Breaking News

ಕೊರೋನಾ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ಮಾಡಿದರೆ ಕಠಿಣ ಕ್ರಮ,ಮಿನಿಸ್ಟರ್ ರಮೇಶ್ ಜಾರಕಿಹೊಳಿ ಖಡಕ್ ವಾರ್ನಿಂಗ್

ಕೋವಿಡ್-೧೯ ನಿಯಂತ್ರಣ: ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಭೆ
————————————————————-
ಸಕಾಲಕ್ಕೆ ಚಿಕಿತ್ಸೆ, ಅಂಬ್ಯುಲೆನ್ಸ್ ಒದಗಿಸಲು ಸಚಿವ ರಮೇಶ್ ಜಾರಕಿಹೊಳಿ ಕಟ್ಟುನಿಟ್ಟಿನ ಸೂಚನೆ

ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಕೋವಿಡ್-೧೯ ಸೇರಿದಂತೆ ಯಾವುದೇ ಬಗೆಯ ಮರಣ ಪ್ರಕರಣಗಳು ಹೆಚ್ಚಾಗದಂತೆ ಎಚ್ಚರಿಕೆ ವಹಿಸಬೇಕು. ಸಕಾಲಕ್ಕೆ ಚಿಕಿತ್ಸೆ, ಅಂಬ್ಯುಲೆನ್ಸ್ ಹಾಗೂ ಊಟೋಪಹಾರ ಒದಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಸೂಚನೆ ನೀಡಿದರು.

ಕೋವಿಡ್-೧೯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಗರದ ಪ್ರವಾಸಿಮಂದಿರದಲ್ಲಿ ಸೋಮವಾರ (ಜು.20) ನಡೆದ ಉನ್ನತಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ತಂಡಗಳನ್ನು ರಚಿಸಿಕೊಂಡು, ಬಿಮ್ಸ್ ಸೇರಿದಂತೆ ಇತರೆ ಕಡೆಗಳಲ್ಲಿ ಕೋವಿಡ್ ಸೇರಿದಂತೆ ಇತರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಅಗತ್ಯವಿರುವ ಜನರಿಗೆ ತಕ್ಷಣ ಹಾಸಿಗೆ ಒದಗಿಸಬೇಕು ಎಂದು ನಿರ್ದೇಶನ ನೀಡಿದರು.

ಬಾಡಿಗೆ ಅಂಬ್ಯುಲೆನ್ಸ್ ಪಡೆಯಲು ಸೂಚನೆ:

ಆಂಬ್ಯುಲೆನ್ಸ್ ಒಂದು‌ ವೇಳೆ ಕಡಿಮೆಯಾದರೆ ಖಾಸಗಿ ವಾಹನಗಳನ್ನು ಬಾಡಿಗೆ ಪಡೆಯಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮರಣ ಪ್ರಮಾಣ ಕಡಿಮೆ ಇದ್ದಾಗ್ಯೂ ಇದು ಸಾಂಕ್ರಾಮಿಕ ಕಾಯಿಲೆಯಾಗಿರುವುದರಿಂದ ಜನರು ಆತಂಕಗೊಂಡಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಮರಣ ಪ್ರಮಾಣ ನಿಯಂತ್ರಿಸಬೇಕು ಎಂದರು.

ಕೊವಿಡ್ ಗಿಂತ ಹೆಚ್ಚಾಗಿ ಇತರೆ ವೈದ್ಯಕೀಯ ಚಿಕಿತ್ಸೆ ಸಿಗದಿರುವುದರಿಂದ ಜನರು ಭಯಭೀತರಾಗಿದ್ದಾರೆ. ಆದ್ದರಿಂದ ಇತರೆ ಚಿಕಿತ್ಸೆ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.

