ಬೆಳಗಾವಿ
ಕಾರ್ಖಾನೆಯವರ ತಪ್ಪಿನಿಂದ ಕಬ್ಬು ಬೆಳೆಗಾರರಿಗೆ ಸಮಸ್ಯೆಯಾಗುತ್ತಿದೆ. ಮೂರು ದಿನಗಳಲ್ಲಿ ಬಾಕಿ ಉಳಿಸಿಕೊಂಡ ಹಣವನ್ನು ನೇರವಾಗಿ ರೈತರ ಖಾತೆಗೆ ಪಾವತಿಸಬೇಕೆಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು.
ಸಕ್ಕರೆ ಕಾರ್ಖಾನೆಯವರೊಂದಿಗೆ ಸಭೆ ನಡೆಸಿ ಮಾತನಾಡಿದರು. ರೈತರು ಕಬ್ಬು ಪೂರೈಸಿ ಸಾಕಷ್ಟು ದಿನಗಳು ಕಳೆದರೂ ಸಕ್ಕರೆ ಕಾರ್ಖಾನೆಯರು ಬಾಕಿಹಣ ಪಾವತಿಸಿಲ್ಲ. ರೈತರ ತಾಳ್ಮೆ ಕಳೆದುಕೊಳ್ಳುವ ಮುನ್ನ ಸೋಮವಾರದ ಒಳಗಾಗಿ ಒಂದೇ ಕಂತಿನಲ್ಲಿ ಕಾರ್ಖಾನೆಯವರು ಪಾವತಿಸಬೇಕೆಂದು ಸೂಚಿಸಿದರು.
ಹರ್ಷಾ, ರೇಣುಕಾ ಹಾಗೂ ಘಟಪ್ರಭಾ ಸಕ್ಕರೆ ಕಾರ್ಖಾನೆಯವರು ರೈತರ ಹಣ ಸಂದಾಯ ಮಾಡುತ್ತಿದ್ದಾರೆ. ಉಳಿದ ಬೆಳಗಾವಿ ಜಿಲ್ಲೆಯ ಕಾರ್ಖಾನೆಯ ಮಾಲೀಕರು ಸೋಮವಾರದಿಂದಲೇ ಯಾವುದೇ ನೆಪ ಹೇಳದೆ ಉಳಿಸಿಕೊಂಡ ಬಾಕಿ ಹಣವನ್ನು ಪಾವತಿಸಬೇಕು. ಇಲ್ಲದಿದ್ದಲ್ಲಿ ಕಾನೂನಿನ ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತರಿಗೆ ಯಾವುದೇ ಕಾರಣಕ್ಕೂ ತೊಂದರೆ ಮಾಡಬೇಡಿ. ಸೋಮವಾರದಿಂದ ಜಿಲ್ಲೆಯ ಸಕ್ಕರೆ ಕಾರ್ಖಾನೆಯವರು ಎಷ್ಟು ಕಬ್ಬು ನುರಿಸಿದ್ದೀರಿ ಹಾಗೂ ರೈತರಿಗೆ ಬಾಕಿ ಹಣ ನೀಡಿರುವುದರ ಕುರಿತು ಜಿಲ್ಲಾಧಿಕಾರಿ ಕಚೇರಿಗೆ ವರದಿ ಸಲ್ಲಿಸಬೇಕು. ನೀವು ಸಲ್ಲಿಸುವ ವರದಿಯನ್ನುಸಕ್ಕರೆ ಆಯುಕ್ತರಿಗೆ ತಲುಪಿಸಲಾಗುವುದು. ಇದರಿಂದ ಜಾರಿಕೊಳ್ಳುವ ಕಾರ್ಖಾನೆಯವರಿಗೆ ನೋಟಿಸ್ ನೀಡಲಾಗುವುದು ಎಂದರು.
——–
ಶಿವಸಾಗರ ಸಕ್ಕರೆ ಕಾರ್ಖಾನೆ, ಬಿಜೆಪಿ ಶಾಸಕ ಉಮೇಶ ಕತ್ತಿ ಒಡೆತನದ ವಿಶ್ವರಾಜ್ ಶುಗರ್ಸ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಒಡೆತನದ ಸೌಭಾಗ್ಯ ಸಕ್ಕರೆ ಕಾರ್ಖಾನೆಯವರು ಸಭೆ ಗೈರಾಗಿದ್ದರು. ಸಮನ್ವತದ ಕೊರತೆಯಿಂದ ಅವರು ಹಾಜರಾಗದಿರಬಹದು ಎಂದು ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ತಿಳಿಸಿದರು.