Breaking News

ಬೆಳಗಾವಿಗೆ ವಲಸೆ ಬಂದಿರುವ ನೆರೆಯ ರಾಜ್ಯದ ಕಾರ್ಮಿಕರಿಗೆ ಸಾಮೂಹಿಕ ಕ್ವಾರಂಟೈನ್

ಬೆಳಗಾವಿ- ನೆರೆಯ ರಾಜ್ಯಗಳು ಮತ್ತು ಬೆಂಗಳೂರಿನಿಂದ ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಸರ್ಕಾರದ ನಿರ್ದೇಶನದ ಮೇರೆಗೆ ಅಂತಹವರಿಗೆ ಸಾಮೂಹಿಕ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಿ ಉಟೋಪಹಾರವನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸೂಚನೆ ನೀಡಿದರು.

ಕೋವಿಡ್-೧೯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ(ಮಾ.೩೦) ಜಿಲ್ಲೆಯ ಎಲ್ಲ ತಾಲ್ಲೂಕಗಳ ಅಧಿಕಾರಿಗಳ ಜತೆ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದರು.

ಖಾನಾಪುರ, ನಿಪ್ಪಾಣಿ, ಚಿಕ್ಕೋಡಿ, ಬೆಳಗಾವಿ ಸೇರಿದಂತೆ ಜಿಲ್ಲೆಯ ಎಲ್ಲ ಗಡಿ ತಾಲ್ಲೂಕುಗಳಲ್ಲಿ ವಲಸೆ ಕಾರ್ಮಿಕರು ಕಂಡುಬರುತ್ತಿದೆ.
ಆಯಾ ತಾಲ್ಲೂಕುಗಳಲ್ಲಿ ಲಭ್ಯವಿರುವ ಸರ್ಕಾರಿ ಕಟ್ಟಡಗಳು, ಸಮುದಾಯ ಭವನ, ವಸತಿನಿಲಯಗಳು, ಚೌಲ್ಟ್ರಿ ಮತ್ತಿತರ ಕಟ್ಟಡಗಳಲ್ಲಿ ಅವರಿಗೆ ಊಟ-ವಸತಿ ಕಲ್ಪಿಸುವುದರ ಜತೆಗೆ ನೀರು, ಶೌಚಾಲಯ ಮತ್ತಿತರ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ತಿಳಿಸಿದರು.
ಈ ರೀತಿಯ ಸಾಮೂಹಿಕ ಕ್ವಾರಂಟೈನ್ ಕೇಂದ್ರಗಳಿಗೆ ಒಬ್ಬ ನೋಡಲ್ ಅಧಿಕಾರಿ, ವೈದ್ಯಕೀಯ ತಂಡವನ್ನು ನಿಯೋಜಿಸಬೇಕು.
ಇದಕ್ಕೆ ಅಗತ್ಯವಿರುವ ಅನುದಾನವನ್ನು ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ತಕ್ಷಣವೇ ಬಿಡುಗಡೆ ಮಾಡಲಾಗುವುದು.

ಎಲ್ಲ ವಲಸೆ ಕಾರ್ಮಿಕರ ಸಮಗ್ರ ಮಾಹಿತಿಯನ್ನು ಸಂಗ್ರಹಿಸಬೇಕು. ಅವರ ಮೂಲ ಸ್ಥಳ, ಕೆಲಸ ಮಾಡುವ ಸಂಸ್ಥೆ ಬಗ್ಗೆ ಕೂಲಂಕಷವಾಗಿ ಮಾಹಿತಿ ಸಂಗ್ರಹಿಸಬೇಕು.
ಎರಡು ಮಾಹೆಗಳ ಪಡಿತರ ವಿತರಣೆಯನ್ನು ಏಪ್ರಿಲ್ ಮೊದಲ ವಾರದಿಂದಲೇ ವಿತರಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಪಡಿತರ ನೀಡುತ್ತಿರುವುದರಿಂದ ಅದು ದುರ್ಬಳಕೆ ಆಗದಂತೆ ಎಚ್ಚರಿಕೆ ವಹಿಸಬೇಕು.
ಒಂದು ವೇಳೆ ಪಡಿತರ ಧಾನ್ಯ ದುರ್ಬಳಕೆ ಆದರೆ ಸಂಬಂಧಿಸಿದವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದರು.
ಕಡ್ಡಾಯವಾಗಿ ಪ್ರತಿದಿನ ಬೆಳಿಗ್ಗೆ ೭ ರಿಂದ ರಾತ್ರಿ ೯ ಗಂಟೆಯವರೆಗೆ ಪಡಿತರವನ್ನು ವಿತರಿಸಬೇಕು ಎಂದು ತಿಳಿಸಿದರು.