ಪ್ರತ್ಯೇಕ ತಂಡ ರಚಿಸಲು ಸೂಚನೆ:

ಕೋವಿಡ್-೧೯ ಗಿಂತ ಹೆಚ್ಚಾಗಿ ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ತೀವ್ರ ತೊಂದರೆಯಾಗುತ್ತಿದೆ. ಜಿಲ್ಲಾಮಟ್ಟದ ಅಧಿಕಾರಿಗಳು ತಂಡಗಳನ್ನು ರಚಿಸಿಕೊಂಡು, ಕೋವಿಡ್ ಸೇರಿದಂತೆ ಇತರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಅಗತ್ಯವಿರುವ ಜನರಿಗೆ ಹಾಸಿಗೆ ಒದಗಿಸಲು ಪ್ರಯತ್ನಿಸಬೇಕು. ಈ ಬಗ್ಗೆ ನಿರಂತರವಾಗಿ ಸಭೆಗಳನ್ನು ನಡೆಸಬೇಕು ಎಂದು ಸಚಿವ ರಮೇಶ್ ಜಾರಕಿಹೊಳಿ ಸೂಚನೆ ನೀಡಿದರು.

ಸೋಂಕಿತರಿಗೆ ಇರಿಸಲಾಗಿರುವ ವಾರ್ಡಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು.

ಗಂಟಲುದ್ರವ ಮಾದರಿ ಪರೀಕ್ಷೆಯನ್ನು ಹೆಚ್ಚಿಸಿ, ತಕ್ಷಣವೇ ವರದಿ ನೀಡಬೇಕು. ವರದಿ ಆಧಾರದ ಮೇಲೆ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಒದಗಿಸಬೇಕು.

ಬಿಮ್ಸ್ ಗೆ ಕುರಿತು ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದರಿಂದ ಈ ಬಗ್ಗೆ ಗಮನಹರಿಸಿ ಇನ್ನಷ್ಟು ಮುತುವರ್ಜಿಯಿಂದ ಕಾರ್ಯನಿರ್ವಹಿಸಲು ಸೂಚನೆ ನೀಡಿದರು.

ಗುಣಮಟ್ಟದ ಆಹಾರ; ಪೂರೈಸಲು ಸೂಚನೆ:

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಗತಿರುವ ಸೋಂಕಿತರಿಗೆ ಸಮಯಕ್ಕೆ ಸರಿಯಾಗಿ ಗುಣಮಟ್ಟದ ಆಹಾರವನ್ನು ಪೂರೈಸಬೇಕು. ಈ ಬಗ್ಗೆ ನಿರ್ಲಕ್ಷ್ಯ ತೋರಿಸಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕುಡಿಯುವ ನೀರು, ಅಗತ್ಯಕ್ಕೆ ತಕ್ಕಂತೆ ಸ್ನಾನದ ಕೊಠಡಿಗಳು ಮತ್ತು ಶೌಚಾಲಯ ಕಲ್ಪಿಸಬೇಕು. ಅದೇ ರೀತಿ ಸಮಯಕ್ಕೆ ಸರಿಯಾಗಿ ಊಟೋಪಹಾರ ಒದಗಿಸಬೇಕು ಎಂದು ತಿಳಿಸಿದರು.

ಬಿಮ್ಸ್ ನಲ್ಲಿ ಸದ್ಯಕ್ಕೆ 740 ಬೆಡ್ ಗಳಿವೆ. ಇನ್ನೂ 300 ಬೆಡ್ ಹೆಚ್ಚಿಸಲಾಗುತ್ತಿದೆ. ಈ ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮಾತ್ರ ಮೀಸಲಿಟ್ಟು, ಉಳಿದವರನ್ನು ಖಾಸಗಿ ಆಸ್ಪತ್ರೆಗೆ ಕಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.

ಕೋವಿಡ್-೧೯ ಹೊರತುಪಡಿಸಿ ಇತರೆ ಪ್ರಕರಣಗಳನ್ನು ಸರ್ಕಾರದ ಯೋಜನೆಯಡಿ ಚಿಕಿತ್ಸೆ ನೀಡುತ್ತಿರುವ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತಾಲ್ಲೂಕು ಮಟ್ಟದಲ್ಲಿ ಕೂಡ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇದಲ್ಲದೇ ವಸತಿ ಶಾಲೆಯಲ್ಲಿ ಕೂಡ ಲಕ್ಷಣರಹಿತರಿಗೆ ಇರಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಇದಲ್ಲದೇ ಅಥಣಿಯಲ್ಲಿ ಒಂದು ಸಾವಿರ ಹಾಸಿಗೆ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ವೈದ್ಯಕೀಯ ಸಿಬ್ಬಂದಿ ಕೊರತೆ ನೀಗಿಸಲು ಖಾಸಗಿ ಆಸ್ಪತ್ರೆ ಸಿಬ್ಬಂದಿ, ಹೊಸದಾಗಿ ಕೋರ್ಸ್ ಪೂರ್ಣಗೊಳಿಸಿದವರನ್ನು ತಾತ್ಕಾಲಿಕ ನೇಮಕಾತಿ ಮಾಡಿಕೊಳ್ಳಬೇಕು ಎಂದು ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಸಲಹೆ ನೀಡಿದರು.

