ಬೆಳಗಾವಿ, ಮುಂಬರುವ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯಮಂತ್ರಿಗಳಿಗೆ ಆಹ್ವಾನಿಸಲು ಮಹಾಪೌರರ ನೇತೃತ್ವದಲ್ಲಿ ನಿಯೋಗ ಕೊಂಡೊಯ್ಯಲು ಮತ್ತು ಒಂದು ಕೋಟಿ ರೂಪಾಯಿ ವಿಶೇಷ ಅನುದಾನ ಕೋರಿ ಪ್ರಸ್ತಾವ ಕಳಿಸಲು ನಿರ್ಧರಿಸಲಾಗಿದೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ (ಅ.25) ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಿದ್ಧತೆ ಕುರಿತ ಪೂರ್ವಭಾವಿ ಸಭೆಯಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರ ಒತ್ತಾಯದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಯಿತು.
ಕಳೆದ ಸಭೆಯಲ್ಲಿ ಸಿಎಂ ಆಹ್ವಾನಿಸಲು ಚರ್ಚಿಸಲಾಗಿತ್ತು. ಆ ಪ್ರಕಾರ ಇದವರೆಗೆ ಯಾವುದೇ ಕೆಲಸವಾಗಿಲ್ಲ ಎಂದು ಅನಂತಕುಮಾರ್ ಬ್ಯಾಕೋಡ್ ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ದನಿಗೂಡಿಸಿದ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಅವರು, ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡುವುದರ ಜತೆಗೆ ರಾಜ್ಯೋತ್ಸವಕ್ಕೆ ವಿಶೇಷವಾಗಿ ಒಂದು ಕೋಟಿ ರೂಪಾಯಿ ಅನುದಾನ ಕೋರಿ ತಕ್ಷಣ ಪ್ರಸ್ತಾವ ಕಳಿಸಬೇಕು ಎಂದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು, ಈ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಚರ್ಚಿಸಲಾಗಿದೆ. ಅನುದಾನ ಕೋರಿ ಜಿಲ್ಲಾಡಳಿತದಿಂದ ಪ್ರಸ್ತಾವ ಕಳಿಸಲಾಗುವುದು ಎಂದು ಭರವಸೆ ನೀಡಿದರು.
ಈ ಬಾರಿ ರಾಜ್ಯೋತ್ಸವ ಮೆರವಣಿಗೆ ವೇಳೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾಬೊಮ್ಮನಹಳ್ಳಿ ಹಾಗೂ ಪೊಲೀಸ್ ಆಯುಕ್ತ ಡಾ.ಡಿ.ಸಿ.ರಾಜಪ್ಪ ಪ್ರಕಟಿಸಿದರು.
ನಿಯೋಗ ಮೇಯರ್ ಒಪ್ಪಿಗೆ:
ರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ಕೂಡಲೇ ನೇತೃತ್ವ ಕೊಂಡೊಯ್ಯಲಾಗುವುದು ಎಂದು ಮೇಯರ್ ಬಸಪ್ಪ ಚಿಕ್ಕಲದಿನ್ನಿ ತಿಳಿಸಿದರು.
ರಾಜ್ಯೋತ್ಸವ ವೇಳೆ ಐವರು ಕನ್ನಡಪರ ಹೋರಾಟಗಾರರನ್ನು ಸನ್ಮಾನಿಸಲು ತೀರ್ಮಾನಿಸಲಾಗಿತ್ತು. ಆ ಪ್ರಕಾರ ಆಯ್ಕೆ ಸಮಿತಿ ಸಭೆ ನಡೆಸಿ ಐವರನ್ನು ಆಯ್ಕೆ ಮಾಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಚನ್ನಮ್ಮ ಪುತ್ಥಳಿಗೆ ಬಣ್ಣ:
ಬೆಳಗಾವಿ ನಗರದ ಪ್ರಮುಖ ವೃತ್ತದಲ್ಲಿ ಇರುವ ಕಿತ್ತೂರು ಚನ್ನಮ್ಮ ಪುತ್ಥಳಿಯ ಬಣ್ಣ ಮಾಸಿರುವುದರಿಂದ ಹೊಸದಾಗಿ ಬಣ್ಣ ಹಚ್ಚಲಾಗುತ್ತಿದೆ.
ಅದರ ಜತೆಗೆ ಪುತ್ಥಳಿಯ ಸುತ್ತಲಿನ ಕಟ್ಟೆಯನ್ನು ನವೀಕರಿಸಿ ದೀಪಾಲಂಕಾರ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಶಶಿಧರ್ ಕುರೇರ್ ತಿಳಿಸಿದರು.
