Breaking News

ಸವದತ್ತಿ ಯಲ್ಲಮ್ಮ ಸುಕ್ಷೇತ್ರ ಅಭಿವೃದ್ಧಿಗೆ ಮಾಸ್ಟರ್ ಫ್ಲ್ಯಾನ್….

ಸ್ವಚ್ಛತೆ, ಸಮರ್ಪಕ ಪಾರ್ಕಿಂಗ್ ವ್ಯವಸ್ಥೆಗೆ ಆದ್ಯತೆ: ಸಚಿವ ರಾಮಲಿಂಗಾರೆಡ್ಡಿ

ಬೆಳಗಾವಿ, – ಪ್ರತಿವರ್ಷ ಕೋಟ್ಯಂತರ ಜನರು ಭೇಟಿ ನೀಡುವ ಸವದತ್ತಿ ಯಲ್ಲಮ್ಮ ದೇವಸ್ಥಾನ ಹಾಗೂ ಯಲ್ಲಮ್ಮ ಗುಡ್ಡದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಫ್ಲ್ಯಾನ್ ರೂಪಿಸಲಾಗುವುದು ಎಂದು ಸಾರಿಗೆ ಹಾಗೂ ಮುಜರಾಯಿ ಇಲಾಖೆಯ ಸಚಿವರಾದ ರಾಮಲಿಂಗಾರೆಡ್ಡಿ ಅವರು ತಿಳಿಸಿದರು.

ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಸೋಮವಾರ(ಜ.9) ಭೇಟಿ ನೀಡಿ ದೇವಿ ದರ್ಶನ ಪಡೆದು ಅಧಿಕಾರಿಗಳ ಸಭೆಯನ್ನು ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಉತ್ತರ ಕರ್ನಾಟಕದ ಅತ್ಯಂತ ಪ್ರಸಿದ್ಧ ಧಾರ್ಮಿಕ ಸ್ಥಳವಾಗಿರುವ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಕೋಟ್ಯಂತರ ಜನರು ಭೇಟಿ ನೀಡುತ್ತಾರೆ.
ಜಾತ್ರೆ ಸಂದರ್ಭದಲ್ಲಿ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಒದಗಿಸುವುದರ ಜತೆಗೆ ಲಕ್ಷಾಂತರ ಜನರಿಗೆ ಸುಗಮ ದರ್ಶನಕ್ಕೆ ಅನುಕೂಲವಾಗುವಂತೆ ಮಾಸ್ಟರ್ ಪ್ಲ್ಯಾನ್ ರೂಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ನಾಲ್ಕೈದು ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಲ್ಲುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಕುಡಿಯುವ ನೀರು, ನೆರಳು, ಶೌಚಾಲಯ ವ್ಯವಸ್ಥೆ ಮತ್ತಿತರ ಮೂಲಸೌಕರ್ಯಗಳನ್ನು ಒದಗಿಸಬೇಕಾಗುತ್ತದೆ. ಇವೆಲ್ಲವುಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಮುಜರಾಯಿ ಹಾಗೂ ಪ್ರವಾಸೋದ್ಯಮ ಇಲಾಖೆಗಳ ವತಿಯಿಂದ ಅಭಿವೃದ್ಧಿ ಕಾಮಗಾರಿಗಳಳನ್ನು ಕೈಗೊಳ್ಳಲು ಉದ್ಧೇಶಿಸಲಾಗಿದೆ.
ಮುಜರಾಯಿ ಇಲಾಖೆಗೆ ಸಂಬಂಧಿಸಿದಂತೆ ಲಭ್ಯವಿರುವ 87 ಎಕರೆ ಪ್ರದೇಶದಲ್ಲಿ ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ಅನುಷ್ಠಾನಗೊಳಿಸಬಹುದಾದ ಸಮಗ್ರ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.

ದೇವಸ್ಥಾನವು ಪ್ರತಿವರ್ಷ ಅಂದಾಜು ರೂ. 20 ಕೋಟಿ ಆದಾಯ ಹೊಂದಿದೆ. ಈ ಆದಾಯದಲ್ಲಿ ದೇವಸ್ಥಾನ ನಿರ್ವಹಣೆ ಬಳಿಕ ಉಳಿಯುವ ಹಣವನ್ನು ಮಾಸ್ಟರ್ ಪ್ಲ್ಯಾನ್ ಅನುಷ್ಠಾನಕ್ಕೆ ಬಳಸಬಹುದಾಗಿದೆ. ಇದಲ್ಲದೇ‌ ಸರಕಾರದಿಂದಲೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಬಹುದು ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಇದಲ್ಲದೇ ಪ್ರವಾಸೋದ್ಯಮ ಇಲಾಖೆಯ ವತಿಯಿಂದಲೂ ಪ್ರತ್ಯೇಕ ಯೋಜನೆಯನ್ನು ಕೂಡ ರೂಪಿಸುವ ಮೂಲಕ ಒಟ್ಟಾರೆ ಸವದತ್ತಿ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿಗೆ ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದಕ್ಕೂ ಮುಂಚೆ ನಡೆದ ಅಧಿಕಾರಿಗಳ ಸಭೆಯಲ್ಲಿ‌ಮಾತನಾಡಿದ ಸವದತ್ತಿ ಶಾಸಕರಾದ ವಿಶ್ವಾಸ್ ವೈದ್ಯ, ‘ಯಲ್ಲಮ್ಮ ದೇವಿ ದೇವಸ್ಥಾನದ ಒಳಹೋಗಲು ಒಂದು ದ್ವಾರ ಮಾತ್ರ ತೆರೆಯಲಾಗಿದೆ. ಆದರೆ, ಗುಡ್ಡಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿರುವುದರಿಂದ ನಾಲ್ಕೂ ದ್ವಾರಗಳನ್ನು ತೆರೆದು ಅನುಕೂಲ ಕಲ್ಪಿಸಬೇಕು. ಭಕ್ತರು ಸುಲಭವಾಗಿ ದರ್ಶನ ಪಡೆಯಲು ಅನುಕೂಲವಾಗುವಂತೆ ದೇವಸ್ಥಾನದ ಎರಡು ಕಡೆ ಕಾಲುಸೇತುವೆ ನಿರ್ಮಿಸಬೇಕು. ಭಕ್ತರ ಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಮೂಲಸೌಕರ್ಯ ಒದಗಿಸಬೇಕು’ ಎಂದು ಸಲಹೆ ನೀಡಿದರು.

ಶಾಸಕ ವಿಶ್ವಾಸ್ ವೈದ್ಯ, ಮುಜರಾಯಿ ಇಲಾಖೆಯ ಆಯುಕ್ತರಾದ ಬಸವರಾಜೇಂದ್ರ, ಯಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪಿ.ಬಿ.ಮಹೇಶ್, ಲೋಕೋಪಯೋಗಿ ಇಲಾಖೆ, ನಿರ್ಮಿತಿ‌ ಕೇಂದ್ರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
*****

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *