ಬೆಳಗಾವಿ
ರಾಜಕೀಯ ದುರುದ್ದೇಶಕ್ಕಾಗಿ ಬೆಳಗಾವಿ ಜಿಲ್ಲಾ ವಿಭಜನೆ ಮಾಡುವ ನಿರ್ಧಾರವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಬಾರದು ಎಂದು ಕನ್ನಡ ಹೋರಾಟಗಾರ ಅಶೋಕ ಚಂದರಗಿ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 1997ರಲ್ಲಿ ಬೆಳಗಾವಿ ಜಿಲ್ಲೆಯನ್ನು ಜಿ.ಎಚ್.ಪಟೇಲರು ವಿಭಜನೆ ಮಾಡಲು ನಿರ್ಣಯ ತೆಗೆದುಕೊಂಡಾಗ ಅದಕ್ಕೆ ಜನರು ವಿರೋಧ ಮಾಡಿದಾಗ ಅದನ್ನು ಹಿಂದೆ ತೆಗೆದುಕೊಂಡರು. ಆದರೆ ಕುಮಾರಸ್ವಾಮಿ ಅವರು ಗಡಿ ವಿಷಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ವ್ಯಕ್ತವಾಗುತ್ತಿದೆ. ಜಿಲ್ಲಾ ವಿಭಜನೆ ಮಾಡುವ ಮುನ್ನ ಆಯಾ ತಾಲೂಕಿನ ಜನರ ಅಭಿಪ್ರಾಯ ಸಂಗ್ರಹಿಸಬೇಕು. ಅದನ್ನು ಬಿಟ್ಟು ಜಿಲ್ಲಾ ವಿಭಜನೆ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಮೇಯರ್ ಸಿದ್ದನಗೌಡ ಪಾಟೀಲ ಮಾತನಾಡಿ, ಉತ್ತರ ಕರ್ನಾಟಕದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಯಾವುದೇ ಕಾರಣಕ್ಕೂ ಜಿಲ್ಲಾ ವಿಭಜನೆ ಮಾಡಬಾರದು.ಗೋಕಾಕ ಜಿಲ್ಲೆ ವಿಭಜನೆ ಮಾಡಿದರೆ ಬೈಲಹೊಂಗಲ ಜನರು ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ರಾಮದುರ್ಗದ ಜನರು ಬಾಗಲಕೋಟೆ ಗೆ ಸೇರಿಸಿ ಎನ್ನುತ್ತಿದ್ದಾರೆ. ಬೆಳಗಾವಿ ವಿಭಜನೆ ಮಾಡಿದರೆ ಖಾನಾಪುರ, ಹುಕ್ಕೇರಿ ಮಾತ್ರ ಉಳಿಯುತ್ತದೆ. ಸುಪ್ರೀಂ ಕೋರ್ಟ ಆದೇಶ ಬರುವ ವರೆಗೂ ಬೆಳಗಾವಿ ಜಿಲ್ಲೆ ವಿಭಜನೆ ಮಾಡುವುದುಬೇಡ. ಜಿಲ್ಲಾ ವಿಭಜನೆ ಮಾಡುವ ಮುನ್ನ ಜನರ ಅಭಿಪ್ರಾಯ ಸಂಗ್ರಹಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಕರವೇ ಜಿಲ್ಲಾಧ್ಯಕ್ಷ ಮಹಾದೇವ ತಳವಾರ, ಯುವ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ಕನಸೆ ಜಿಲ್ಲಾಧ್ಯಕ್ಷ ಬಾಬು ಸಂಗೋಡಿ, ಗಣೇಶ ರೋಕಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.