ಬೆಳಗಾವಿ,-ಕೋವಿಡ್-೧೯ ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸಲು ಅನುಕೂಲವಾಗುವಂತೆ ಇಲ್ಲಿನ ವಂಟಮುರಿ ಸಮೀಪದ ಹಾಲಭಾವಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 80 ಹಾಸಿಗೆಗಳ ಸುಸಜ್ಜಿತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ತಿಳಿಸಿದ್ದಾರೆ.
ಹಾಲಭಾವಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಗುರುವಾರ (ಜು.16) ಖುದ್ದಾಗಿ ಭೇಟಿ ನೀಡಿ, ಎಲ್ಲ ವ್ಯವಸ್ಥೆಗಳನ್ನು ಅವರು ಪರಿಶೀಲಿಸಿದರು.
ಕೋವಿಡ್-೧೯ ಸೋಂಕು ಹೊಂದಿ ಯಾವುದೇ ಲಕ್ಷಣಗಳಿಲ್ಲದ(ಅಸಿಂಪ್ಟಮೆಟಿಕ್) ವ್ಯಕ್ತಿಗಳನ್ನು ಮಾತ್ರ ಇಲ್ಲಿಗೆ ಸ್ಥಳಾಂತರಿಸಲಾಗುತ್ತಿದ್ದು, ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವವರನ್ನು ಬಿಮ್ಸ್ ಆಸ್ಪತ್ರೆಯಲ್ಲಿಯೇ ಇರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈಗಾಗಲೇ ಬಿಮ್ಸ್ ಆಸ್ಪತ್ರೆಯಲ್ಲಿರುವ ಅಸಿಂಪ್ಟಮೆಟಿಕ್ ವ್ಯಕ್ತಿಗಳ ಪೈಕಿ ಕೆಲವರನ್ನು ಮಾತ್ರ ಹಾಲಭಾವಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಇಂದಿನಿಂದಲೇ ಸ್ಥಳಾಂತರ ಮಾಡಲಾಗುತ್ತಿದೆ.
ಉಳಿದಂತೆ ಹೊಸದಾಗಿ ದಾಖಲಾಗುವ ಜನರಿಗೆ ಅವರ ಅಗತ್ಯತೆ ಆಧರಿಸಿ ಬಿಮ್ಸ್ ಅಥವಾ ವಸತಿ ಶಾಲೆಯಲ್ಲಿ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಿರೇಮಠ ಅವರು ಸ್ಪಷ್ಟಪಡಿಸಿದ್ದಾರೆ.
ವಸತಿ ಶಾಲೆಯಲ್ಲಿ ಸುಸಜ್ಜಿತ ಸೌಕರ್ಯ:
ಹಾಲಭಾವಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇರಿಸಲಾಗುವ ಸೋಂಕಿತರಿಗೆ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಊಟ, ವಸತಿ ಹಾಗೂ ಹಾಸಿಗೆಗಳು ಸೇರಿದಂತೆ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದ್ದಾರೆ.
ಪ್ರತ್ಯೇಕ ವೈದ್ಯಕೀಯ ತಂಡ, ನರ್ಸಿಂಗ್ ತಂಡಗಳು ವಸತಿ ಶಾಲೆಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಲಿವೆ. ಸಿಸಿಟಿವಿ ಅಳವಡಿಸಲಾಗಿದ್ದು, ಟಿವಿ ಹಾಗೂ ಬಿಸಿ ನೀರು ಒದಗಿಸಲು ಸೋಲಾರ್ ವ್ಯವಸ್ಥೆ ಕೂಡ ಮಾಡಲಾಗಿದೆ.
ಅಸಿಂಪ್ಟಮೆಟಿಕ್ ಇರುವವರಿಗೆ ಮಾತ್ರ ಇಲ್ಲಿಗೆ ಸ್ಥಳಾಂತರಿಸುವುದರಿಂದ ಅವರ ಅಗತ್ಯಕ್ಕೆ ಅನುಗುಣವಾಗಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಕೂಡ ಮೂಲಸೌಕರ್ಯಗಳನ್ನು ಪರಿಶೀಲಿಸಿ, ವೈದ್ಯಕೀಯ ತಂಡಕ್ಕೆ ಸಲಹೆ-ಸೂಚನೆಗಳನ್ನು ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಪ್ರೀತಂ ನಸಲಾಪುರೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
***