Breaking News

ಭೀಮಗಡ ಅಭಯಾರಣ್ಯದಲ್ಲಿ ಸಫಾರಿ ಯೋಜನೆ ಕೈಬಿಡಲು ಒತ್ತಾಯ

ಬೆಳಗಾವಿ-ರಾಜ್ಯಸರ್ಕಾರ ಖಾನಾಪುರ ತಾಲೂಕಿನ ಭೀಮಗಡ ವನ್ಯಜೀವಿ ಅಭಯಾರಣ್ಯದಲ್ಲಿ ಸಫಾರಿ ಯೋಜನೆ ಕೈಬಿಡುವಂತೆ ಆಗ್ರಹಿಸಿ ವನ್ಯಜೀವಿ, ಪರಿಸರ ಅಭಿವೃದ್ಧಿ ವೇದಿಕೆ ಪದಾಧಕಾರಿಗಳು ಗುರುವಾರ ಬೆಳಗಾವಿ ಪ್ರಾದೇಶಿಕ ಆಯುಕ್ತರು ಮತ್ತು ಉಪ ಅರಣ್ಯಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು.
ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಖಾನಾಪುರ ತಾಲೂಕಿನ ಭೀಮಗಡ ಅಭಿಯಾರಣ್ಯದಲ್ಲಿ ಸಫಾರಿ ಯೋಜನೆ ಜಾರಿಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ. ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರು ಭೀಮಗಡ ವನ್ಯಜೀವಿ ಅಭಯಾರಣ್ಯದಲ್ಲಿ 18 ಕಿ.ಮೀ. ಸಫಾರಿಗಾಗಿ ಮುಕ್ತಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ. ಈ ಸಫಾರಿ ಯೋಜನೆ ವನ್ಯಜೀವಿಗಳು ಹಾಗೂ ಪರಿಸರಕ್ಕೆ ಮಾರಕವಾಗಿದೆ. ಹಾಗಾಗಿ, ಯಾವುದೇ ಕಾರಣಕ್ಕೂ ಸಫಾರಿ ಯೋಜನೆ ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು.

ಭೀಮಗಡ ವನ್ಯಜೀವಿ ಅಭಯಾರಣ್ಯ ಇದು ಸಂರಕ್ಷಿತ ಪ್ರದೇಶವಾಗಿದ್ದು, ಹುಲಿಗಳು ಸೇರಿದಂತೆ ಹಲವಾರು ವನ್ಯಜೀವಿ ಪ್ರಭೇದಗಳಿಗೆ ಇದು ಆವಾಸಸ್ಥಾನವಾಗಿರುವುದರಿಂದ ಇಲ್ಲಿಗೆ ಮಾನವ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಭೀಮಗಡ ವನ್ಯಜೀವಿ ಅಭಯಾರಣ್ಯದ ಪ್ರದೇಶದಲ್ಲಿ ಹಲವಾರು ವರ್ಷಗಳಿಂದ 13 ಹಳ್ಳಿಗಳಲ್ಲಿ 3,000 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಈ ಗ್ರಾಮಗಳಿಗೆ ರಸ್ತೆ ಸಂಪರ್ಕ, ಶಾಲಾ ಶಿಕ್ಷಣ, ಆರೋಗ್ಯ ಸೇರಿದಂತೆ ಮತ್ತಿತರ ಸೌಲಭ್ಯಗಳ ಕೊರತೆಯೂ ಇದೆ. ಮೂಲಭೂತ ಸೌಲಭ್ಯಗಳಿಲ್ಲದೇ ಅರಣ್ಯವಾಸಿಗಳು ತೀವ್ರ ತೊಂದರೆ ಎದುರಿಸುತ್ತ ಬಂದಿದ್ದಾರೆ.

ಕೇಂದ್ರ ಸರ್ಕಾರ 2011ರಲ್ಲಿ ಭೀಮಗಡ ವನ್ಯಜೀವಿ ಅಭಯಾರಣ್ಯವವೆಂದು ಘೋಷಣೆ ಮಾಡಿದ ಬಳಿಕ ಈ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗೆ ನಿರ್ಭಂಧವಿದೆ. ಆದರೆ, ಸರ್ಕಾರ ಇಲ್ಲಿ ಸಫಾರಿ ಯೋಜನೆಗೆ ನಿರ್ಧರಿಸಿರುವುದು, ಅರಣ್ಯ ಇಲಾಖೆ ಇದಕ್ಕೆ ಅನುಮತಿ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.
ಅವೈಜ್ಞಾನಿಕವಾಗಿರುವ ಈ ಸಫಾರಿ ಜಾರಿಗೊಳಿಸಿದರೆ , ವನ್ಯಜೀವಿಗಳ ಪ್ರಾಣಕ್ಕೂ ಕುತ್ತು ತರುವ ಸಾಧ್ಯತೆಯಿದೆ. ಪ್ರವಾಸೋದ್ಯಮಕ್ಕಾಗಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕಾಗುತ್ತದೆ. ಮರಗಳನ್ನು ಕಡಿಯಬೇಕಾಗುತ್ತದೆ. ಇದರಿಂದಾಗಿ ನೇರವಾಗಿಯೇ ಪರಿಸರದ ಮೇಲೆ ಪರಿಣಾಮ ಬೀರುತ್ತದೆ. ವನ್ಯಜೀವಿಗಳು ತೊಂದರೆ ಎದುರಿಸಬೇಕಾಗುತ್ತದೆ. ಸರ್ಕಾರ ತನ್ನ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವನ್ಯಜೀವಿ, ಪರಿಸರ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಸುರೇಶ ಉರಬಿನಹಟ್ಟಿ, ಉಪಾಧ್ಯಕ್ಷ ಶ್ರೀಶೈಲ ಮಠದ, ಕಾರ್ಯದರ್ಶಿ ಡಾ. ಡಿ.ಎನ್‌.ಮೀಸಾಳೆ, ಖಜಾಂಚಿ ಜಗದೀಶ ಮಠದ, ಜಿ.ಐ. ದಳವಾಯಿ, ಎಸ್‌.ಜಿ.ಕಲ್ಯಾಣಿ, ಮಾಜಿ ಮೇಯರ್‌ ಎನ್‌.ಬಿ.ನಿರ್ವಾಣಿ, ವಿಲಾಸ ಕೆರೂರು, ರೈತ ಮುಖಂಡ ಸಿದಗೌಡ ಮೋದಗಿ ಮೊದಲಾದವರು ಉಪಸ್ಥಿತರಿದ್ದರು.

Check Also

ದುಬಾರಿ ಐಫೋನ್ ತಂದಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಯುವಕನ ಆತ್ಮಹತ್ಯೆ

ಬೆಳಗಾವಿ-70 ಸಾವಿರ ಬೆಲೆಯ,ದುಬಾರಿ ಐಫೋನ್ ತಂದಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇಷ್ಟೊಂದು ದುಬಾರಿ ಐಪೋನ್ …

Leave a Reply

Your email address will not be published. Required fields are marked *