ಬೆಳಗಾವಿ,- ನಮ್ಮ ಕನ್ನಡಿಗರೇ ಅಧಿಕ ಸಂಖ್ಯೆಯಲ್ಲಿರುವ ಕನ್ನಡದ ನಾಡು ನುಡಿಯ ಬಗ್ಗೆ ಅಪಾರ ಅಭಿಮಾನ ಉಳ್ಳ ಮಹಾರಾಷ್ಟ್ರದ ಜತ್ತ, ಅಕ್ಕಲಕೋಟೆ ಹಾಗೂ ದಕ್ಷಿಣ ಸೊಲ್ಲಾಪುರದ ಗಡಿ ಭಾಗದಲ್ಲಿ ಅನ್ಯ ಭಾಷಿಕರ ಸಮೀಕ್ಷೆ ನಡೆಸಲು ಮಹಾರಾಷ್ಟ್ರ ಸರ್ಕಾರ ಗ್ರಾಮ ಪಂಚಾಯತಿಗಳಿಗೆ ಆದೇಶ ನೀಡಿದೆ ಎಂಬುದು ತುಂಬಾ ಅಸಂಗತ ಅಪ್ರಸ್ತುತ ಖಂಡನೀಯ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಇದನ್ನು ರಾಜ್ಯದ ಕನ್ನಡಿಗರೆಲ್ಲ ವಿರೋಧಿಸುತ್ತೇವೆ ಅಲ್ಲಿನ ಕನ್ನಡಿಗರನ್ನು ಮಹಾರಾಷ್ಟ್ರಸರ್ಕಾರ ಇಂತಹ ಸಮೀಕ್ಷೆ ಯ ಮೂಲಕ ಹೆದರಿಸುವ ಪ್ರಯತ್ನ ಮಾಡಬಾರದು ಎಂದು ಹೇಳಿದ್ದಾರೆ.
ಸೌಹಾರ್ದತೆಯಿಂದ ಸೌಜನ್ಯದಿಂದ ಇರುವ ಮಹಾರಾಷ್ಟ್ರದಲ್ಲಿನ ಕನ್ನಡಿಗರಿಗೆ ಅಲ್ಲಿನ ಸರ್ಕಾರವು ಗೌರವ ಹಾಗೂ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಭದ್ರತೆ ಯನ್ನು ನೀಡಬೇಕಾದುದು ಸಂವಿಧಾನಾತ್ಮಕವಾದ ಕರ್ತವ್ಯ. ಅನಗತ್ಯವಾಗಿ ಆಗಾಗ್ಗೆ ಗಡಿ ಭಾಗದಲ್ಲಿನ ಕನ್ನಡಿಗರ ಸ್ವಾಭಿಮಾನ ವನ್ನು ಕೆಣಕುವ ಕಾರ್ಯವನ್ನು ಮಹಾರಾಷ್ಟ್ರ ಸರ್ಕಾರ ಮಾಡದಿರಲಿ ಎಂದು ಆಗ್ರಹ ಪಡಿಸುತ್ತೇವೆ.
ಅ ಭಾಗದ ಗಡಿ ನಾಡಿನ ಕನ್ನಡಿಗರ ಜೊತೆ ನಮ್ಮ ನೆಚ್ಚಿನ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಕರ್ನಾಟಕ ಸರ್ಕಾರ ಸದಾ ಸ್ಪಂದಿಸುತ್ತದೆ ಎಂಬ ಭರವಸೆ ನೀಡ ಬಯಸುತ್ತೇವೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ ತಿಳಿಸಿದ್ದಾರೆ.
****