ಬೆಳಗಾವಿ- ಇಂದು ಕ್ರಾಂತಿವೀರ, ಶೂರ ಸಂಗೊಳ್ಳಿ ರಾಯಣ್ಣನ ಜಯಂತಿ ಇದ್ದು ,ಇವತ್ತು ಬೆಳಗಿನ ಜಾವ ಪೀರನವಾಡಿ ಸರ್ಕಲ್ ನಲ್ಲಿ ನೂರಾರು ಅಭಿಮಾನಿಗಳು ಸೇರಿ ರಾಯಣ್ಣನ ಮೂರ್ತಿಪ್ರತಿಷ್ಠಾಪನೆಗೆ ಯತ್ನಿಸಿದ ಘಟನೆ ನಡೆದಿದೆ.
ಕಳೆದ ನಾಲ್ಕು ವರ್ಷಗಳಿಂದ ರಾಯಣ್ಣನ ಅಭಿಮಾನಿಗಳು ಬೆಳಗಾವಿ ಪಕ್ಕದ ಪೀರನವಾಡಿ ಗ್ರಾಮದ ಪ್ರವೇಶ ದ್ವಾರದಲ್ಲಿರುವ ಸರ್ಕಲ್ ನಲ್ಲಿ, ಅಭಿಮಾನಿಗಳು ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಪ್ರಯತ್ನ ಮಾಡುತ್ತಲೇ ಬಂದಿದ್ದು ಇಂದು ಬೆಳಗಿನ ಜಾವ ಐದು ಘಂಟೆ ಸುಮಾರಿಗೆ ನೂರಾರು ಅಭಿಮಾನಿಗಳು ಮೂರ್ತಿ ಪ್ರತಿಷ್ಠಾಪನೆಗೆ ಯತ್ನಿಸಿದಾಗ ಪೋಲೀಸರು ಅವರನ್ನು ತಡೆದಿದ್ದಾರೆ ಎಂದು ರಾಯಣ್ಣನ ಅಭಿಮಾನಿಗಳು ದೂರಿದ್ದಾರೆ.
ಮೂರ್ತಿ ಪ್ರತಿಷ್ಠಾಪನೆ ಮಾಡಲು ಅಭಿಮಾನಿಗಳು ಯತ್ನಿಸಿದ ಸಂಧರ್ಭದಲ್ಲಿ ಪೋಲೀಸರು ಲಘು ಲಾಠಿಪ್ರಹಾರ ನಡೆಸಿ, ಅಲ್ಲಿ ಸೇರಿದ್ದ ನೂರಾರು ಅಭಿಮಾನಿಗಳನ್ನು ಚದುರಿಸಿ,ನಂತರ ಅವರನ್ನು ಬಂಧಿಸಿ ಬಿಡುಗಡೆ ಮಾಡಿದ್ದಾರೆಂದು ತಿಳಿದು ಬಂದಿದೆ.
ಮೂರ್ತಿ ಪ್ರತಿಷ್ಠಾಪನೆ ಮಾಡಲು ಪೋಲೀಸರು,ತಡೆದ ಬಳಿಕ ಪೀರನವಾಡಿಯಲ್ಲಿ ಬೆಳಗಿನ ಜಾವವೇ ನೂರಾರು ಅಭಿಮಾನಿಗಳು ಸೇರಿ,ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಧರಣಿ ನಡೆಸಿದ ಸಂಧರ್ಭದಲ್ಲಿ ಅಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು
ಈಗ ಪೀರನವಾಡಿಯಲ್ಲಿ ಬಿಗಿ ಪೋಲೀಸ್ ಬಂದೋಬಸ್ತಿಯನ್ನು ನಿಯೋಜನೆ ಮಾಡಲಾಗಿದ್ದು ಪರಿಸ್ಥಿತಿ ಶಾಂತವಾಗಿದೆ.