ಬೆಳಗಾವಿ- ಬಹುಶ ಭೂಮಿಯ ಮೇಲಿನ ಕರುಣೆ ದಯೆ,ಸಂಬಂಧಳ ಜೊತೆ ಸಂಸ್ಕಾರವೂ ಸಮಾಧಿಯಾದಂತೆ ಕಾಣುತ್ತಿದೆ.ಮಕ್ಕಳಿಗೆ ಹೆತ್ತವರ ಮೇಲೆಯೇ ಕರುಣೆ ಬರುತ್ತಿಲ್ಲ.ಮಕ್ಕಳು ಜೀವಂತ ಇದ್ದಾಗಲೂ ಅವರ ಕಣ್ಮುಂದೆ ಹೆತ್ತವರು ಬೀದಿ ಹೆಣವಾಗುವ ಘಟನೆಗಳು ನಡೆಯುತ್ತಿವೆ.ಇಂತಹ ಘಟನೆ ಬೆಳಗಾವಿ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿರುವದು ದುರ್ದೈವ.
ಇಂದಿನ ಯುವ ಪೀಳಿಗೆ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿರುವುದು ಭಾರತೀಯ ಸಂಸ್ಕೃತಿಯ ಆಧಾರಸ್ತಂಭವಾದ ಕುಟುಂಬ ವ್ಯವಸ್ಥೆಯ ಬುಡವನ್ನೇ ಅಲ್ಲಾಡಿಸುತ್ತಿದೆ. ತಂದೆ-ತಾಯಿ ಸಾಕ್ಷಾತ್ ದೇವರೆಂದು ನಡೆದುಕೊಳ್ಳುತ್ತಿದ್ದ ಮಕ್ಕಳಿಗೆ ಈಗ ವೃದ್ಧ ತಂದೆ-ತಾಯಿ ಭಾರವಾಗುತ್ತಿದ್ದಾರೆ. ಮಕ್ಕಳೇ ಆಸ್ತಿ ಎಂದು ನಂಬಿ ಹುಟ್ಟಿನಿಂದ ಬೆಳೆದು ದೊಡ್ಡವರಾಗುವವರೆಗೆ ಅಂಗೈಯಲ್ಲಿಟ್ಟುಕೊಂಡು ಸಾಕಿ-ಸಲುಹಿ ಜೀವನವನ್ನೇ ಧಾರೆ ಎರೆದ ಹೆತ್ತವರನ್ನೇ ನಿಷ್ಕರುಣೆಯಿಂದ ದೂರ ತಳ್ಳುತ್ತಿರುವ ಪರಿಣಾಮ ವೃದ್ಧಾಶ್ರಮಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿವೆ.
ಇದಕ್ಕೆ ಉತ್ತಮ ಉದಾಹಣರಣೆ ಎಂದರೆ ಚಿಕ್ಕೋಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮೊನ್ನೆ ನಡೆದ ಓರ್ವ ವೃದ್ಧನ ಅನಾಥ ಸಾವು. ಮಕ್ಕಳಿಬ್ಬರುಯ ವಿದೇಶದಲ್ಲಿ ನೆಲೆಸಿದ್ದರೂ, ತನ್ನ ಬಳಿಯೂ ಸಾಕಾಗುವಷ್ಟು ಹಣ ಇದ್ದರೂ ಕೊನೆಯ ಕಾಲದಲ್ಲಿ ಯಾರೂ ಇಲ್ಲದೆ ಅನಾಥ ಹೆಣವಾಗಿ ಮಣ್ಣಾಗಿದ್ದಾರುವ ಘಟನೆ ಕಲ್ಲಿನಂಥ ಹೃದಯವನ್ನೂ ಕರಗುವಂತೆ ಮಾಡಿದೆ.
ಘಟನೆಯ ವಿವರ….
ಮುಣೆಯ ನಿವಾಸಿಯಾದ ಮೂಲಚಂದ್ರ ಶರ್ಮಾ(೭೨) ಮಹಾರಾಷ್ಟ್ರದ ರಾಷ್ಟ್ರೀಕೃತ ಬ್ಯಾಂಕಿನ ನಿವೃತ್ತ ಮ್ಯಾನೇಜರ್ ಆಗಿದ್ದವರು. ಈಚೆಗೆ ಪಾರ್ಶ್ವವಾಯುವಿಗೆ ತುತ್ತಾಗ ಹಾಸಿಗೆ ಹಿಡಿದಿದ್ದರು. ಮಕ್ಕಳು ವಿದೇಶದಲ್ಲಿರುವ ಕಾರಣ ಆರೈಕೆಗೆಂದು ವೇತನದ ಮೇಲೆ ಓರ್ವ ವ್ಯಕ್ತಿಯನ್ನು ನೇಮಿಸಿಕೊಂಡಿದ್ದರು. ಗಡಿಭಾಗ ಚಿಕ್ಕೋಡಿಯ ನಾಗರಮುನ್ನೋಳಿಯಲ್ಲಿ ಪಾರ್ಶ್ವವಾಯುವಿಗೆ ಉತ್ತಮ ಚಿಕಿತ್ಸೆ ಸಿಗುತ್ತದೆ ಎಂಬುದನ್ನು ಕೇಳಿದ್ದ ಮೂಲಚಂದ್ರ ತನ್ನ ಸಹಾಯಕನ ಜೊತೆಗೆ ನಾಗರಮುನ್ನೋಳಿಗೆ ಬಂದು ಕಳೆದ ೨೬ ದಿನಗಳಿಂದ ವಸತಿ ಗೃಹದಲ್ಲಿ ವಾಸವಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಕೆಲ ದಿನಗಳ ಹಿಂದೆ ಅವರನ್ನು ಆರೈಕೆ ಮಾಡುತ್ತಿದ್ದ ವ್ಯಕ್ತಿ ಮೂಲಚಂದ್ರನನ್ನು ವಸತಿಗೃಹದಲ್ಲಿಯೇ ಬಿಟ್ಟು ಮಹಾರಾಷ್ಟ್ರಕ್ಕೆ ಮರಳಿ ಹೋಗಿದ್ದ, ಲಾಡ್ಜ್ ನಲ್ಲೇ ವಾಪಾಸಾಗಿದ್ದ. ಮೂಲಚಂದ್ರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ವಸತಿಗೃಹ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಚಿಕ್ಕೋಡಿ ಪಿಎಸ್‌ಐ ಬಸಗೌಡ ನೆರ್ಲಿ ಅವರು ವೃದ್ಧ ಶರ್ಮಾರನ್ನು ಬಿಟ್ಟು ಹೋದ ವ್ಯಕ್ತಿಗೆ ಕರೆ ಮಾಡಿ ವಿಚಾರಿಸಿದಾಗ ತಿಂಗಳ ಅವಧಿ ಮುಗಿದಿದ್ದರಿಂದ ತಾನು ಬಿಟ್ಟು ವಾಪಸ್ ಬಂದಿರುವೆ ಎಂದು ತಿಳಿಸಿದ್ದಾರೆ. ಕೂಡಲೇ ಚಿಕಿತ್ಸೆಗಾಗಿ ಚಿಕ್ಕೋಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿರುವ ಪೊಲೀಸರು, ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದರಿಂದ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಪೋಲೀಸರೇ ಈ ವೃದ್ಧನನ್ನು ನೋಡಿಕೊಂಡಿದ್ದರು.
ಮೂಲಚಂದ್ರನಿಂದ ಮಕ್ಕಳ ಬಗ್ಗೆ ಮಾಹಿತಿ ಪಡೆದು ದೂರವಾಣಿ ಕರೆ ಮಾಡಲು ಪ್ರಯತ್ನಿಸಿದರೂ ಸ್ಪಂದನೆ ಸಿಗಲಿಲ್ಲ. ಇತ್ತ ಚಿಕಿತ್ಸೆ ಫಲಕಾರಿಯಾಗದೇ ಆತ ಶನಿವಾರ ಕೊನೆಯುಸಿರೆಳೆದಿದ್ದ. ಕೊನೆಗೆ ಪೊಲೀಸರೇ ಮೃತದೇಹವನ್ನು ನಾಗರಮುನ್ನೋಳಿಗೆ ತಂದು ಗ್ರಾಪಂ ಅಧ್ಯಕ್ಷರು-ಉಪಾಧ್ಯಕ್ಷರು, ಪಿಡಿಒ ಹಾಗೂ ಸದಸ್ಯರ ಸಹಕಾರದಿಂದ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ,
ಶವ ಬೀಸಾಕಿ ಎಂದ ಮಗಳು….
ಮೂಲಚಂದ್ರ ಶರ್ಮಾ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದಾಗ ಮುಂದೇನು ಮಾಡುವುದು ಎಂಬ ಚಿಂತೆ ಪೊಲೀಸರಿಗೆ ಕಾಡಿದೆ. ಕೊನೆಗೆ ಪಿಎಸ್‌ಐ ನೇರ್ಲಿ ಅವರು, ಕೆನಡಾದಲ್ಲಿರುವ ಮಗಳನ್ನು ವ್ಯಾಟ್ಸಾಪ್ ಕರೆ ಮೂಲಕ ಸಪಂರ್ಕಿಸಿ ತಂದೆ ಸಾವಿನ ಸುದ್ದಿ ತಿಳಿಸಿ ಅಂತ್ಯಸಂಸ್ಕಾರದ ಬಗ್ಗೆ ತಿಳಿಸಿದ್ದಾರೆ. ಮಗಳು ಸತ್ರ ನಾನೇನು ಮಾಡಲಿ. ಆ ವ್ಯಕ್ತಿಗೂ ತನಗೂ ಯಾವುದೇ ಸಂಬಂಧವೇ ಇಲ್ಲ. ಸಾಧ್ಯವಾದರೆ ಅಂತ್ಯಸಂಸ್ಕಾರ ನೆರವೇರಿಸಿ ಇಲ್ಲವಾದರೆ ಎಲ್ಲಾದರೂ ಬಿಸಾಕಿ ಎಂದು ನಿಷ್ಠುರವಾಗಿ ಹೇಳಿದ್ದಾರೆ. ಮಗಳ ಹೇಳಿಕೆಯಿಂದ ಶಾಕ್ ಆದ ನೇರ್ಲಿ ಅವರು ವಿಧಿಯಿಲ್ಲದೆ ತಾವೇ ಮುಂದೆ ನಿಂತು ನಾಗರಮುನ್ನೋಳಿಗೆ ಮೃತದೇಹ ತಂದು ಗ್ರಾಮಸ್ಥರ ಸಹಾಯದಿಂದ ಅನಾಥ ಜೀವಕ್ಕೆ ಮುಕ್ತಿ ನೀಡಿದ್ದಾರೆ.