ಬೆಳಗಾವಿ: ಹಿರೇಕೋಡಿಯ ನಂದಿ ಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಕೊಲೆ ಪ್ರಕರಣದ ಆರೋಪಿಗಳಾದ ನಾರಾಯಣ ಮಾಳಿ ಹಾಗೂ ಹಸನ್‌ಸಾಬ್ ದಲಾಯತ್‌ರನ್ನು ಕಸ್ಟಡಿಗೆ ತೆಗೆದುಕೊಂಡು ಚಿಕ್ಕೋಡಿ ಡಿವೈಎಸ್‌ಪಿ ಬಸವರಾಜ ಯಲಿಗಾರ ನೇತೃತ್ವದಲ್ಲಿ ವಿಚಾರಣೆ ನಡೆಸುತ್ತಿದ್ದು, ಪ್ರಮುಖ ಆರೋಪಿ ನಾರಾಯಣ ಮಾಳಿ ಪಾಪಪ್ರಜ್ಞೆಯ ನಾಟಕವಾಡುತ್ತಿದ್ದು, ಪೊಲೀಸರ ದಾರಿ ತಪ್ಪಿಸುತ್ತಿದ್ದಾನೆಯೇ ಎಂಬ ಸಂಶಯ ಮೂಡಿಸಿದೆ.
ವಿಚಾರಣೆ ವೇಳೆ ನನ್ನಿಂದ ತಪ್ಪಾಗಿದೆ. ನೀವೇ ಗುಂಡು ಹಾರಿಸಿ ಕೊಲ್ಲಿ, ಇಲ್ಲ ನಾನೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದಾನೆ. ಜೈನಮುನಿಗಳ ಪರ್ಸನಲ್ ಆ ಡೈರಿ ಸುಟ್ಟು ಹಾಕಿರುವುದಾಗಿ ಹೇಳುತ್ತಿರುವ ಪ್ರಮುಖ ಆರೋಪಿ ನಾರಾಯಣ ಮಾಳಿ ಡೈರಿಯಲ್ಲಿ ಏನಿತ್ತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮುನಿಗಳ ಹತ್ಯೆಗೆ ಪ್ರಮುಖ ಕಾರಣ ತಿಳಿದುಕೊಳ್ಳಲು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಹಣಕಾಸಿನ ವ್ಯವಹಾರವೇ ಹತ್ಯೆಗೆ ಕಾರಣವೇ ? ಅಥವಾ ಬೇರೆ ಉದ್ದೇಶವೇನಾದರೂ ಇತ್ತಾ ಎಂಬುದನ್ನು ತಿಳಿದುಕೊಳ್ಳಲು ಪೊಲೀಸಲು ಪ್ರಯತ್ನ ನಡೆಸಿದ್ದಾರೆ.
ನಂದಿಪರ್ವತ ಆಶ್ರಮದಲ್ಲಿ ಶಾಲಾ ಕಟ್ಟಡ ಕಾಮಗಾರಿ ವೇಳೆ ಪರಿಚಿತನಾಗಿದ್ದ ನಾರಾಯಣ ಮಾಳಿ. ಕಟ್ಟಡ ಕಾಮಗಾರಿಗೆ ಮರಳು ಸೇರಿ ಇತರ ಸಾಮಗ್ರಿ ಸರಬರಾಜು ಮಾಡಿದ್ದ. ಹಿರೇಕೋಡಿ ಗ್ರಾಮದಲ್ಲೇ ಜಮೀನು ಲೀಸ್ ಪಡೆದು ಉಳುಮೆ ಮಾಡುತ್ತಿದ್ದ. ತೊಂದರೆಯಲ್ಲಿದ್ದಾಗ ಮುನಿಗಳ ಬಳಿ ಆಗಾಗ ಹಣ ಇಸಿದುಕೊಳ್ಳುತ್ತಿದ್ದ. ಆಚಾರ್ಯರು ನಂದಿಪರ್ವತ ಆಶ್ರಮದ ಪಕ್ಕದಲ್ಲಿ ಶ್ರೀ ೧೦೦೮ ಭಗವಾನ್ ಪಾರ್ಶ್ವನಾಥ ಕನ್ನಡ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಿದ್ದರು. ಕೋವಿಡ್ ವೇಳೆ ಅನಿವಾರ್ಯ ಕಾರಣದಿಂದ ಪ್ರಾಥಮಿಕ ಶಾಲೆ ಬಂದ್ ಮಾಡಲಾಗಿತ್ತು.