ಬೆಳಗಾವಿ-ಬೆಳಗಾವಿಯ ಮುಸ್ಲೀಂ ಧರ್ಮ ಗುರುಗಳು,ವಿವಿಧ ಮುಸ್ಲೀಂ ಸಂಘಟನೆಗಳು ಯುವಕ ಸಂಘಗಳು ಹಾಗೂ ಇಲ್ಲಿಯ ಅಂಜುಮನ್ ಸಂಸ್ಥೆ ಮತ್ತು ಮುಸ್ಲೀಂ ಸಮಾಜದ ಮುಖಂಡರು ಈದ್ ಮಿಲಾದ್ ಹಬ್ಬದ ಕುರಿತು,ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ರಾಜು ಸೇಠ ಅವರ ನೇತ್ರತ್ವದಲ್ಲಿ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ.
ಇತ್ತೀಚಿಗೆ ಬೆಳಗಾವಿಯ ಅಂಜುಮನ್ ಸಂಸ್ಥೆಯ ಹಾಲ್ ನಲ್ಲಿ ಸಭೆ ಸೇರಿದ ಮುಖಂಡರು,ಎಲ್ಲ ಸಂಘಟನೆಗಳ ಅಭಿಪ್ರಾಯ,ಹಾಗೂ ಮುಸ್ಲೀಂ ಧರ್ಮಗುರುಗಳ ಸಲಹೆ ಸೂಚನೆಗಳನ್ನು ಆಲಿಸಿ ಈದ್ ಮಿಲಾದ್ ಹಬ್ಬದ ಮೆರವಣಿಗೆಯನ್ನು ಸೆಪ್ಟೆಂಬರ್ 28 ರ ಬದಲಾಗಿ ಅಕ್ಟೋಬರ್ 1 ರಂದು ಮೆರವಣಿಗೆ ಹೊರಡಿಸುವ ಐತಿಹಾಸಿಕ ನಿರ್ಧಾರ ಕೈಗೊಂಡು ರಾಜ್ಯಕ್ಕೆ ಶಾಂತಿ ಮತ್ತು ಸಹೋದರತ್ವದ ಸಂದೇಶ ರವಾನಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಈ ಬಾರಿ, ಶ್ರೀ ಗಣೇಶ್ ವಿಸರ್ಜನೆ ಮತ್ತು ಈದ್ ಮಿಲಾದ್ ಹಬ್ಬ ಎರಡೂ ಒಂದೇ ದಿನ ಕೂಡಿ ಬಂದಿದ್ದರಿಂದ ಎರಡೂ ಹಬ್ಬಗಳ ಸಂಭ್ರಮದಲ್ಲಿ ಯಾವುದೇ ರೀತಿಯ ತೊಂದರೆ ಮತ್ತು ಅನಾನಕೂಲತೆ ಆಗಬಾರದು ಎನ್ನುವ ಸದುದ್ದೇಶದಿಂದ ಈದ್ ಮಿಲಾದ್ ಹಬ್ಬದ ಮೆರವಣಿಗೆಯನ್ನು 28 ರ ಬದಲಾಗಿ ಅಕ್ಟೋಬರ್ 1 ರಂದು ನಡೆಸುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಪಕ್ಕದ ಮಹಾರಾಷ್ಟ್ರದಲ್ಲಿ ಅಲ್ಲಿಯ ಮುಸ್ಲಿಂ ಮುಖಂಡರು ಈದ್ ಮಿಲಾದ್ ಹಬ್ಬದ ಮೆರವಣಿಗೆಯನ್ನು ಮುಂದೂಡಿ ರಾಷ್ಡ್ರದ ಗಮನ ಸೆಳೆದಿದ್ದರು ಈಗ ಬೆಳಗಾವಿಯ ಮುಖಂಡರು ಅತ್ಯಂತ ಸೂಕ್ತವಾದ ನಿರ್ಧಾರ ಕೈಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ರಾಜು ಸೇಠ ಅವರ ದೂರದೃಷ್ಟಿ, ಸಾಮಾಜಿಕ ಕಾಳಜಿ,ಶಾಂತಿಯ ಸಂದೇಶ ಸಾರುವ ಇಚ್ಛಾಶಕ್ತಿಯಿಂದಾಗಿ ಎರಡು ಸಮಾಜಗಳ ನಡುವೆ ಬಾಂಧವ್ಯ ಬೆರೆಸುವ ಸಹೋದರತ್ವ ನಿಭಾಯಿಸುವ ನಿರ್ಧಾರವನ್ನು ರಾಜು ಸೇಠ ಕೈಗೊಂಡಿದ್ದಾರೆ.