ಬೆಳಗಾವಿ- ಆ ತಾಯಿಯ ಕರುಳ ಬಳ್ಳಿಯ ರೋಧನ… ಎದೆಯೆತ್ತರಕ್ಕೆ ಬೆಳೆದು ಮಗನ ಹೆಣದ ಮುಂದೆ ತಾಯಿ ಒಡಲ ರೋಧನ….
ಲಾಕ್‌ಡೌನ್ ಎನ್ನುವುದು ಹೇಗೆಲ್ಲ ವಿಧಿಯಾಟ ಆಡಿಸುತ್ತಿದೆಯಲ್ಲ ಎಂಬ ಆಕ್ರೋಶ
ಎಲ್ಲವೂ ನೋಡಿದಾಗ ಅಲ್ಲಿದ್ದಾಗ ದುಃಖ ಉಮ್ಮಳಿಸಿ ಬಂತು… ಅದನ್ನೆಲ್ಲ ಬರಿಯಬೇಕು ಅಂದ್ರೆ ನಡುಗುತ್ತಿರುವ ಕೈ ಇನ್ನು ನಿಂತಿಲ್ಲ..
ಇಷ್ಟೆಲ್ಲ ಪೀಠಿಕೆ ಏಕೆಂದರೆ ಲಾಕ್‌ಡೌನ್ ಮಧ್ಯೆ ಸ್ಮಶಾನ ಮೌನದಂತೆ ಇರೋ ಬೆಳಗಾವಿಯಲ್ಲಿ ನಡೆದ ನತದೃಷ್ಟ ತಾಯಿ-ಮಕ್ಕಳ ಕರುಣಾಜನಕ, ಕರುಳ ಬಳ್ಳಿ ಕಳೆದುಕೊಂಡು ಪಡಬಾರದ ಪರದಾಟ ಕಂಡ ಘಟನೆ ಇದೆ..
ಸಮಗ್ರ ವಿವರ ಇಲ್ಲಿದೆ:
ಈ ಲಾಕ್‌ಡೌನ್‌ದಿಂದ ಅದೆಷ್ಟ ಜನ ಇನ್ನೂ ಹಸಿವಿನಿಂದ ಸಾಯ್ತಾರೋ ಗೊತ್ತಿಲ್ಲ.. ಹಸಿವಿನಿಂದ ಸತ್ತ ಬಳಿಕ ಕೂಲಿ ಇಲ್ಲದ ಅದೆಷ್ಟೋ ಕುಟುಂಬಗಳು ಅಂತ್ಯಸಂಸ್ಕಾರವಾದರೂ ಹೇಗೆ ಮಾಡತಾವೋ ಎನ್ನುವ ಆತಂಕ ನನ್ನನ್ನು ಕಾಡುತ್ತಿದೆ. ಹಸಿವು-ಸಾವು-ಅಂತ್ಯಸಂಸ್ಕಾರ ಅಂತೆಲ್ಲ ಹೇಳಿದ್ದಕ್ಕೆ ಇವನಿಗೇನು ತಲೆ ಕೆಟ್ಟಿದೆಯಾ? ಹೀಗ್ಯಾಕೇ ಹೇಳತಿದಾನೆ ಅಂತಾ ನಿಮಗೆ ಅನಿಸಬಹುದು ಆದ್ರೆ ನಾನೀಗ ಹೇಳಲು ಹೊರಟಿರುವುದು ಇಂತಹ ಒಂದು ಮನಃ ಕಲಕುವ ಘಟನೆಗೆ ಬೆಳಗಾವಿಯಲ್ಲಿ ನಡೆದುಹೋಗಿರುವುದನ್ನು.
ಆಕೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕೋಥಳಿ ಗ್ರಾಮದ ವೃದ್ಧ ತಾಯಿ, ಆಕೆಯ ಮಗ ಸಾಗರ ಸಿಂಘೆ (32) ಅಂಗವಿಕಲ. ಅನಾರೋಗ್ಯದ ಕಾರಣ ತನ್ನ ಇನ್ನೊಬ್ಬ ಮಗಳ ಜೊತೆ ಮಗನನ್ನು ಕರೆದುಕೊಂಡ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಳು. ಆದರೆ ಆ ಅಂಗವಿಕಲ ಮಗನಿಗೆ ಚಿಕಿತ್ಸೆ ಫಲಿಸದೇ ನಿಧನ ಹೊಂದಿದ್ದನು. ಲಾಕ್‌ಡೌನ್ ಹಿನ್ನೆಲೆ ಒಂದೇ ಒಂದು ವಾಹನ ಇಲ್ಲ. ವಾಹನ ಸಿಕ್ಕರೂ ಕೈಯಲ್ಲಿ ಕಾಸಿಲ್ಲ. ಆಕೆಯ ಪರಿಸ್ಥಿತಿ ನೋಡಿದ ಜಿಲ್ಲಾಸ್ಪತ್ರೆಯ ವೈದ್ಯರೊಬ್ಬರು ಶವವನ್ನು ಊರಿಗೆ ತೆಗೆದುಕೊಂಡು ಹೋಗಲು ಆಗುವುದಿಲ್ಲ. ಇಲ್ಲೇ ಅಂತ್ಯಸಂಸ್ಕಾರ ಮಾಡಿ ಹೋಗಿ ಬಿಡಿ ಅಂತಾ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಡ್ತಾರೆ.ತನ್ನ ಮಗನ ಶವದ ಜೊತೆಗೆ ಆ ಹೆತ್ತ ಒಡಲು ಕಣ್ಣೀರು ಹಾಕುತ್ತ ಅಂಬ್ಯುಲೆನ್ಸ್ ಏರಿದಾಗ, ಅಂಬ್ಯುಲೆನ್ಸ್ ಬಂದು ನಿಂತಿದ್ದು ಸದಾಶಿವ ನಗರದ ಸ್ಮಶಾನದ ಬಳಿ… ಅಲ್ಲಿ ಬಂದರೆ ಮತ್ತೊಂದು ಸಮಸ್ಯೆ ಅದೇನೆಂದರೆ ಮಗನ ಶವ ದಹನ ಮಾಡುವುದಕ್ಕೆ ಕಟ್ಟಿಗೆಗೂ ಇವರ ಬಳಿ ಹಣವಿಲ್ಲ.
