ಬೆಳಗಾವಿ, – ಜಿಲ್ಲೆಯಲ್ಲಿ ಪದೇ ಪದೆ ಪ್ರವಾಹಭೀತಿ ಎದುರಾಗುತ್ತಿರುವುದರಿಂದ ಇದುವರೆಗೆ ಪ್ರವಾಹ ಮತ್ತು ಅತಿವೃಷ್ಟಿಯಿಂದ ಆಗಿರುವ ಮೂಲಸೌಕರ್ಯಗಳು ಮತ್ತಿತರ ಹಾನಿಯನ್ನು ಸರಿಪಡಿಸಲು ಆದ್ಯತೆಯ ಮೇರೆಗೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ(ಅ.20) ನಡೆದ ಜಿಲ್ಲಾ ಪ್ರಗತಿ ಪರಿಶೀನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡು ಮನೆನಿರ್ಮಾಣಕ್ಕೆ ವಿವಿಧ ಕಂತಿನಲ್ಲಿ ಪರಿಹಾರ ಪಡೆದುಕೊಂಡು ನಿರ್ಮಣಕಾರ್ಯ ಆರಂಭಿಸದಿರುವವರಿಗೆ ನೋಟಿಸ್ ನೀಡಿ ಸರ್ಕಾರದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಅತೀಕ್ ತಿಳಿಸಿದರು.
ಮಳೆ ಮತ್ತು ಕೋವಿಡ್ ಕಾರಣಕ್ಕೆ ಅನೇಕ ಗ್ರಾಮೀಣ ಕುಡಿಯುವ ನೀರು ಯೋಜನೆಗಳು ವಿಳಂಬವಾಗಿವೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಹೆಚ್ಚಿನ ಅವಧಿ ಕಾರ್ಯನಿರ್ವಹಿಸುವ ಮೂಲಕ ತಕ್ಷಣವೇ ಟೆಂಡರ್ ಕರೆದು ನಿಗದಿತ ಆರ್ಥಿಕ ಮತ್ತು ಭೌತಿಕ ಪ್ರಗತಿ ಸಾಧಿಸುವಂತೆ ಅತೀಕ್ ಸೂಚನೆ ನೀಡಿದರು.
ಜಲಜೀವನ್ ಮಿಷನ್ ಅಡಿಯಲ್ಲಿ ಪ್ರತಿ ಮನೆಗೆ ನಳದ ಸಂಪರ್ಕ ಒದಗಿಸಲು ಪ್ರಯತ್ನಿಸಬೇಕು ಎಂದರು.
ಜಿಲ್ಲೆಯ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳು ಹಾಗೂ ವೈದ್ಯಕೀಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡ ಅತೀಕ್ ಅವರು, ಹೆರಿಗೆಗೆ ಸರ್ಕಾರಿ ಆಸ್ಪತ್ರೆಗೆ ಬರುವವರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಇರುವ ಸರ್ಕಾರಿ ಜಮೀನುಗಳನ್ನು ಬಳಸಿಕೊಂಡು ಜನರಿಗೆ ಅಗತ್ಯವಾದ ಕುಡಿಯುವ ನೀರು ಮತ್ತಿತರ ಸೌಲಭ್ಯಗಳನ್ನು ಒದಗಿಸಬೇಕು ಎಂದು ಸಲಹೆ ನೀಡಿದರು.
ಪ್ರತಿವರ್ಷವೂ ಎದುರಾಗುವ ಜಲಕ್ಷಾಮ ನೀಗಿಸಲು ಅಂತರ್ಜಲಮಟ್ಟ ವೃದ್ಧಿಗೆ ಸಂಬಂಧಿಸಿದ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಅತೀಕ್ ತಿಳಿಸಿದರು.
ಮಳೆಯ ಪ್ರಮಾಣ, ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ತೆಗೆದುಕೊಂಡ ಕ್ರಮಗಳು, ಬೀಜ-ಗೊಬ್ಬರಗಳ ಲಭ್ಯತೆ, ಮೇವು ದಾಸ್ತಾನು, ರಸ್ತೆ-ಕಟ್ಟಡಗಳು, ಶಾಲಾ ಮತ್ತು ಅಂಗನವಾಡಿ ಕಟ್ಟಡಗಳು ಸೇರಿದಂತೆ ವಿವಿಧ ಮೂಲಸೌಕರ್ಯಗಳ ಹಾನಿ, ವೈದ್ಯಕೀಯ ಸೌಲಭ್ಯಗಳ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.
ಕೋವಿಡ್-೧೯ ಇಳಿಮುಖ- ಜಿಲ್ಲಾಧಿಕಾರಿ ಹಿರೇಮಠ:
ಜಿಲ್ಲೆಯಲ್ಲಿ ಇದುವರೆಗೆ ಅತಿವೃಷ್ಟಿಯಿಂದ 4 ಜನರು 13 ಜಾನುವಾರಗಳ ಜೀವಹಾನಿಯಾಗಿದ್ದು, ಸಂಬಂಧಿಸಿದ ಕುಟುಂಬದವರಿಗೆ ಈಗಾಗಲೇ ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಜಿಲ್ಲೆಯಲ್ಲಿ ಪೂರ್ಣ ಹಾಗೂ ಭಾಗಶಃ ಸೇರಿದಂತೆ ಒಟ್ಟಾರೆ 4619 ಮನೆಗಳ ಹಾನಿಯಾಗಿದೆ. ಅದೇ ರೀತಿ
1.66 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದ್ದು, ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ.
