Breaking News

ಆತ್ಮ ನಿರ್ಭರ ಭಾರತ ಅಭಿಯಾನ- ಒಂದು ಜಿಲ್ಲೆ; ಒಂದು ಉತ್ಪನ್ನ’ ಬೆಲ್ಲ” ಆಯ್ಕೆಗೆ ಪರಶೀಲನೆ

ಬೆಳಗಾವಿ,-ಜಿಲ್ಲೆಯ ಸಾವಯವ ಬೆಲ್ಲ ಉತ್ಪಾದನಾ ಘಟಕಗಳಿಗೆ ಅತ್ಯುತ್ತಮ ಬ್ರ್ಯಾಂಡ್ ಸೃಷ್ಟಿಸಬಹುದು. ಅಂತರಾಷ್ಟ್ರೀಯ ಮಾರುಕಟ್ಟೆ ಸೃಷ್ಟಿಸಲು ಕೂಡ ಅವಕಾಶಗಳಿವೆ. ಆದ್ದರಿಂದ ಆತ್ಮ ನಿರ್ಭರ ಭಾರತ ಅಭಿಯಾನಡಿ ಒಂದು ಜಿಲ್ಲೆ; ಒಂದು ಉತ್ಪನ್ನವಾಗಿ ಬೆಲ್ಲವನ್ನು ಆಯ್ಕೆ ಮಾಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಿರೇಮಠ ಹೇಳಿದರು.

ಆತ್ಮ ನಿರ್ಭರ ಭಾರತ ಅಭಿಯಾನದ ಭಾಗವಾಗಿ ಒಂದು ಜಿಲ್ಲೆ; ಒಂದು ಉತ್ಪನ್ನ/ಬೆಳೆ (ಒನ್ ಡಿಸ್ಟ್ರಿಕ್ಟ್ ಒನ್ ಪ್ರಾಡಕ್ಟ್-ಒಡಿಪಿಒ) ಕುರಿತು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಆ.5) ನಡೆದ ಜಿಲ್ಲಾ ಮಟ್ಟದ ಕೃಷಿ, ವಾಣಿಜ್ಯ,ಆಹಾರ ಸಂಸ್ಕರಣೆ ಮತ್ತು ಕೃಷಿ ರಫ್ತು ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಒಡಿಪಿಒ ಪ್ರಮುಖ ಅಂಶವೆಂದರೆ ಜಿಲ್ಲೆಯ ಪ್ರಮುಖ ಬೆಳೆ/ಉತ್ಪನ್ನವನ್ನು ಗುರುತಿಸಿ ಈ ಬೆಳೆಯ ಮೌಲ್ಯವರ್ಧನೆ, ಸಂಸ್ಕರಣೆ, ಪ್ಯಾಕಿಂಗ್, ಬ್ರಾಂಡ್ ಅಭಿವೃದ್ಧಿ, ಮಾರುಕಟ್ಟೆಗೆ ಪ್ರೋತ್ಸಾಹಿಸಲಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಹಾಲು, ಅರಿಷಿಣ, ಮಾವು ಇತ್ಯಾದಿ ಸಂಸ್ಕರಣೆ ಘಟಕಗಳ ಸ್ಥಾಪನೆಗೂ ಉತ್ತಮ ಅವಕಾಶಗಳಿವೆ. ಇವುಗಳಲ್ಲಿ ಮಾವು ಸಂಸ್ಕರಣೆ ಘಟಕಗಳ ಮೂಲಕ ವಿವಿಧ ಉಪ ಉತ್ಪನ್ನಗಳ ತಯಾರಿಕೆಗೂ ವಿಫುಲ ಅವಕಾಶಗಳಿವೆ.

ಬೆಲ್ಲ ತಯಾರಿಕಾ ಘಟಕಗಳನ್ನು ಮೊದಲು ಗುರುತಿಸಿ ಎಲ್ಲ ಆಯಾಮಗಳಲ್ಲಿ ಪರಿಶೀಲಿಸಿದ ಬಳಿಕ ಆತ್ಮನಿರ್ಭರ್ ಅಭಿಯಾನದ ಭಾಗವಾಗಿ “ಒಂದು ಉತ್ಪನ್ನ” ವಾಗಿ ಆಯ್ಕೆ ಮಾಡಲಾಗುವುದು ಎಂದರು.

ಕೃಷಿಯೇತರ ಜಮೀನಿನಲ್ಲಿ ಸ್ಥಾಪಿತ ಘಟಕಗಳಿಗೆ ಮಾತ್ರ ಸಾಲಸೌಲಭ್ಯ ದೊರಕುವುದರಿಂದ ಬೆಲ್ಲ ಅಥವಾ ಎರಡನೇ ಆಯ್ಕೆಯಾಗಿ ಅರಿಷಿಣ ಸಂಸ್ಕರಣಾ ಘಟಕವನ್ನು ಆಯ್ಕೆ ಮಾಡುವಾಗ ನಬಾರ್ಡ್, ಇತರೆ ಹಣಕಾಸು ಸಂಸ್ಥೆಗಳ ಜತೆ ಚರ್ಚಿಸಿದ ಬಳಿಕವೇ ಮತ್ತೊಂದು ಸುತ್ತಿನ ಚರ್ಚೆ ನಡೆಸಿ ಇದರ ಬಗ್ಗೆ ಅಂತಿಮ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.

ಶೀಘ್ರ ಡಿಪಿಆರ್ ರೂಪಿಸಲು ಸೂಚನೆ:

ಆತ್ಮ ನಿರ್ಭರ ಭಾರತ ಅಭಿಯಾನ- ಒಂದು ಜಿಲ್ಲೆ; ಒಂದು ಉತ್ಪನ್ನದ ಉತ್ತೇಜನಕ್ಕೆ ಮೊದಲ ವರ್ಷ ಶೇ.100 ರಷ್ಟು ನೆರವು ಕೇಂದ್ರ ಸರ್ಕಾರವೇ ಭರಿಸಲಿರುವುದರಿಂದ ಸಂಬಂಧಿಸಿದ ಎಲ್ಲ ಇಲಾಖೆಯ ಅಧಿಕಾರಿಗಳು ಆದಷ್ಟು ಬೇಗನೆ ವಿಸ್ತೃತ ಯೋಜನೆ ರೂಪಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು ಎಂದು ನಿರ್ದೇಶನ ನೀಡಿದರು.

ಮುಂಬರುವ ದಿನಗಳಲ್ಲಿ ಬ್ಯಾಂಕುಗಳಿಂದ ಸರಳವಾಗಿ ಸಾಲಸೌಲಭ್ಯ ಒದಗಿಸಲು ಸಾಧ್ಯವಾಗುವಂತಹ ಆಹಾರ ಸಂಸ್ಕರಣೆ ಘಟಕಗಳನ್ನು ಆಯ್ಕೆ ಮಾಡುವುದರಿಂದ ಅಭಿವೃದ್ಧಿ ಸುಲಭವಾಗುತ್ತದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ. ಅಭಿಪ್ರಾಯಪಟ್ಟರು.
ಕೃಷಿಯೇತರ ಜಮೀನುಗಳಲ್ಲಿ ಸ್ಥಾಪಿತ ಘಟಕಗಳನ್ನು ಆಯ್ಕೆ ಮಾಡಬಹುದು ಎಂದರು.

ಆತ್ಮ ನಿರ್ಭರ ಭಾರತ ಅಭಿಯಾನದ ಭಾಗವಾಗಿ ಒಂದು ಜಿಲ್ಲೆ; ಒಂದು ಉತ್ಪನ್ನ/ಬೆಳೆ (ಒನ್ ಡಿಸ್ಟ್ರಿಕ್ಟ್ ಒನ್ ಪ್ರಾಡಕ್ಟ್-ಒಡಿಒಪಿ) ಕುರಿತು ಪ್ರಾತ್ಯಕ್ಷಿಕೆಯನ್ನು ನೀಡಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮನ್ವಯದೊಂದಿಗೆ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ ಎಂದರು.

ಕೃಷಿ ವಲಯದ ಅಸಂಘಟಿತ ಆಹಾರ ಸಂಸ್ಕರಣೆ ಘಟಕಗಳ ಜತೆ ಸಮನ್ವಯ ಸಾಧಿಸಿ ಸೂಕ್ತ ತರಬೇತಿ, ಹಣಕಾಸು ನೆರವು ಒದಗಿಸುವ ಮೂಲಕ ಅವುಗಳ ಪ್ರಗತಿಗೆ ಪ್ರೋತ್ಸಾಹ ನೀಡುವುದು ಈ ಯೋಜನೆಯ ಉದ್ಧೇಶವಾಗಿದೆ.

ಎಲ್ಲ ಬೆಳೆ ಅಥವಾ ಉತ್ಪನ್ನಗಳಿಗೆ ಬೆಲೆ ಒದಗಿಸಲು ಅನುಕೂಲವಾಗುವಂತೆ ಒಂದು ಜಿಲ್ಲೆ; ಒಂದು ಬೆಳೆ/ಉತ್ಪನ್ನ ಆಯ್ಕೆ ಮಾಡಿಕೊಂಡು ಅದಕ್ಕೆ ಉತ್ತೇಜನ ನೀಡಲಾಗುವುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಹೊಸಮನಿ ವಿವರಿಸಿದರು.

