ಸ್ವಪಕ್ಷಕ್ಕೆ ಕಾಂಗ್ರೆಸ್ ನಾಯಕರಿಂದಲೇ ಮೋಸ: ಲಕ್ಕನ್ನ ಸವಸುದ್ದಿ ಗುಡುಗು
ಬೆಳಗಾವಿ: ಗೋಕಾಕ ತಾಲೂಕು ಕಲ್ಲೊಳ್ಳಿ ಪಟ್ಟಣ ಪಂಚಾಯಿತಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ಬಿಜೆಪಿ ಅಭ್ಯರ್ಥಿಗಳ ನೇಮಕ ಮಾಡುವ ಕೆಲಸ ನಡೆದಿದೆ ಎಂದು ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾ ಅಶ್ಯಕ್ಷ ಲಕ್ಕನ್ನ ಸವಸುದ್ದಿ ಆಧಾರ ಸಹಿತ ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಆಡಳಿತ ಹದ ತಪ್ಪಿ, ಪಕ್ಷದ ಹಳಿ ತಪ್ಪುತ್ತಿದೆ. ಇದರಿಂದಲೇ ಎಸ್. ಎಂ. ಕೃಷ್ಣ ಪಕ್ಷದಿಂದ ಹೊರನಡೆದದ್ದರಲ್ಲಿ ಸಂಶಯವಿಲ್ಲ ಎಂದು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗೋಕಾಕದಲ್ಲಿ ಹೊಂದಾಣಿಕೆ ರಾಜಕಾರಣ ನಡೆದಿದ್ದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೇ ಮೋಸ ಮಾಡುತ್ತಿದ್ದಾರೆ. ಈ ಹಿಂದೆ ಸಹ ಅರಭಾವಿ ಕ್ಷೇತ್ರ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಯಾವುದೇ ಸ್ವಪಕ್ಷದ ಕಾರ್ಯಕರ್ತರಿಗೆ ಕಾಂಗ್ರೆಸ್ ಬಿ ಫಾರ್ಮ ಸಿಕ್ಕಿರಲಿಲ್ಲ. ಕುಟುಂಬ ರಾಜಕಾರಣಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ನಿರಂತರ ಅನ್ಯಾಯ ನಡೆದಿದೆ ಎಂದರು.
ಎಸ್. ಎಂ. ಕೃಷ್ಣ ಕಾಂಗ್ರೆಸ್ ನ ಮೂಲ ಕಾರ್ಯಕರ್ತ ಮತ್ತು ಹಿರಿಯ ನಾಯಕರು. ಅವರ ಮನಸ್ಸಿಗೆ ನೋವಾಗಿ ಪಕ್ಷದಿಂದ ಹೊರಬೀಳುವುದು ಕ್ಷೇಮವಲ್ಲ. ಅದನ್ನು ನಾವೆಲ್ಲ ಖಂಡಿಸುತ್ತೇವೆ. ಕೃಷ್ಣ ಮತ್ತೆ ಹಿಂದಿರುಗಬೇಕು ಎಂದು ಒತ್ತಾಯಿಸಿದರು.
ಚುನಾವನೆ ಬರುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಉಳಿಸುವ ಕೆಲಸ ಜಿಲ್ಲೆಯಲ್ಲಿ ಆಗಬೇಕಿದೆ ಎಂದರು. ಕಾಂಗ್ರೆಸ್ ಪಕ್ಷದ ಬಿ ಫಾರ್ಮ ಪಡೆಯಲು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮನೆ ಮುಂದೆ ನಿಲ್ಲಬೇಕಿದೆ ಎಂದು ಲಕ್ಕನ್ನ ವ್ಯಂಗ್ಯವಾಡಿದರು. ಕಾಂಗ್ರೆಸ್ ಪಕ್ಷದ ವ್ಯವಸ್ಥೆ ಸುಧಾರಿಸಿ ಮೂಲಕಾರ್ಯಕರ್ತರಿಗೆ ಬೆಲೆ ಸಿಗದಿದ್ದರೆ ಪ್ರತಿಭಟನೆ ತೀವೃಗೊಳ್ಳಲಿದೆ ಎಂದರು.
ಯಾದವಾಡ ಜಿಪಂ ಸದಸ್ಯ ರಮೇಶ ಉಟಗಿ, ಸಿದ್ದಯ್ಯ ಮಠಪತಿ ಇತರರು ಉಪಸ್ಥಿತರಿದ್ದರು.