ಜಿಲ್ಲೆಯಲ್ಲಿ 14 ಸಾವಿರ ರೈತರಿಗೆ 6.40 ಕೋಟಿ ಬೆಳೆಹಾನಿ ಪರಿಹಾರ ಬಿಡುಗಡೆ ಮಾಡಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಕೋವಿಡ್-೧೯ ಪರಿಸ್ಥಿತಿ ಕೂಡ ಕ್ರಮೇಣ ನಿಯಂತ್ರಣಕ್ಕೆ ಬಂದಿದ್ದು, ಆಕ್ಸಿಜನ್ ಬೇಡಿಕೆ ಇಳಿಮುಖವಾಗಿದೆ ಎಂದು ತಿಳಿಸಿದರು.
ಎಲ್ಲ ಹದಿನಾಲ್ಕು ತಾಲ್ಲೂಕುಗಳಲ್ಲಿ ಪವಿತ್ರ ವನ ನಿರ್ಮಾಣಕ್ಕೆ ಐದು ಎಕರೆ ಜಮೀನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.
ರೈತ ಸೌಲಭ್ಯಕ್ಕೆ ಒಂದೇ ಪ್ಯಾಕೇಜ್:
ಅಂಗನವಾಡಿ ಕಟ್ಟಡಗಳಿಗೆ ವಿಟ್ರಿಫೈಡ್ ಟೈಲ್ಸ್ ಗಳನ್ನು ಬಳಸಿ ಕಟ್ಟಡಗಳ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ನಿವೇಶನ ಕೊರತೆಯಿಲ್ಲ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ. ತಿಳಿಸಿದರು.
ಕೃಷಿ, ತೋಟಗಾರಿಕೆ ಮತ್ತಿತರ ಇಲಾಖೆಯ ಯೋಜನೆಗಳನ್ನು ಒಂದೇ ಪ್ಯಾಕೇಜ್ ಅಡಿಯಲ್ಲಿ ರೈತರಿಗೆ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಮುಂದಿನ 25 ವಾರದವರೆಗೆ ಸಾಕಾಗುವಷ್ಟು ಮೇವು ದಾಸ್ತಾನು ಇದೆ. ಜಾನುವಾರು ಲಸಿಕೆ ಕಾರ್ಯಕ್ರಮ ಜಾರಿಯಲ್ಲಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಉಪ ನಿರ್ದೇಶಕ ಡಾ.ಅಶೋಕ ಕೊಳ್ಳಾ ತಿಳಿಸಿದರು.
ಮನೆ ನಿರ್ಮಾಣಕ್ಕೆ ಮನವೊಲಿಕೆ:
ಮನೆನಿರ್ಮಾಣಕ್ಕೆ ಕಂತಿನಲ್ಲಿ ಪರಿಹಾರ ಪಡೆದುಕೊಂಡು ನಿರ್ಮಣಕಾರ್ಯ ಆರಂಭಿಸದಿರುವವರಿಗೆ ನೋಟಿಸ್ ನೀಡಬೇಕು. ಆದಾಗ್ಯೂ ನಿರ್ಮಾಣ ಕಾರ್ಯ ಆರಂಭಿಸದಿದ್ದರೆ ಸರ್ಕಾರದ ಮಾರ್ಗಸೂಚಿ ಅನುಸಾರ ಫಲಾನುಭವಿಗಳ ಪಟ್ಟಿಯಿಂದ ಕೈಬಿಡಲಾಗುವುದು ಎಂದು ಬೈಲಹೊಂಗಲ ಉಪ ವಿಭಾಗಾಧಿಕಾರಿಗಳಾದ ಶಿವಾನಂದ ಭಜಂತ್ರಿ ತಿಳಿಸಿದರು.
ನಗರದ ವ್ಯಾಪ್ತಿಯಲ್ಲಿ ಪ್ರವಾಹದಿಂದ ಹಾನಿಗೊಳಗಾದ 628 ರ ಪೈಕಿ 104 ಮನೆಗಳ ನಿರ್ಮಾಣ ಕಾರ್ಯ ಇದುವರೆಗೆ ಆರಂಭಿಸಿಲ್ಲ. ಇಂತವರನ್ನು ಗುರುತಿಸಿ ಮನೆ ನಿರ್ಮಾಣ ಕಾರ್ಯ ಆರಂಭಿಸುವಂತೆ ಮನವೊಲಿಸಲಾಗುತ್ತಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತರಾದ ಜಗದೀಶ್ ಸಭೆಯಲ್ಲಿ ತಿಳಿಸಿದರು.
ಕೃಷಿ ಇಲಾಖೆಯ ವತಿಯಿಂದ ರೈತ ಕ್ರಿಯಾ ಯೋಜನೆ ಮೂಲಕ ರೈತರಿಗೆ ಅಗತ್ಯವಿರುವ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಹೇಳಿದರು.
ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಯುಕೇಶ್ ಕುಮಾರ್ ಸೇರಿದಂತೆ ಎಲ್ಲ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
****