ಎಲ್ಲ ಸರಕು ಸಾಗಾಣಿಕೆ ವಾಹನಗಳ ಸಂಚಾರಕ್ಕೆ ಅವಕಾಶ:

ಇದುವರೆಗೆ ಅವಶ್ಯಕ ಸಾಮಗ್ರಿಗಳ ಸರಕು ಸಾಗಾಣಿಕೆ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಸರ್ಕಾರದ ಹೊಸ ಆದೇಶದ ಪ್ರಕಾರ ಎಲ್ಲ ಬಗೆಯ ಸರಕು ಸಾಗಣೆಯ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ‌ಡಾ.ಬೊಮ್ಮನಹಳ್ಳಿ ಸ್ಪಷ್ಟಪಡಿಸಿದರು.

ಸರಕು ತುಂಬಿದ ಅಥವಾ ಖಾಲಿ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ನೀಡಲಾಗಿದೆ. ‌ಆದರೆ ಇಂತಹ ವಾಹನಗಳಲ್ಲಿ ಜನರ ಸಾಗಾಣಿಕೆಯನ್ನು ಕಡ್ಡಾಯವಾಗಿ ನಿರ್ಬಂಧಿಸಬೇಕು ಎಂದು ಪೊಲೀಸ್ ಅಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಸೂಚನೆ ನೀಡಿದರು.

ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ನ್ಯಾಯಬೆಲೆ ಅಂಗಡಿಯವರಿಗೆ ಥಳಿಸಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದರು.

ಇದಕ್ಕೂ ಮುಂಚೆ ಮಾತನಾಡಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು,ದಿನಬಳಕೆಯ ಹಾಗೂ ಅತ್ಯಾವಶ್ಯಕ ಸಾಮಗ್ರಿಗಳ ಸಾಗಾಣಿಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಗರ್ಭಿಣಿಯರು, ಬಾಣಂತಿಯರು ಸೇರಿದಂತೆ ಎಲ್ಲ ಬಗೆಯ‌ ತುರ್ತು ವೈದ್ಯಕೀಯ ಸೇವೆಗಳಿಗೆ ಹಾಗೂ ಅಂತಹ ಜನರನ್ನು ಕರೆದುಕೊಂಡು ಹೋಗುವ ವಾಹನಗಳಿಗೂ ತಡೆಯೊಡ್ಡಬಾರದು ಎಂದು ತಿಳಿಸಿದರು.

ಜಾನುವಾರುಗಳ ಆಹಾರ ಸಾಮಗ್ರಿ, ಕೃಷಿ ಸಾಮಗ್ರಿ ಸಾಗಾಣಿಕೆಗೆ ಅವಕಾಶ:

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಹೆದ್ದಾರಿ ಸೇರಿದಂತೆ ಎಲ್ಲ ಪ್ರಮುಖ ರಸ್ತೆಗಳಲ್ಲಿ ಸರಕು ಸಾಮಗ್ರಿಗಳನ್ನು ಸಾಗಿಸುವ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಸೂಚನೆ ನೀಡಿದರು.

