ಬೆಳಗಾವಿ: ಅಶೋಕ ನಗರದ ಮಹಾನಗರ ಪಾಲಿಕೆ ಜಾಗದಲ್ಲಿ 1.75 ಕೋಟಿ ರೂ. ವೆಚ್ಚದ ವಿನೂತನ ಮಾದರಿಯ ಈಜುಗೊಳ ಹಾಗೂ 2 ಕೋಟಿ ರೂ. ವೆಚ್ಚದ ಬ್ಯಾಡ್ಮಿಂಟನ್ ಹಾಲ್ ನಿರ್ಮಿಸುವ ಶಾಸಕ ಪಿರೋಜ್ ಸೇಠ್ ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಶಾಸಕ ಫಿರೋಜ್ ಸೇಠ್ ಮಾತನಾಡಿ, ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದಷ್ಟೇ ಅಲ್ಲ, ಯುವಕ-ಯುವತಿಯರನ್ನು ಸದೃಢರನ್ನಾಗಿಸುವ ನಿಟ್ಟಿನಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡಲು 3.75 ಕೋಟಿ ರೂ. ವೆಚ್ಚದಲ್ಲಿ ಬ್ಯಾಡ್ಮಿಂಟನ್ ಹಾಲ್, ಈಜುಗೊಳ ನಿರ್ಮಿಸಲಾಗುತ್ತಿದೆ. ಇದರಿಂದ ಬೆಳಗಾವಿ ನಗರ ಸ್ಮಾರ್ಟ್ ಸಿಟಿಯಾಗುವ ಜತೆಗೆ, ದೇಶದ ಶಕ್ತಿಯಾದ ಯುವಕರು, ಮಕ್ಕಳು ಸ್ಮಾರ್ಟ್ ಆಗಲಿದ್ದಾರೆ ಎಂದರು.
ಮುಂದಿನ 4 ತಿಂಗಳೊಳಗಾಗಿ ಕಾಮಗಾರಿ ಮುಕ್ತಾಯಗೊಳ್ಳಲಿದ್ದು, ಮುಂದಿನ ವರ್ಷದ ವೇಳೆಗೆ ಐಪಿಎಲ್ ಪಂದ್ಯಗಳನ್ನು ಬೆಳಗಾವಿಗೆ ತರುವ ಆಸೆ ಇದೆ ಎಂದು ಹೇಳಿದರು.
ಈಗಾಗಲೇ ಕ್ಷೇತ್ರದಲ್ಲಿ ಹತ್ತಾರು ಅಭಿವೃದ್ಧಿ ಕಾಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರವು ಕೇಳಿದಷ್ಟು ಅನುದಾನ ನೀಡುತ್ತಿದೆ. ಮುಂದಿನ ಒಂದೂವರೆ ವರ್ಷದಲ್ಲಿ ಕ್ಷೇತ್ರದ ಬದಲಾಗಲಿದೆ ಎಂದರು.
ಪಾಲಿಕೆ ಆಯುಕ್ತರಾದ ಶಶಿಧರ ಕುರೇರ, ಸರ್ಕಾರದ 100 ಕೋಟಿ ರೂ. ಅನುದಾನದಲ್ಲಿ ಕ್ರೀಡಾ ಚಟುವಟಿಕೆಗೆ ಸಂಬಂಧಿಸಿದ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈಗ ಇದೇ ಮಾದರಿಯಲ್ಲಿ ಈಜುಗೊಳ, ಬ್ಯಾಡ್ಮಿಂಟನ್ ಹಾಲ್ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಶೇಖ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಅಬು ಶೇಖ್, ನಗರ ಸ್ಮಾರ್ಟ್ ಆದರೆ ಸಾಲದು. ನಗರದ ಜನರು ಸ್ಮಾರ್ಟ್ ಆಗಲು ಇಂಥ ಕಾಮಗಾರಿಗಳು ನಡೆಯುತ್ತಿರುವುದು ಶ್ಲಾಘನೀಯ. ಆರೋಗ್ಯ ಸದೃಢವಾಗಿದ್ದರೆ ಎಂಥ ಸಾಧನೆಗಳು ಸಾಧ್ಯ ಎಂದು ಹೇಳಿದರು.
ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ರಾಜು ಸೇಠ್, ಫೈಜಾನ್ ಸೇಠ್, ಜಗದೀಶ ಸವದತ್ತಿ, ಜಯಶ್ರೀ ಮಾಳಗಿ, ದಿನೇಶ ನಾಶಿಪುಡಿ, ಪಿಂಟು ಸಿದ್ಧಿಕಿ, ಜಮಾತ್ ಅಧ್ಯಕ್ಷ ತಹಸೀಲ್ದಾರ, ಡಾ.ತಿಮ್ಮಾಪುರ, ಅಶೋಕ ಪಟ್ಟಣ, ಆರ್.ಎಸ್.ನಾಯಕ, ರಾಜು ಪಾಟೀಲ ಮತ್ತಿತರರಿದ್ದರು.