ಬೆಳಗಾವಿ: ನಗರದಲ್ಲಿ ಇಂದು ಬೆಳಗ್ಗೆಯಿಂದಲೇ ರೈತರನ್ನು ಹುರುದುಂಬಿಸಿ ತಾಸು ಗಂಟೆ ರೈತರ ಪರವಾಗಿ ಭಾಷಣ ಮಾಡಿ ಗಂಟಲು ಹರಿದುಕೊಂಡು ಕಬ್ಬಿನ ಬಾಕಿ ಬಿಲ್ ಕೊಡಲೇಬೇಕು ಎಂದು ಪುಕಾರು ಹಾಕಿ ಅಹೋರಾತ್ರಿ ಧರಣಿ ನಡೆಸುವುದಾಗಿ ಘೋಷಣೆ ಮಾಡಿದ ರೈತ ನಾಯಕರು ಅಹೋರಾತ್ರಿ ಧರಣಿಯಲ್ಲಿ ಮುಗ್ದ ರೈತರನ್ನು ಕೊರೆಯುವ ಚಳಿಯಲ್ಲಿ ಬಿಟ್ಟು ಪಲಾಯನಗೈದಿದ್ದಾರೆ.
ಪ್ರಸಕ್ತಸಾಲಿನ ಕಬ್ಬಿನ ದರವನ್ನು ನಿಗದಿ ಮಾಡಬೇಕು ಹಾಗೂ ಎಫ್ ಆರ್ ಪಿ ದರ ಕೊಡಿಸಬೇಕು. ಕಬ್ಬಿನ ಬಾಕಿ ಬಿಲ್ ನ್ನು ಪಾವತಿಸಬೇಕು ಎಂದು ಇಂದು ಬೆಳಗ್ಗೆಯಿಂದ ಭಾಷಣ ಮಾಡಿದ ರೈತ ನಾಯಕರಾದ ಕುರಬೂರು ಶಾಂತಕುಮಾರ, ಕೆ.ಟಿ.ಗಂಗಾಧರ, ಲಿಂಗರಾಜ ಪಾಟೀಲ, ಈರಣ್ಣಾ ಕಡಾಡಿ, ಅಶೋಕ ಪೂಜಾರಿ, ಲಕ್ಕಣ್ಣ ಸವಸುದ್ದಿ, ಭೀಮ್ಮಪ್ಪ ಗಡಾದ ಸೇರಿದಂತೆ ಹಲವಾರು ಜನ ರೈತ ನಾಯಕರು ಅಹೋರಾತ್ರಿ ಧರಣಿ ಮಾಡುವುದಾಗಿ ಘೋಷಣೆ ಮಾಡಿ ಪಲಾಯನ ಗೈದಿದ್ದು, ಇಂದು ನಡೆದ ರೈತಪರ ಹೋರಾಟದ ದೊಡ್ಡ ದುರಂತ.
ರೈತರ ಬೇಡಿಕೆ ಈಡೇರುವ ವರೆಗೂ ರೈತರು ಅಹೋರಾತ್ರಿ ಧರಣಿ ಮುಂದುವರೆಸುತ್ತಾರೆ ಎಂದು ಘೋಷಣೆ ಮಾಡಿದ ಉತ್ತರ ಕುಮಾರರು ಮುಗ್ದ ರೈತರನ್ನು ನಡು ನೀರಿನಲ್ಲಿ ಕೈ ಬಿಟ್ಟು ಕೌವದಿ ಹೊದಿಸಿಕೊಂಡು ಬೆಚ್ಚಗೆ ಮಲಗಲು ಮನೆಗೆ ತೆರಳಿದ್ದು ಅಮಾಯಕ ಮುಗ್ದ ರೈತರು ಜಿಲ್ಲಾಧಿಕಾರಿಯ ಆವರಣದಲ್ಲಿ ಕೊರೆಯುವ ಚಳಿಗೆ ಮೈಯೊಡ್ಡಿ ಕಸ ಕಡ್ಡಿ ಆರಿಸಿ ಬೆಂಕಿ ಹೊತ್ತಿಸಿ ಧರಣಿ ಮುಂದುವರೆಸಿದ್ದಾರೆ.
ಅಹೋರಾತ್ರಿ ಧರಣಿಯಲ್ಲಿ ಚುನ್ನಪ್ಪ ಪೂಜಾರಿ, ಅಶೋಕ ಯಮಕನಮರಡಿ ಸೇರಿದಂತೆ ಮುಗ್ದ ರೈತರು ಧರಣಿ ಮುಂದುವರೆಸಿದ್ದಾರೆ.