ಶಾಸಕ ಮಹೇಶ್ ಕುಮಠಳ್ಳಿ, ಅಥಣಿಯಲ್ಲಿ ಇದೀಗ ಸೋಂಕು ಹೆಚ್ಚಳವಾಗುತ್ತಿದೆ. ಬಿಮ್ಸ್ ದೂರ ಆಗಿರುವುದರಂದ ಸ್ಥಳೀಯ ವಾಗಿ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಬೇಕಿದೆ.
ಅಥಣಿಯಿಂದ ತುರ್ತು ಚಿಕಿತ್ಸೆ ಅಗತ್ಯವಿರುವವರಿಗೆ ಮಾತ್ರ ಬಿಮ್ಸ್ ಕಳಿಸಬೇಕು ಎಂದು ಸಲಹೆ ನೀಡಿದರು.

ಬಿಮ್ಸ್ ಹಳೆ ಬ್ಲಾಕ್ ನಲ್ಲಿ ಮಾತ್ರ ಸ್ವಲ್ಪಮಟ್ಟಿಗೆ ಸ್ವಚ್ಛತೆ ಸಮಸ್ಯೆಯಿದೆ. ಆದರೆ ಇದನ್ನು ಸುಧಾರಿಸಲು ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು ನಿರಂತರ ನಿಗಾ ವಹಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ.ತಿಳಿಸಿದರು.

ಹೊಸ ಬ್ಲಾಕ್ ನಲ್ಲಿ ಹಾಸಿಗೆ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ.
ಮುಂಬರುವ ದಿನಗಳಲ್ಲಿ ಸೋಂಕಿತರಿಗೆ ಮನೋಸ್ಥೈರ್ಯ ತುಂಬಲು ಕೌನ್ಸಿಲಿಂಗ್ ಕೂಡ ಮಾಡಲು ಯೋಜನೆ ರೂಪಿಸಲಾಗುತ್ತಿದೆ.

ಸೋಂಕಿನ ಲಕ್ಷಣ ಇರುವವರನ್ನು ಸ್ಥಳೀಯವಾಗಿಯೇ ಪತ್ತೆ ಮಾಡಲು ಗ್ರಾಮ ಪಂಚಾಯತಿ ಮಟ್ಟದಲ್ಲೂ ಬಿಪಿ, ಶುಗರ್ ಮತ್ತು ಜ್ವರ ಇರುವ ಬಗ್ಗೆ ತಪಾಸಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಾ.ರಾಜೇಂದ್ರ ವಿವರಿಸಿದರು.

ಇದುವರೆಗೆ ಕೋವಿಡ್ ಜತೆಗೆ ಇತರರಿಗೂ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಕೋವಿಡ್ ಸೋಂಕಿತರಿಗೆ ಮಾತ್ರ ಚಿಕಿತ್ಸೆ ನೀಡುತ್ತಿರುವುದರಿಂದ ಹೆಚ್ಚಿನ ವೈದ್ಯಕೀಯ ಸಿಬ್ಬಂದಿ ಲಭಿಸಲಿದ್ದಾರೆ. ಆದ್ದರಿಂದ ಮುಂದೆ ಅನುಕೂಲವಾಗಲಿದೆ ಎಂದು ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ತಿಳಿಸಿದರು.

ಪೊಲೀಸ್ ಆಯುಕ್ತರಾದ ತ್ಯಾಗರಾಜನ್, ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಪಾಲಿಕೆಯ ಆಯುಕ್ತರಾದ ಜಗದೀಶ್ ಕೆ.ಎಚ್. ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
***

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *