ಬೆಳಗಾವಿ: ಇಲ್ಲಿನ ಬಿ.ಕೆ.ಮಾಡೆಲ್ ಪ್ರೌಢಶಾಲೆಯಲ್ಲಿ ಇಂದು ವಿಶ್ವ ಪರಿಸರ ದಿನ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಾಲೆಯ ಇಕೋ ಕ್ಲಬ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಗರ ವಲಯದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಿಜ್ವಾನ್ ನಾವಗೇಕರ್ ಅವರು ಮಾತನಾಡಿ, ಪರಿಸರ ಉಳಿದರೆ ಮಾತ್ರ ಜೀವ ಸಂಕುಲ ಉಳಿಯಲು ಸಾಧ್ಯ. ಗಿಡ ಮರಗಳನ್ನು ಹೆಚ್ಚೆಚ್ಚು ಬೆಳೆಸುವ ಮೂಲಕ ನಮ್ಮ ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆಧ್ಯ ಕರ್ತವ್ಯ ಎಂದು ತಿಳಿಸಿದರು.
ಮತ್ತೋರ್ವ ಅತಿಥಿ ಜಿಲ್ಲಾ ಮಲೇರಿಯಾ ನಿರ್ಮೂಲನಾ ಅಧಿಕಾರಿ ಸುರೇಶ ಮೇದಾರ ಅವರು ಸಸಿ ನೆಟ್ಟು ಕಾರ್ಯಕ್ರಮಕ್ಕೆ ಮೆರಗು ತಂದು ಕೊಟ್ಟರು.
ಶಾಲೆಯ ಮುಖ್ಯೋಪಾಧ್ಯಾಯೆ ಎಸ್.ಎ.ಚಾಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇಕೋ ಕ್ಲಬ್ ಸಂಚಾಲಕ ಆರ್.ಪಿ. ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಕ ಉಮೇಶ ಕುಲಕರ್ಣಿ ಸ್ವಾಗತಿಸಿ, ವಂದಿಸುವ ಮೂಲಕ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಲ್ಲ ಶಿಕ್ಷಕರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗಿಯಾಗಿ ಯಶಸ್ವಿಗೊಳಿಸಿದರು.