ಬೆಳಗಾವಿ
ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸೇರ್ಪಡೆಯಾಗಿ ಮೆಟ್ರೋಪಾಲಿಟಿನ್ ಸಿಟಿಯಾಗುವತ್ತ ದಾಪುಗಾಲು ಹಾಕುತ್ತಿರುವ ಬೆಳಗಾವಿ ನಗರ ದೇಶದ ಗಮನ ಸೆಳೆಯುತ್ತಿದೆ. ಕುಂದಾನಗರಿ ಬೆಳಗಾವಿ ಮಹಾನಗರ ಪಾಲಿಕೆ ನಗರದ ಹತ್ತು ವಾರ್ಡ್‍ಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಿರುವ 24*7 ನಿರಂತರ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಈಗ ಹಿಮಾಚಲ್ ಪ್ರದೇಶದ ಶಿಮ್ಲಾ ಪಾಲಿಕೆಯ ಗಮನ ಸೆಳೆದಿರುವುದು ಹೆಮ್ಮೆಯ ಸಂಗತಿಯಾಗಿದೆ.
ಶಿಮ್ಲಾ ಮಹಾನಗರ ಪಾಲಿಕೆಯ ಉಪಮೇಯರ್ ರಾಕೇಶ್ ಶರ್ಮಾ ಸೇರಿದಂತೆ 14ಜನ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳ ತಂಡ ಶುಕ್ರವಾರ ಬೆಳಗಾವಿ ಮಹಾನಗರ ಪಾಲಿಕೆಗೆ ಭೇಟಿ ನೀಡಿ ನಿರಂತರ ನೀರು ಪೂರೈಕೆಯ ಯೋಜನೆ ಕುರಿತು ಅಧ್ಯಯನ ನಡೆಸಿತು.
ಬೆಳಗಾವಿಯ ಅಧಿಕಾರಿಗಳು ಶಿಮ್ಲಾ ತಂಡಕ್ಕೆ ಪಾಲಿಕೆಯ ಸಭಾಂಗಣದಲ್ಲಿ ಬೆಳಗಾವಿ ನಗರದ ನೀರು ಸರಬರಾಜು ಯೋಜನೆಯ ವ್ಯವಸ್ಥೆಯ ಬಗ್ಗೆ ಹಾಗೂ ನಿರಂತರ ನೀರು ಪೂರೈಕೆ ಯೋಜನೆಯ ಕುರಿತು ಪ್ರಜೆಂಟೇಶನ್ ತೋರಿಸಿ ಯೋಜನೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಬೆಳಗಾವಿ ನಗರದ ನೀರು ಪೂರೈಕೆಯ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದುಕೊಂಡು ಮಾತನಾಡಿದ ಶಿಮ್ಲಾ ಉಪಮೇಯರ್ ರಾಕೇಶ್ ಶರ್ಮಾ, ಬೆಳಗಾವಿ ನಗರ ಸುಂದರ ನಗರವಾಗಿದೆ. ಇಲ್ಲಿಯ ಹಸಿರು ವಾತಾವರಣ ನೋಡಿ ಮನಸೋತಿದ್ದೇವೆ. ನಮ್ಮ ಮನೆ ಬಿಟ್ಟು ಈಗ ನಾವು ಪ್ರವಾಸದಲ್ಲಿದ್ದೇವೆ. ಆದರೆ ಇಲ್ಲಿಯ ವಾತಾವರಣ ಕಂಡು ನಾವು ನಮ್ಮ ಮನೆ ಬಂದಿರುವ ಅನುಭವ ನಮಗಾಗುತ್ತಿದೆ. ಬೆಳಗಾವಿ ನಗರವನ್ನು ಅಭಿವೃದ್ಧಿ ಪಡಿಸುವಾಗ ಇಲ್ಲಿಯ ಗಿಡ-ಮರಗಳನ್ನು ತೆರವುಗೊಳಿಸದೆ, ನಗರವನ್ನು ಅಭಿವೃದ್ಧಿ ಪಡಿಸಿರುವ ವಿಷಯ ನಮಗೆ ಅಚ್ಛರಿಗೊಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನೀರು ಸೋರಿಕೆಯಾಗದಂತೆ ಒಂದೇ ಜಾಗದಲ್ಲಿ ಕುಳಿತು ನೀರು ಪೂರೈಕೆ ವ್ಯವಸ್ಥೆಯನ್ನು ನಿರ್ವಹಣೆ ಮಾಡುವುದು ಸೇರಿದಂತೆ ಬೆಳಗಾವಿ ನಗರದ ನೀರು ಪೂರೈಕೆ ವ್ಯವಸ್ಥೆ ನಮಗೆ ಮೆಚ್ಚುಗೆಯಾಗಿದೆ. ಇದೇ ಮಾದರಿಯಲ್ಲಿ ಶಿಮ್ಲಾದಲ್ಲಿಯೂ ಬೆಳಗಾವಿ ವ್ಯವಸ್ಥೆಯನ್ನು ಅನುಸರಿಸುತ್ತೇವೆ ಎಂದು ರಾಕೇಶ್ ಶರ್ಮಾ ಬೆಳಗಾವಿ ಮಹಾನಗರ ಪಾಲಿಕೆಯ ಕಾರ್ಯ ವ್ಯವಸ್ಥೆಯ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
ಇದಾದ ಬಳಿಕ ಹಿಮಾಚಲ ಪ್ರದೇಶದ ಶಿಮ್ಲಾ ತಂಡ ಹಿಮಾಚಲ ಪ್ರದೇಶದ ಸಂಪ್ರದಾಯಿಕ ಉಡುಗೆಯಾಗಿರುವ ಶಿಮ್ಲಾ ಟೋಪಿಯನ್ನು ಬೆಳಗಾವಿಯ ಮೇಯರ್ ಬಸಪ್ಪ ಚಿಕ್ಕಲದಿನ್ನಿ, ಉಮಪೇಯರ್ ಮಧುಶ್ರೀ ಪೂಜಾರಿ, ಪಾಲಿಕೆ ಸದಸ್ಯ ದೀಪಕ ಜಮಖಂಡಿ, ಆಯುಕ್ತ ಶಶಿಧರ ಕುರೇರ ಅವರಿಗೆ ಹಾಕುವುದರ ಮೂಲಕ ಶಿಮ್ಲಾ ಟೋಪಿಯನ್ನು ಉಡುಗರೆಯಾಗಿ ನೀಡಿದರು.
ಪಾಲಿಕೆ ಸದಸ್ಯ ದಿನೇಶ ನಾಶಿಪುಡಿ ಶಿಮ್ಲಾ ತಂಡಕ್ಕೆ ಬೆಳಗಾವಿಯ ಪ್ರಸಿದ್ಧ ಕುಂದಾ ಬಾಕ್ಸ್‍ಗಳನ್ನು ನೀಡಿ ಗೌರವಿಸಿದರು.
ಬೆಳಗಾವಿ ಪಾಲಿಕೆ ಸದಸ್ಯರಾದ ಸರಳಾ ಹೇರೇಕರ್, ರೇಣು ಮುತಗೇಕರ, ಸರಿತಾ ಪಾಟೀಲ, ಲಕ್ಷ್ಮೀ ನಿಪ್ಪಾಣಿಕರ, ಎ.ಎಸ್.ಕಾಂಬಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.