ಬೆಳಗಾವಿ,: ಹಿರೇಬಾಗೇವಾಡಿಯ ಕೋವಿಡ್-೧೯ ಸೋಂಕಿತ ವ್ಯಕ್ತಿ (ಪಿ-೨೨೪)ಯ ಜತೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ೮೦ ವರ್ಷದ ವೃದ್ಧೆಯೊಬ್ಬರು ಇಂದು ಬೆಳಿಗ್ಗೆ ೧೦.೩೦ ಗಂಟೆಗೆ ಮೃತಪಟ್ಟಿರುತ್ತಾರೆ. ಇವರ ಗಂಟಲು ದ್ರವದ ಮಾದರಿಯನ್ನು ತೆಗೆದು ಪ್ರಯೋಗಾಲಯಕ್ಕೆ ಕಳಿಸಲಾಗುತ್ತಿದ್ದು, ವರದಿ ಬಂದ ನಂತರವೇ ಮರಣದ ನಿರ್ದಿಷ್ಟ ಕಾರಣ ತಿಳಿದುಬರಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಹಿರೇಬಾಗೇವಾಡಿಯ ಪಿ-೨೨೪ ವ್ಯಕ್ತಿಗೆ ಪಾಸಿಟಿವ್ ಇರುವುದು ನಿನ್ನೆ ಸಂಜೆ ದೃಢಪಟ್ಟಿರುತ್ತದೆ.
ಈ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಕ್ಕೆ ಬಂದಿರುವ ೨೧ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿ ಇರಿಸುವ ಕಾರ್ಯ ಪ್ರಗತಿಯಲ್ಲಿದೆ.
ಈ ಹಂತದಲ್ಲಿ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದ ೨೧ ವ್ಯಕ್ತಿಗಳ ಪೈಕಿ ಒಬ್ಬರಾಗಿದ್ದ ೮೦ ವರ್ಷದ ವೃದ್ಧೆ ಮೃತಪಟ್ಟಿರುತ್ತಾರೆ.
ಆದ್ದರಿಂದ ಅವರ ಗಂಟಲು ದ್ರವದ ಮಾದರಿಯನ್ನು ತೆಗೆದು ಪ್ರಯೋಗಾಲಯಕ್ಕೆ ಕಳಿಸಲಾಗುತ್ತಿದೆ. ವರದಿ ಬಂದ ನಂತರವೇ ಅವರ ಮರಣದ ನಿರ್ದಿಷ್ಟ ಕಾರಣವನ್ನು ತಿಳಿಸಲಾಗುವುದು.
ಪ್ರಾಥಮಿಕ ಮಾಹಿತಿಯ ಪ್ರಕಾರ ಅವರು ಹೃದಯಾಘಾತದಿಂದ ಮೃಪಟ್ಟಿರುತ್ತಾರೆ ಎಂದು ವೈದ್ಯರು ತಿಳಿಸಿರುತ್ತಾರೆ. ಆದಾಗ್ಯೂ ಪ್ರಯೋಗಾಲಯದ ವರದಿ ಬಂದ ನಂತರವೇ ಮರಣದ ಕಾರಣ ಖಚಿತಗೊಳ್ಳಲಿದೆ.
ಜನರ ಆರೋಗ್ಯದ ದೃಷ್ಟಿಯಿಂದ ಅವರ ಅಂತ್ಯಕ್ರಿಯೆಯನ್ನು ಸರ್ಕಾರದ ಮಾರ್ಗಸೂಚಿಯ ಪ್ರಕಾರ ನೆರವೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
*****