ಸಮಗ್ರ ಅಂಶಗಳನ್ನು ಪರಿಶೀಲಿಸಿ ಜಿಲ್ಲೆಯಿಂದ ಒಂದು ಬೆಳೆ ಆಯ್ಕೆ ಮಾಡುವ ಅಧಿಕಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾಮಟ್ಟದ ಸಮಿತಿ‌ ನೀಡಲಾಗಿರುತ್ತದೆ ಎಂದು ತಿಳಿಸಿದರು.
ಮೈಸೂರು ಸಿಎಫ್ ಟಿಆರ್ ಐ ನಲ್ಲಿ ಬೆಲ್ಲದ ಪುಡಿ, ದ್ರವ ರೂಪದ ಬೆಲ್ಲದ ಬಗ್ಗೆ ತಂತ್ರಜ್ಞಾನ ಲಭ್ಯವಿದ್ದು, ಇದನ್ನು ಜಿಲ್ಲೆಯಲ್ಲಿ ಬಳಸಿಕೊಳ್ಳಬಹುದು ಎಂದು ತುಕ್ಕಾನಟ್ಟಿ ಕೆವಿಕೆ ವಿಜ್ಞಾನಿ ಡಿ.ಸಿ.ಚೌಗಲಾ ಸಲಹೆ ನೀಡಿದರು.

ರೈತ ಉತ್ಪಾದಕ ಸಂಸ್ಥೆಗಳ ಸ್ಥಾಪಿಸಿ ರೈತರಿಗೆ ನೆರವಾಗಿ:

ಸರ್ಕಾರದ ಮಾರ್ಗಸೂಚಿ ಪ್ರಕಾರ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಮತ್ತು ನಬಾರ್ಡ್ ವತಿಯಿಂದ ರೈತ ಉತ್ಪಾದಕರ ಸಂಸ್ಥೆ(ಎಫ್.ಪಿ.ಒ)ಗಳನ್ನು ಸ್ಥಾಪಿಸುವ ಮೂಲಕ ರೈತರ ಆರ್ಥಿಕ ಪ್ರಗತಿಗೆ ನೆರವಾಗಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.

ಜಿಲ್ಲೆಯಲ್ಲಿ ಸ್ಥಾಪಿಸಲು ನೀಡಲಾಗಿರುವ ಗುರಿಯ ಪ್ರಕಾರ ಎಲ್ಲ ತಾಲ್ಲೂಕುಗಳಲ್ಲಿ ಎಫ್.ಪಿ.ಒ. ಸ್ಥಾಪಿಸಿ ಕೂಡಲೇ ಕಾರ್ಯಚಟುವಟಿಕೆಗಳನ್ನು ಆರಂಭಿಸಬೇಕು ಎಂದರು.

ಜಿಲ್ಲೆಯಲ್ಲಿ 20 ರೈತ ಉತ್ಪಾದಕರ ಸಂಸ್ಥೆ(ಎಫ್.ಪಿ.ಒ)ಗಳ ರಚನೆಯ ಗುರಿ ನೀಡಲಾಗಿದ್ದು, ಈ‌ ನಿಟ್ಟಿನಲ್ಲಿ ಈಗಾಗಲೇ ಕೆಲಸ ಆರಂಭಿಸಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಹೊಸಮನಿ ತಿಳಿಸಿದರು.
ಬೈಲಹೊಂಗಲ, ನೇಸರಗಿ, ಬೀಡಿ ಸೇರಿದಂತೆ ಐದು ಹೋಬಳಿಗಳಲ್ಲಿ ರೈತ ಉತ್ಪಾದಕರ ಸಂಸ್ಥೆಗಳನ್ನು ರಚಿಸಲಾಗಿದೆ ಎಂದರು.
ಆಯಾ ಭಾಗದ ಪ್ರಮುಖ ಬೆಳೆಯ ಬೆಳೆಗಾರರನ್ನು ಸಂಸ್ಥೆ ಯ ಸದಸ್ಯರನ್ನಾಗಿ ಆಯ್ಕೆ ಮಾಡಿ‌ ತರಬೇತಿ, ಮಾರುಕಟ್ಟೆ ಮಾಹಿತಿ ಒದಗಿಸಲಾಗುವುದು ಎಂದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡಬಸವರಾಜ್, ಕೃಷಿ ಇಲಾಖೆಯ ಉಪ ನಿರ್ದೇಶಕ ಡಾ.ಎಚ್.ಡಿ.ಕೋಳೇಕರ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರವೀಂದ್ರ ಹಕಾಟಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಹುಲ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
***

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *