ಬೆಂಗಳೂರು: ಕೊರೋನಾ ಸಾಂಕ್ರಾಮಿಕ ನಿಯಂತ್ರಣಕ್ಕೆ ನಾವು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು, ಈ ಬಗ್ಗೆ ಯಾರೊಬ್ಬರೂ ಆತಂಕಪಡಬೇಕಾದ ಅಗತ್ಯ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ.
ಇಂದು ಕೋವಿಡ್ ಪರಿಸ್ಥಿತಿ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಜನಸಂದಣಿ ಇರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸಬೇಕು. ಮಾರ್ಗಸೂಚಿ ಬಗ್ಗೆ ಸಚಿವ ಸಂಪುಟ ಉಪ ಸಮಿತಿಯಲ್ಲಿ ಚರ್ಚಿಸಲಾಗಿದೆ. ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಗೆ ಯಾವುದೇ ಹೊಸ ಮಾರ್ಗಸೂಚಿ ಬಿಡುಗಡೆ ಮಾಡುವುದಿಲ್ಲ ಎಂದರು.
ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧಗಳಿರುವುದಿಲ್ಲ. ಗುಂಪು ಸೇರುವ ಸಂದರ್ಭದಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ 92 ಜನ ಸೊಂಕಿತರು ಪತ್ತೆಯಾಗಿದ್ದಾರೆ, ಇದರಲ್ಲಿ 72 ಜನ ಹೋಮ್ ಐಸೋಲೇಶನಲ್ಲಿ ಇದ್ದಾರೆ, 20 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇದರಲ್ಲಿ 7 ಜನ ಮಾತ್ರ ಐಸಿಯೂ ನಲ್ಲಿ ಇದ್ದಾರೆ. ಜನ ಭಯ ಪಡುವ ಅಗತ್ಯ ಇಲ್ಲ ಆದ್ರೆ ಎಚ್ಚರಿಕೆ ವಹಿಸಬೇಕು ಆರೋಗ್ಯ ಸಲಹಾ ಸಮೀತಿ ನೀಡುವ ಎಲ್ಲ ಸಲಹೆ ಸೂಚನೆಗಳನ್ನು ಸರ್ಕಾರ ಪಾಲನೆ ಮಾಡುತ್ತದೆ. ಅದಕ್ಕೆ ಎಷ್ಟೇ ವೆಚ್ಚ ತಗಲಿದರೂ ಸರ್ಕಾರ ಫಂಡ್ ಬಿಡುಗಡೆ ಮಾಡುತ್ತದೆ.ಸಲಹಾ ಸಮೀತಿಯ ಸಲಹೆಗಳನ್ನು ಅನುಷ್ಢಾನ ಮಾಡುತ್ತದೆ ಎಂದು ಸಿಎಂ ಸಿದ್ರಾಮಯ್ಯ ಭರವಸೆ ನೀಡಿದ್ರು..