) ಬಂಧಿತ ಆರೋಪಿಗಳು.
ದಿವ್ಯಾ ಪ್ರದೀಪ ಸಪಕಾಳೆ ಎಂಬ ಯುವತಿ ಮಲಗಿದ್ದ ವೇಳೆ ಭುಜ ಮುಟ್ಟಿ ಎಬ್ಬಿಸಿದ ವಿಡಿಯೋವನ್ನಿಟ್ಟುಕೊಂಡು, ಆರೋಪಿಗಳು ತಮ್ಮನ್ನು ಅಪಹರಿಸಿ, ತನ್ನಿಂದ ₹ 25 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ತನ್ನಿಂದ ₹ 15 ಲಕ್ಷ ಹಣ ಪಡೆದು ಇನ್ನು ₹ 10 ಲಕ್ಷ ಹಣ ನೀಡುವಂತೆ ತಮಗೆ ಕಿರುಕುಳ ನೀಡುತ್ತಿದ್ದರು ಎಂದು ಟಿಳಕವಾಡಿಯ ಮಂಗಳವಾರ ಪೇಠ ನಿವಾಸಿ ವಿನಾಯಕ ಸುರೇಶ ಕುರಡೆಕರ ಎಂಬುವರು ಶಹಾಪುರ ಠಾಣೆಗೆ ದೂರು ನೀಡಿದ್ದರು. ಶಹಾಪುರ ಪೊಲೀಸರು ಆರೋಪಿಗಳನ್ನು ಬಂಧಿಸಿ, ಅವರಿಂದ ₹ 10 ಲಕ್ಷ ನಗದು, ಕೃತ್ಯಕ್ಕೆ ಬಳಸಿದ್ದ 3 ದ್ವಿಚಕ್ರವಾಹನ ಮತ್ತು ಒಂದು ಮೊಬೈಲ್ ಪೋನ್ ಸೇರಿದಂತೆ ಒಟ್ಟು ₹ 13.40 ಲಕ್ಷ ಮೌಲ್ಯದ ಹಣ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.