ಹೇಗಾದರೂ ಮಾಡಿ ಮಗನ ಅಂತ್ಯಸಂಸ್ಕಾರ ಮಾಡಬೇಕು ಎನ್ನುವ ಆ ಮಹಾತಾಯಿ ತನ್ನ ಮಗಳೊಂದಿಗೆ ಸೇರಿ ಸದಾಶಿವ ನಗರ ಸ್ಮಶಾನದಲ್ಲಿ ಶವ ಸಂಸ್ಕಾರ ಮಾಡಿ, ಅಳಿದುಳಿದು ಅಲ್ಲಲ್ಲಿ ಬಿದ್ದ ಕಟ್ಟಿಗೆ ಆರಿಸಲು ಶುರು ಮಾಡ್ತಾರೆ.ಅಯ್ಯೋ ವಿಧಿಯೆ.. ಇದೆಂತಹ ಪರೀಕ್ಷೆ. ಈ ಮಹಾತಾಯಿ ಮಾಡಿದ ಪಾಪವಾದರೂ ಏನು? ಅಂತಹ ದೃಶ್ಯ ಅಲ್ಲಿ ಕಂಡು ಬರುತ್ತೆ. ಒಂದೇಡೆ ಶವವಾಗಿ ಬಿದ್ದಿರುವ ಮಗ, ಆ ಕಡೆ ಆತನ ಅಂತಿಮ ವಿಧಿ ವಿಧಾನಕ್ಕೆ ಸ್ಮಶಾನದಲ್ಲಿ ಓಡಾಡಿ ಕಟ್ಟಿಗೆ ಸೇರಿಸ್ತಾ ಇರೋ ತಾಯಿ-ಮಗಳು…
ಇದನ್ನೆಲ್ಲ ನೋಡಿರ ಆ ಅಂಬ್ಯುಲೆನ್ಸ್ ಚಾಲಕ ಪತ್ರಕರ್ತರೊಬ್ಬರಿಗೆ ಫೋನ್ ಮಾಡಿ ವಿಷಯ ತಿಳಿಸುತ್ತಾನೆ. ತನ್ನ ಕ್ಯಾಮರಾಮನ್ ದೊಂದಿಗೆ ಆ ಪತ್ರಕರ್ತ ಅಲ್ಲಿಗೆ ಹೋದಾಗ.. ಕಣ್ಣೀರ ಧಾರೆ ಹರಿಯುತ್ತ ಇರುತ್ತೆ.. ಕೊನೆಗೆ ಸುದ್ದಿವಾಹನಿಯ ಆ ಪತ್ರಕರ್ತ ಶವ ಸಂಸ್ಕಾರಕ್ಕೆ ಎಲ್ಲ ವ್ಯವಸ್ಥೆ ಮಾಡುವುದರ ಜೊತೆಗೆ ಆ ತಾಯಿಗೆ ಕೈಲಾದಮಟ್ಟಿಗೆ ಸಹಾಯ ಮಾಡಿ ಮನೆಗೆ ಕಳುಹಿಸಿ ಕೊಡುತ್ತಾರೆ.
ದುರಂತ ಅಂದ್ರೆ ಆ ತಾಯಿಯ ಕರುಳಬಳ್ಳಿಯ ಸಂಕಟ, ಬಡತನದ ಈ ಬವನೆಯನ್ನೆಲ್ಲ ನೋಡಿ ಬಂದ ಬಳಿಕ ಇನ್ನು ನಡುಗುತ್ತಿರುವ ಕೈ ನಿಂತಿಲ್ಲ.. ಉಮ್ಮಳಿಸಿ ಬಂದ ದುಃಖದ ಕಣ್ಣೀರು ಇನ್ನು ನಿಂತಿಲ್ಲ.
ಸುದ್ಧಿ ಮಾಡಲು ಹೋಗಿ ಆ ಮಹಾ ತಯಿಯ ನೆರವಿಗೆ ನಿಂತ ಪತ್ರಿಕಾ ಮಿತ್ರನಿಗೆ ನನ್ನ ಸಲಾಂ….