ಅಂಗಡಿ-ಮುಂಗಟ್ಟುಗಳ ಫಲಕಗಳನ್ನು ಕಡ್ಡಾಯವಾಗಿ ಕನ್ನಡಕ್ಕೆ ಆದ್ಯತೆ ನೀಡಬೇಕು. ನಿಯಮ ಉಲ್ಲಂಘಿಸುವವ ಲೈಸೆನ್ಸ್ ಅಮಾನತು ಮಾಡುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಪರೇಡ್ ವ್ಯವಸ್ಥೆ:
ಪ್ರತಿವರ್ಷದಂತೆ ಅಚ್ಚುಕಟ್ಟಾಗಿ ಪರೇಡ್ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಡಾ.ಡಿ.ಸಿ.ರಾಜಪ್ಪ ತಿಳಿಸಿದರು.
ಕಳೆದ ವರ್ಷ ಒಟ್ಟು 80 ಸ್ತಬ್ಧ ಚಿತ್ರಗಳನ್ನು ರೂಪಿಸಲಾಗಿತ್ತು. ಅದರಲ್ಲಿ 18 ಸರ್ಕಾರಿ ಇಲಾಖೆಗಳ ಸ್ತಬ್ಧಚಿತ್ರಗಳಿದ್ದವು.
ಅದೇ ಪ್ರಕಾರ ಈ ಬಾರಿಯೂ ರೂಪಕ ನಿರ್ಮಿಸಬೇಕು. ಅವುಗಳನ್ನು ಸಾಲಾಗಿ ಕ್ರಮ ಸಂಖ್ಯೆಯ ಅನ್ವಯವೇ ಮೆರವಣಿಗೆಯಲ್ಲಿ ಸಾಗಬೇಕು ಎಂದು ತಿಳಿಸಲಾಯಿತು.
ರಾಜ್ಯೋತ್ಸವದ ದಿನದಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಂಗಮಂದಿರದಲ್ಲಿ ನಡೆಸುವ ಬದಲು ನವೆಂಬರ್ 2 ರಂದು ಸಾರ್ವಜನಿಕ ಸ್ಥಳದಲ್ಲಿ ನಡೆಸಬೇಕು ಎಂದು ಮೆಹಬೂಬ್ ಮಕಾನದಾರ ಸಲಹೆ ನೀಡಿದರು.
ಇದೇ ಪ್ರಕಾರ ಕಾರ್ಯಕ್ರಮ ಆಯೋಜಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಉಪಾಹಾರ ರಿಯಾಯಿತಿ:
ನಗರದ ಹೋಟೆಲ್ ಮಾಲೀಕರ ಸಂಘದ ವತಿಯಿಂದ ರಾಜ್ಯೋತ್ಸವ ದಿನ 10 ಸಾವಿರ ಲಾಡುಗಳನ್ನು ವಿತರಿಸಲು ಒಪ್ಪಿಕೊಂಡಿದ್ದಾರೆ. ಅದೇ ರೀತಿ ಅಂದು ತಮ್ಮ ಹೋಟೆಲ್ ಗಳಲ್ಲಿ ಉಪಾಹಾರ ದರದಲ್ಲಿ ಶೇ. 25 ರಿಯಾಯಿತಿ ನೀಡಲಿದ್ದಾರೆ ಎಂದು ಪಾಲಿಕೆ ಆಯುಕ್ತ ಶಶಿಧರ್ ಕುರೇರ್ ತಿಳಿಸಿದರು.
ಕನ್ನಡ ಚಿತ್ರಮಂದಿರಗಳಲ್ಲಿ ನವೆಂಬರ್ ಒಂದರಂದು ಕಡ್ಡಾಯವಾಗಿ ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸಲು ಕ್ರಮಕೈಗೊಳ್ಳುವಂತೆ ಸೂಚಿಸಲಾಯಿತು.
ಕನ್ನಡಪರ ಹೋರಾಟಗಾರರಾದ ಮಾಜಿ ಮೇಯರ್ ಸಿದ್ದನಗೌಡ ಪಾಟೀಲ, ಮಹದೇವ ತಳವಾರ, ಶ್ರೀನಿವಾಸ್ ತಾಳೂರಕರ ಸಲಹೆ ಸೂಚನೆಗಳನ್ನು ನೀಡಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್, ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹೆಚ್.ಬಿ., ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವೀಂದ್ರ ಗಡಾದಿ, ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.