ಅದೇ ರೀತಿ ಕೋಳಿ, ಹಸುಗಳು ಸೇರಿದಂತೆ ಎಲ್ಲ ಜಾನುವಾರುಗಳ ಆಹಾರ ಸಾಮಗ್ರಿ, ರೈತರಿಗೆ ಕೃಷಿ ಚಟುವಟಿಕೆಗೆ ಅಗತ್ಯವಿರುವ ಬೀಜ, ಗೊಬ್ಬರಗಳ ಸಾಗಾಣಿಕೆಗೆ ಮುಕ್ತ ಅವಕಾಶ ನೀಡಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಲಾಕ್ ಡೌನ್ ನಿಯಮ‌ ಉಲ್ಲಂಘಿಸಿ‌ ವಿನಾಕಾರಣ ಸಂಚರಿಸುವ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಬೇಕು ಎಂದು ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ, ಏಪ್ರಿಲ್ ಮೊದಲ ದಿನದಿಂದಲೇ ಪಡಿತರ ಸಾಮಗ್ರಿ‌ ವಿತರಣೆಯನ್ನು ಕಡ್ಡಾಯವಾಗಿ ಆರಂಭಿಸಬೇಕು ಎಂದು ಸೂಚನೆ ನೀಡಿದರು.

ಮಾಹೆವಾರು ಬಿಪಿಎಲ್ ಕಾರ್ಡುದಾರರಿಗೆ 5-ಕೆಜಿ ಅಕ್ಕಿ ಪ್ರತಿ ಸದಸ್ಯರಿಗೆ ಮತ್ತು 2-ಕೆಜಿ ಗೋಧಿ ಕುಟುಂಬಕ್ಕೆ 35-ಕೆಜಿ ಅಕ್ಕಿ ಅಂತ್ಯೋದಯ ಕಾಡ್೯ದಾರರಿಗೆ ಹಾಗೂ ಗೋಧಿ ಇಲ್ಲ ಎಂಬ ಅಂಶ ಗಮನಿಸಬೇಕು.

ಆದರೆ ಈ ಮಾಹೆಗೆ ಎರಡು ತಿಂಗಳ ಅಲಾಟಮೆಂಟ್ ಪ್ರಕಾರ ಬಿ.ಪಿ.ಎಲ್ ಕಾಡ್೯ಗೆ 10- ಕೆ.ಜಿ ಅಕ್ಕಿ ಪ್ರತಿ ಸದಸ್ಯರಿಗೆ 4-ಕೆ.ಜಿ.‌ಗೋಧಿ ಕುಟುಂಬಕ್ಕೆ 70- ಕೆಜಿ ಅಕ್ಕಿ ಅಂತ್ಯೋದಯ ಕಾಡ್೯ಗೆ ಗೋಧಿ ಇಲ್ಲ ಎಂಬ ಅಂಶ ಗಮನದಲ್ಲಿಟ್ಟುಕೊಳ್ಳಬೇಕು.
ಎ.ಪಿ.ಎಲ್ ಕಾರ್ಡದಾರರಿಗೆ ಅವರು ಬಯಸಿದರೆ ಮಾತ್ರ
ಒಬ್ಬ ಸದಸ್ಯರ ಕಾಡ್೯ಗೆ 5 -ಕೆಜಿ ಮತ್ತು ಎರಡಕ್ಕಿಂತ ಹೆಚ್ಚು ಸದಸ್ಯರ ಕಾರ್ಡಗೆ 10-ಕೆಜಿ ಗರಿಷ್ಠ ಅಕ್ಕಿ ಪ್ರತಿ ಕೆಜಿ ಗೆ 15-00 ರೂಪಾಯಿಯಂತೆ ವಿತರಿಸಬಹುದು ಎಂದು ಜಂಟಿ ನಿರ್ದೇಶಕ ಕೊಡ್ಲಿ ಅವರು ವಿವರಿಸಿದರು.

ಕೃಷಿ ಇಲಾಖೆಯ ಜಂಟಿ‌ ನಿರ್ದೇಶಕರಾದ ಜಿಲಾನಿ ಮೊಖಾಶಿ, ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಉಪ ವಿಭಾಗಾಧಿಕಾರಿಗಳಾದ ಶಿವಾನಂದ ಭಜಂತ್ರಿ, ಅಶೋಕ ತೇಲಿ, ರವೀಂದ್ರ ಕರಲಿಂಗಣ್ಣವರ, ಎಲ್ಲ ತಹಶೀಲ್ದಾರರು, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು.
****

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *