ಬೆಳಗಾವಿ- ಈದ್ ಮಿಲಾದ್ ಹಬ್ಬ ಹಾಗೂ ಗಣೇಶ ವಿಸರ್ಜನೆ ಎರಡೂ ಒಂದೇ ದಿನ ಬಂದಿರುವ ಕಾರಣ, ಇಂದು ಬೆಳಗಾವಿ ನಗರದಲ್ಲಿ ಮಹತ್ವದ ಸಭೆ ನಡೆಯಲಿದೆ.
ಪಕ್ಕದ ಮಹಾರಾಷ್ಟ್ರದಲ್ಲಿ ಗಣೇಶ ಹಬ್ಬವನ್ನು ಅತ್ಯಂತ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಅಲ್ಲಿಯೂ ಸಹ ಈದ್ ಮಿಲಾದ್ ಹಾಗೂ ಗಣೇಶ ವಿಸರ್ಜೆನೆಯ ಹಬ್ಬ ಎರಡೂ ಒಂದೇ ದಿನ ಬಂದಿರುವದರಿಂದ ಮಹಾರಾಷ್ಟ್ರದ ಮುಸ್ಲಿಂ ಸಮಾಜದ ವಿವಿಧ ಸಂಘಟನೆಗಳ ಮುಖಂಡರು ಸಭೆ ಸೇರಿ, ಈದ್ ಮಿಲಾದ್ ಮೆರವಣಿಗೆಯ ದಿನಾಂಕವನ್ನು ಮುಂದೂಡುವ ನಿರ್ಧಾರವನ್ನು ಕೈಗೊಂಡು ಮಹಾರಾಷ್ಟ್ರದ ಮುಸ್ಲಿಂ ಮುಖಂಡರು ಶಾಂತಿಯ ಸಂದೇಶ ಸಾರಿದ್ದಾರೆ.ಈದ್ ಮೀಲಾದ್ ಹಬ್ಬವನ್ನು ಹಬ್ಬದ ದಿನವೇ ತಮ್ಮ ತಮ್ಮ ಮನೆಗಳಲ್ಲಿ ಆಚರಿಸಿ,ಧಾರ್ಮಿಕ ಸಂಪ್ರದಾಯಗಳನ್ನು ಹಾಗೂ ಪ್ರಾರ್ಥನೆಗಳನ್ನು ಮಾಡಲಿದ್ದು.ಈದ್ ಮಿಲಾದ್ ಮೆರವಣಿಗೆಯನ್ನು, ಗಣೇಶ ವಿಸರ್ಜನೆಯ ಮೂರು ದಿನಗಳ ನಂತರ ಹೊರಡಿಸುವ ನಿರ್ಧಾರ ಪಕ್ಕದ ಮಹಾರಾಷ್ಟ್ರದಲ್ಲಿ ಹೊರಬಿದ್ದಿದೆ.
ಮಹಾರಾಷ್ಟ್ರ ಹೊರತುಪಡಿಸಿದ್ರೆ,ಬೆಳಗಾವಿಯಲ್ಲೂ ಅತ್ಯಂತ ಅದ್ಧೂರಿಯಾಗಿ ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ಜೊತೆಗೆ ಈದ್ ಮಿಲಾದ್ ಹಬ್ಬದ ಮೆರವಣಿಗೆ ಕೂಡ ಅಷ್ಟೇ ಅದ್ಧೂರಿಯಾಗಿ ಬೆಳಗಾವಿ ನಗರದಲ್ಲೂ ನಡೆಯುತ್ತದೆ. ಈದ್ ಮಿಲಾದ್ ಹಬ್ಬದ ರೂಪುರೇಷೆಗಳನ್ನು ಸಿದ್ಧಪಡಿಸಲು, ಇಂದು ಸಂಜೆ 7 ಗಂಟೆಗೆ ಬೆಳಗಾವಿಯ ಅಂಜುಮನ್ ಹಾಲ್ ನಲ್ಲೂ ಮುಸ್ಲಿಂ ಮುಖಂಡರು ಸಭೆ ಸೇರಿ ಸಮಾಲೋಚನೆ ನಡೆಸಿ ಮಹತ್ವದ ನಿರ್ಣಯ ಕೈಗೊಳ್ಳಲಿದ್ದಾರೆ.
ಎರಡೂ ಹಬ್ಬಗಳು ಒಂದೇ ದಿನ ಬಂದಿರುವ ಕಾರಣ ಪೋಲೀಸರು ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.ಎರಡೂ ಹಬ್ಬಗಳ ಸಂಭ್ರಮ ದಲ್ಲಿ ಯಾವುದೇ ರೀತಿಯ ಕೊರತೆ ಆಗದಂತೆ ಬೆಳಗಾವಿ ಪೋಲೀಸರು ತಯಾರಿ ಮಾಡಿಕೊಂಡಿದ್ದಾರೆ. ಈದ್ ಮಿಲಾದ್ ಮೆರವಣಿಗೆ ಹಾಗೂ ಗಣೇಶ ವಿಸರ್ಜನೆಯ ಮೆರವಣಿಗೆಯ ಮಾರ್ಗಗಳನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ನಗರ ಪೋಲೀಸ್ ಆಯುಕ್ತ ಸಿದ್ರಾಮಪ್ಪ ,ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಪರಶೀಲನೆ ಮಾಡಿದ್ದಾರೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಇಂದು ಸಂಜೆ ಮುಸ್ಲಿಂ ಮುಖಂಡರು ನಡೆಸುವ ಸಭೆಯಲ್ಲಿ ಹೊರಬೀಳುವ ನಿರ್ಧಾರ ಮಹತ್ವದ್ದಾಗಿದೆ. ಪಕ್ಕದ ಮಹಾರಾಷ್ಟ್ರದ ಮಾದರಿಯಲ್ಲಿ ಸೌಹಾರ್ದತೆ,ಸಮನ್ವಯತೆ,ಮತ್ತು ಎರಡು ಸಮಾಜಗಳ ನಡುವೆ ಸಹೋದರತ್ವ ಭಾವನೆ ಬೆಳೆಸುವ, ಶಾಂತಿಯ ಸಂದೇಶ ಸಾರುವ ನಿರ್ಧಾರ ಬೆಳಗಾವಿಯಲ್ಲೂ ಹೊರಬೀಳುವ ಸಾಧ್ಯತೆ ಇದೆ.