ಬೆಳಗಾವಿ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಮಾತ್ರ ಲಾಕ್‌ಡೌನ್ ಜಾರಿ
—————————————————————
ಬೆಳಗಾವಿ, ಬೆಳಗಾವಿ ಜಿಲ್ಲೆಯ ಗೋಕಾಕ, ಮೂಡಲಗಿ, ಅಥಣಿ, ಕಾಗವಾಡ ಹಾಗೂ ನಿಪ್ಪಾಣಿ ತಾಲೂಕುಗಳ ವ್ಯಾಪ್ತಿಯಲ್ಲಿ
ಮಾತ್ರ ದಿನಾಂಕ:14.07.2020ರ ರಾತ್ರಿ 8.00 ಗಂಟೆಯಿಂದ 22.07.2020ರ ಬೆಳಿಗ್ಗೆ 5.00 ಗಂಟೆಯವರೆಗೆ 7 ದಿನಗಳ ಅವಧಿಯವರೆಗೆ ಲಾಕ್‌ಡೌನ್ ಘೋಷಿಸಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಘೋಷಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ, ಮೂಡಲಗಿ, ಅಥಣಿ, ಕಾಗವಾಡ ಹಾಗೂ ನಿಪ್ಪಾಣಿ ತಾಲೂಕುಗಳ ವ್ಯಾಪ್ತಿಗೆ ಮಾತ್ರ ಸೀಮಿತವಾಗಿ ಲಾಕ್ ಡೌನ್ ಜಾರಿಯಲ್ಲಿರುತ್ತದೆ.
ಈ ತಾಲೂಕುಗಳ ವ್ಯಾಪ್ತಿಯಲ್ಲಿ ಕಳೆದ 2 ವಾರಗಳಂದೀಚೆಗೆ ಕೋವಿಡ್-19 ಸೋಂಕು ಹರಡುವಿಕೆಯ ಪ್ರಕರಣಗಳು ತೀವ್ರವಾಗಿ
ಹೆಚ್ಚಳವಾಗುತ್ತಿದ್ದು, ಮರಣ ಪ್ರಮಾಣವು ಕೂಡಾ ಹೆಚ್ಚಳವಾಗಿರುತ್ತದೆ.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ತಜ್ಞರೊಂದಿಗೆ ಈ ವಿಷಯದ ಕುರಿತು ಚರ್ಚಿಸಿ ಹಾಗೂ ವಿವರವಾಗಿ ಪರಿಶೀಲಿಸಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್ -19 ಸೋಂಕಿನ ಹರಡುವಿಕೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಪರಿಣಾಮಕಾರಿಯಾಗಿ ನಿಯಂತ್ರಿಸಲು ಹಾಗೂ ಹತೋಟಿಗೆ ತರಲು ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯವಾಗಿರುತ್ತದೆ ಎಂದು ಕಂಡುಬಂದಿರುತ್ತದೆ.
ಈ ಹಿನ್ನೆಲೆಯಲ್ಲಿ, ತಜ್ಞರ ಸಲಹೆ ಮೇರೆಗೆ ವಿಪತ್ತು ನಿರ್ವಹಣೆ ಕಾಯ್ದೆ, 2005ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಐದು ತಾಲ್ಲೂಕುಗಳಲ್ಲಿ ಮಾತ್ರ ಲಾಕ್ ಡೌನ್ ಘೋಷಿಸಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳು ಇತ್ತೀಚೆಗೆ ಜರುಗಿದ ವಿಡಿಯೋ ಸಂವಾದದಲ್ಲಿ ಜಿಲ್ಲೆಯಲ್ಲಿನ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಜಿಲ್ಲಾಡಳಿತ ಮುಖ್ಯಸ್ಥರಾದ ಜಿಲ್ಲಾಧಿಕಾರಿಗಳು ಲಾಕ್‌ಡೌನ ಕುರಿತು ಸ್ಥಳೀಯ ಹಂತದಲ್ಲಿ ನಿರ್ಧಾರ ತೆಗೆದುಕೊಳ್ಳಲು ಅನುಮತಿ ನೀಡಿರುತ್ತಾರೆ.
ಆ ಪ್ರಕಾರ ಐದು ತಾಲ್ಲೂಕುಗಳಲ್ಲಿ ಲಾಕ್‌ಡೌನ್ ಘೋಷಿಸಲಾಗಿದ್ದು, ಉಳಿದಂತೆ ರಾಜ್ಯ ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 158 ಟಿಎನ್ಆರ್ 2020, ದಿನಾಂಕ:30.06.2020ರಲ್ಲಿ ಕೋವಿಡ್-19 ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ಬಗ್ಗೆ ಕಂಟೈನ್‌ಮೆಂಟ್ ವಲಯಗಳನ್ನು ಹೊರತುಪಡಿಸಿದ ಪ್ರದೇಶಗಳಲ್ಲಿ ನಿಷೇಧಿತ ಕಾರ್ಯ ಚಟುವಟಿಕೆಗಳನ್ನು ಕ್ರಮೇಣವಾಗಿ ಪುನರ್ ಪ್ರಾರಂಭಿಸಲು ತೆರವು-2ರ ಮಾರ್ಗಸೂಚಿಗಳನ್ನು ಹಾಗೂ ಕಂಟೈನ್‌ಮೆಂಟ್ ವಲಯಗಳ ಪ್ರದೇಶಗಳಲ್ಲಿ ಲಾಕ್‌ಡೌನ್ ಅನ್ನು ರಾಜ್ಯಾದಾದ್ಯಂತ ವಿಸ್ತರಿಸಿ ಆದೇಶಿಸಿದೆ.
ಇವುಗಳು ದಿನಾಂಕ:31.07.2020ರವರೆಗೆ
ಜಾರಿಯಲ್ಲಿರುತ್ತವೆ. ಈ ಮಾರ್ಗಸೂಚಿಗಳು ರಾಜ್ಯಾದ್ಯಂತ ಮುಂದುವರೆಯಲಿವೆ.
ಲಾಕ್‌ಡೌನ್‌ನ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ
ಅನುಷ್ಠಾನಗೊಳಿಸಲು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಸಂಬಂಧಪಟ್ಟ ಉಪವಿಭಾಗಾಧಿಕಾರಿಗಳು/ತಹಶೀಲ್ದಾರರು/ಕಾರ್ಯನಿರ್ವಾಹಕ ಅಧಿಕಾರಿಗಳು,
ತಾಲೂಕ ಪಂಚಾಯತ/ಪೌರಾಯುಕ್ತರು/ಮುಖ್ಯಾಧಿಕಾರಿಗಳು ಹಾಗೂ ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಆದೇಶದಲ್ಲಿ ತಿಳಿಸಿದ್ದಾರೆ.
*****