ಬೆಳಗಾವಿ:
ನೂತನ ಭೂ ಸುಧಾರಣಾ ತಿದ್ದುಪಡಿ ಕಾಯಿದೆ ಹಾಗೂ ಎಪಿಎಂಸಿ ಕಾಯಿದೆ ವಿರೋಧಿಸಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದ ಚನ್ನಮ್ಮ ವೃತ್ತದಿಂದ ಕೇಂದ್ರ ಸಚಿವ ಸುರೇಶ ಅಂಗಡಿ ಕಚೇರಿವರೆಗೆ ಪ್ರತಿಭಟನೆ ನಡೆಸಿದರು.
ರಾಜ್ಯ ಸರಕಾರ ಈಚೆಗೆ ತಿದ್ದುಪಡಿ ಮಾಡಿರುವ ನೂತನ ಎಪಿಎಂಸಿ ಕಾಯಿದೆ ಹಾಗೂ ಭೂ ಸುಧಾರಣಾ ಕಾಯಿದೆಯಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ. ಭೂ ಸುಧಾರಣಾ ತಿದ್ದುಪಡಿ ಕಾಯಿದೆಯಿಂದ ಬಲಾಢ್ಯರು, ಕೈಗಾರಿಕೋದ್ಯಮಿಗಳು ರೈತರ ಭೂಯಿಯನ್ನು ಸುಲಭವಾಗಿ ಕಬಳಿಸಬಹುದು. ಕೃಷಿಯ ಮೇಲೆ ಬಹುರಾಷ್ಟ್ರೀಯ ಕಂಪನಿಗಳು ಹಿಡಿತ ಸಾಧಿಸುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜತೆಗೆ ಈಚೆಗೆ ಜಾರಿಗೊಳಿಸಿರುವ ಎಪಿಎಂಸಿ ಕಾಯಿದೆಯೂ ಕೂಡ ರೈತರಿಗೆ ಮಾರಕವಾಗಿದೆ. ರೈತರ ಹಿತ ಕಾಪಾಡಬೇಕಾದ ಸರಕಾರ ಈ ರೀತಿಯ ಅವೈಜ್ಞಾನಿಕ ಕಾಯಿದೆಯನ್ನು ಜಾರಿಗೊಳಿಸುತ್ತಿದೆ. ಇದರಿಂದಾಗಿ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುವುದಿಲ್ಲ. ಈಚೆಗೆ ಕೇಂದ್ರ ಸರಕಾರ 14 ಬೆಳೆಗಳಿಗೆ ಘೋಷಿಸಿದ ಕನಿಷ್ಠ ಬೆಂಬಲ ಬೆಲೆಕಳಡದ ವರ್ಷ ಘೋಷಣಡ ಮಾಡಲಾದ ಬೆಲೆಗಿಂತ ಕಡಿಮೆ ಇದೆ. ಬಿಜೆಪಿ ಸರಕಾರ ಜಾರಿಗೊಳಿಸಿರುವ ಭೂ ಸುಧಾರಣಾ ತಿದ್ದುಪಡಿ ಕಾಯಿದೆ, ಎಪಿಎಂಸಿ ಕಾಯಿದೆ, ಎಂಎಸ್ ಪಿ ನೀತಿ, ಹೊಸ ವಿದ್ಯುತ್ ನೀತಿ, ಹೊಸ ಬೀಜ ನೀತಿ ಸೇರಿದಂತೆ ಅನೇಕ ಯೋಜನೆಗಳು ಕಾರ್ಪೋರೆಟ್ ಗಳಿಗೆ ಸಹಾಯಕವಾಗುವ ರೈತ ವಿರೋಧಿ ಕಾಯಿದೆಗಳನ್ನು ಜಾರಿಗೊಳಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಸರಕಾರ ರೈತರಿಗೆ ಮಾರಕವಾಗಿರುವ ಭೂ ಸುಧಾರಣಾ ತಿದ್ದುಪಡಿ ಕಾಯಿದೆ, ಎಪಿಎಂಸಿ ಕಾಯಿದೆ ಸೇರಿದಂತೆ ರೈತರ ವಿರೋಧಿ ಕಾಯಿದೆಗಳನ್ನು ಹಿಂಪಡೆದುಕೊಳ್ಳಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.
ರೈತ ಮುಖಂಡರಾದ ಚೂನಪ್ಪ ಪೂಜೇರಿ, ಅಶೋಕ ಯಮಕನಮರಡಿ, ರಾಘವೇಂದ್ರ ನಾಯಕ, ಜಯಶ್ರೀ ಗುರನ್ನವರ ಮೊದಲಾದವರು ಉಪಸ್ಥಿತರಿದ್ದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