ಬೆಳಗಾವಿ, ರಾಯಬಾಗ ತಾಲೂಕಿನ ಇಟ್ನಾಳ ಬಳಿ ಕೃಷ್ಣಾ ನದಿಯಲ್ಲಿ ಪತ್ತೆಯಾಗಿದ್ದ ಅನಾಥ ಶವದ ಪ್ರಕರಣ 11 ತಿಂಗಳ ಬಳಿಕ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.
ಇಟ್ನಾಳ ಗ್ರಾಮದ ಮಲ್ಲಪ್ಪ ಕಂಬಾರ ಹತ್ಯೆಯಾಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಲ್ಲಪ್ಪ ಕಂಬಾರ ಪತ್ನಿ ದಾನವ್ವ ,ಪ್ರಕಾಶ ಉರ್ಫ ಶಿವಬಸವ ಬೆನ್ನಾಳಿ ಮತ್ತು ರಾಮಪ್ಪ ಮಾದರ ಬಂಧಿತ ಆರೋಪಿಗಳು.
ಕಳೆದ ವರ್ಷ ಡಿಸೆಂಬರ್ 27 ರಂದು ಕೃಷ್ಣಾ ನದಿಯಲ್ಲಿ ಅನಾಥ ಶವ ಪತ್ತೆಯಾಗಿತ್ತು. ಇದೊಂದು ಸಹಜ ಸಾವು ಎಂದು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಈತ ಯಾರೂ ಎಂಬುದು ಪತ್ತೆಯಾಗಿರಲಿಲ್ಲ.
ಇಟ್ನಾಳ ಗ್ರಾಮದ ಮಲ್ಲಪ್ಪ ಕಾಣೆಯಾಗಿದ್ದರೂ ಆತನ ಹೆಂಡತಿ ಈ ಕುರಿತು ದೂರು ನೀಡಿರಲಿಲ್ಲ. ಆಕೆಯ ಮೇಲೆ ಸಂಶಯ ಬಂದು ವಿಚಾರಿಸಿದ ವೇಳೆ, ಸಮರ್ಪಕ ಮಾಹಿತಿ ನೀಡದೇ ಜಾರಿಕೊಂಡಿದ್ದಳು. ಒಂದೂವರೆ ವರ್ಷದ ಮೊದಲು ಆಕೆ ಗಂಡನ ಮನೆ ತೊರೆದು ಮಕ್ಕಳೊಂದಿಗೆ ಬೇರೆಕಡೆಗೆ ತೆರಳಿದ್ದಳು. ಮತ್ತೆ ತಮ್ಮ ಮನೆಗೆ ಮಕ್ಕಳ ಜೊತೆಗೆ ಬಂದಿದ್ದಳು.
ಅದೇ ಗ್ರಾಮದ ಪ್ರಕಾಶ ಅಲಿಯಾಸ್ ಶಿವಬಸವ ಬೆನ್ನಾಳಿ ಜೊತೆಗೆ ಅನೈತಿಕ ಸಂಬಂಧ ಇತ್ತು. ಪ್ರಕಾಶನಿಗೆ ಮಲ್ಲಪ್ಪ ಎಚ್ಚರಿಕೆಯನ್ನೂ ನೀಡಿದ್ದ. ತನ್ನ ಕಾರ್ಯಕ್ಕೆ ಈತ ಅಡ್ಡಿಯಾಗಿದ್ದಾನೆಂದು ಪ್ರಕಾಶ ಮತ್ತು ಇತನ ಸ್ನೇಹಿತ ರಾಮಪ್ಪ ಮಾದರ ಅವರು ಮಲ್ಲಪ್ಪನನ್ನು ಕೃಷ್ಣಾ ನದಿ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದರು. ಈ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.