ಬೆಳಗಾವಿ:
ಆರೋಗ್ಯ ಇಲಾಖೆಯ ಪ್ರಗತಿ ತೃಪ್ತಿಕರವಾಗಿಲ್ಲ. ಆರೋಗ್ಯ ಇಲಾಖೆ ಅಧಿಕಾರಿಗಳು ಹೆಣ್ಣು ಬ್ರೂಣ ಪತ್ತೆ ಮಾಡುವ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ದಾಳಿ ಮಾಡಿಲ್ಲ. ಜಿಲ್ಲೆಯಲ್ಲಿ ಸಾಕ್ಷಿ ಸಮೇತ ಒಂದೂ ಪ್ರಕರಣವನ್ನು ಬಯಲಿಗೆಳೆಯಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಜಿಲ್ಲೆಯಲ್ಲಿ ಹೆಣ್ಣು ಬ್ರೂಣ ಪತ್ತೆ ಮಾಡುವ ದುಷ್ಕøತ್ಯ ನಡೆದಿದೆ. ಕಚೇರಿಯಲ್ಲಿ ಕುಳಿತುಕೊಂಡು ಕಥೆ ಹೇಳಬೇಡಿ. ಕಣ್ಣಿದ್ದೂ ಕುರುಡರಾಗಬೇಡಿ ಎಂದು ಜಿಲ್ಲಾಧಿಕಾರಿ ಎನ್.ಜಯರಾಮ್ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅವರು ತಮ್ಮ ಕಚೇರಿಯ ಸಭಾಭವನದಲ್ಲಿ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ಬೆಳಗಾವಿ ಜಿಲ್ಲೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಪಾನ್, ಬೀಡಾ ಅಂಗಡಿಗಳಿವೆ. ಸಾರ್ವಜನಿಕ ಸ್ಥಳಗಳಲ್ಲಿ ಅವ್ಯಾಹತವಾಗಿ ಧೂಮಪಾನ ಮಾಡಲಾಗುತ್ತಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಅಕ್ಟೋಬರ್ 25 ರಿಂದ ಜಿಲ್ಲೆಯಾಧ್ಯಂತ ಕಾರ್ಯಾಚರಣೆ ನಡೆಸಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ ದಂಡ ವಿಧಿಸಬೇಕು. ಗುಟಕಾ ಮಾರಾಟ ಮಾಡುವ ಪಾನ್ ಬೀಡಾ ಅಂಗಡಿಗಳ ವಿರುದ್ಧ ಶಿಸ್ಥಿನ ಕ್ರಮ ಜರುಗಿಸಬೇಕು ಎಂದು ಡಿಸಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲೆಯ ಅಂಗನವಾಡಿ ಹಾಗೂ ಆಶಾಕಾರ್ಯಕರ್ತರ ಸಹಕಾರದೊಂದಿಗೆ ಹೆಣ್ಣು ಬ್ರೂಣ ಪತ್ತೆ ಮಾಡುವ ಕೇಂದ್ರಗಳ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಬೇಕು. ಜೊತೆಗೆ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ವಚ್ಚತೆ ಕಾಪಾಡಬೇಕು ಎಂದರು.
