ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಒಂದು ಕಡೆ ಅಧಿಕಾರಿಗಳ ನಡುವೆ ತಿಕ್ಕಾಟ ಇನ್ನೊಂದು ಕಡೆ ಪಾಲಿಕೆ ಆಯುಕ್ತರನ್ನೇ ವರ್ಗಾವಣೆ ಮಾಡುವಂತೆ ಪಾಲಿಕೆ ಸಿಬ್ಬಂದಿಗಳ ಸಂಘ ಪಟ್ಟು ಹಿಡಿದ ಬೆನ್ನಲ್ಲಿಯೇ ಇಂದು ಇಬ್ಬರು ಪಾಲಿಕೆ ಸದಸ್ಯರ ಸದಸ್ಯತ್ವ ರದ್ದಾಗಿದೆ.
ಬೆಳಗಾವಿ-ಬೆಳಗಾವಿ ನಗರದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಿಸಲಾದ ತಿನಿಸುಕಟ್ಟೆ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಂಡು ತಮ್ಮ ಕುಟುಂಬದವರಿಗೆ ಮಳಿಗೆಗಳನ್ನು ಪಡೆದ ಆರೋಪದ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಬಿಜೆಪಿ ಇಬ್ಬರು ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಿ ಬೆಳಗಾವಿ ಪ್ರಾದೇಶಿಕ ಆಯುಕ್ತರು ಸೋಮವಾರ ಆದೇಶ ಹೊರಡಿಸಿದ್ದಾರೆ.
ವಾರ್ಡ ನಂ. 23ರ ಸದಸ್ಯ ಜಯಂತ ಜಾಧವ ಅವರು ತಮ್ಮ ಪತ್ನಿ ಸೋನಾಲಿ ಹೆಸರಿನಲ್ಲಿ ಮಳಿಗೆ ಸಂಖ್ಯೆ 29 ಮತ್ತು ವಾರ್ಡ ನಂ. 41ರ ಸದಸ್ಯ ಮಂಗೇಶ ಪವಾರ ಅವರು ತಮ್ಮ ಪತ್ನಿ ನೀತಾ ಹೆಸರಿನಲ್ಲಿ ಮಳಿಗೆ ಸಂಖ್ಯೆ 28ನ್ನು ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಅವರಿಬ್ಬರ ಸದಸ್ಯತ್ವವನ್ನು ಪ್ರಾದೇಶಿಕ ಆಯುಕ್ತ ಎಸ್.ಬಿ. ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ.
ಪಾಲಿಕೆಯ ಬಿಜೆಪಿ ಸದಸ್ಯರಾದ ಮಂಗೇಶ ಪವಾರ ಮತ್ತು ಜಯಂತ ಜಾಧವ ಅವರು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಮೂಲಕ ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಕಾಯ್ದೆ 1976 ಸೆಕ್ಷನ್ 26 (1)( ಸಿ) ಉಲ್ಲಂಘಿಸಿದ್ದಾರೆ. ಹಾಗಾಗಿ, ಅವರಿಬ್ಬರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಕೋರಿ ಸಾಮಾಜಕ ಕಾರ್ಯಕರ್ತ ಸುಜೀತ ಮುಳಗುಂದ ಅವರು ನವೆಂಬರ್ 9, 2023 ರಂದು ದೂರು ನೀಡಿದ್ದರು. ಈ ಸಂಬಂಧ ವಿಚಾರಣೆ ನಡೆಸಿ, ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿತ್ತು. ಈ ಕುರಿತು ಪರಿಶೀಲಿಸಿದ ಜಿಲ್ಲಾಧಿಕಾರಿ 6-1-2024 ರಂದು ಪ್ರಾದೇಶಿಕ ಆಯುಕ್ತರಿಗೆ ವರದಿ ನೀಡಿದ್ದರು. ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ ಪ್ರಾದೇಶಿಕ ಆಯುಕ್ತರು ಜಯಂತ ಜಾಧವ ಮತ್ತು ಮಂಗೇಶ ಪವಾರ ಅವರ ಸದಸ್ಯತ್ವ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಮೇಯರ್ ಸ್ಥಾನದ ಆಕಾಂಕ್ಷಿಗಳ ಸದಸ್ಯತ್ವ ರದ್ದು….
ಸದಸ್ಯತ್ವ ರದ್ದಾಗಿರುವ ಇಬ್ಬರು ಸದಸ್ಯರು ಮೇಯರ್ ಸ್ಥಾನದ ಆಕಾಂಕ್ಷಿಗಳಾಗಿದ್ದರು.ಜಯಂತ ಜಾಧವ ಹಾಗೂ ಮಂಗೇಶ ಪವಾರ ಇಬ್ಬರೂ ಸಹ ಮೇಯರ್ ಸ್ಥಾನದ ಪ್ರಬಲ ಆಕಾಂಕ್ಷಿಗಳು ಇಬ್ಬರೂ ಸಹ ಬಿಜೆಪಿ ಪಕ್ಷದವರಾಗಿದ್ದು ಪ್ರಾದೇಶಿಕ ಆಯುಕ್ತರು ಹೊರಡಿಸಿದ ಆದೇಶಕ್ಕೆ ಇವರು ನ್ಯಾಯಾಲಯದಿಂದ ತಡೆಯಾಜ್ಞೆ ತರುವ ಸಾಧ್ಯತೆಗಳಿವೆ.