ಬೆಳಗಾವಿ- ಕಳೆದ ವರ್ಷ ಪ್ರವಾಹದಲ್ಲಿ ಮನೆ ನೀರಿನಲ್ಲಿ ಮುಳತು,ಮಂದಿರದ ಕಟ್ಟೆಯ ಮೇಲೆ ಬದುಕು ಸಾಗಿಸಿದ ಆ ಅಜ್ಜಿಗೆ ಮಳೆರಾಯ ಅಲ್ಲಿಯೂ ಬದುಕಲು ಬಿಡಲಿಲ್ಲ,ಮಂದಿರದ ಕಟ್ಟೆಯ ಮೇಲಿಂದ ನಿರಾಶ್ರಿತರ ಕೇಂದ್ರಕ್ಕೆ ಶಿಪ್ಟ್ ಆಗಿದ್ದ ಆ ಅಜ್ಜಿ ಇಂದು ನಿರಾಶ್ರಿತರ ಕೇಂದ್ರದಲ್ಲಿ,70 ವರ್ಷದ ತನ್ನ ಮಗಳ ಮಡಿಲಲ್ಲಿ ಜೀವ ಬಿಟ್ಟ ಘಟನೆ ರಾಮದುರ್ಗ ತಾಲ್ಲೂಕಿನ ಸುರೇಬಾನ್ ನಿರಾಶ್ರಿತರ ಕೇಂದ್ರದಲ್ಲಿ ನಡೆದಿದೆ.
ರಾಮದುರ್ಗ ತಾಲ್ಲೂಕಿನ ಹಿರೇಹಂಪಿಹೊಳಿ ಗ್ರಾಮದ ಈ ಅಜ್ಜಿಯ ಮನೆ ಕಳೆದ ವರ್ಷವೇ ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು,ಕಳೆದ ಒಂದು ವರ್ಷದಿಂದ ದೇವಸ್ಥಾನದ ಕಟ್ಟೆಯ ಮೇಲೆ ಬದುಕಿನ ಬಂಡಿ ಸಾಗಿಸುತ್ತಿದ್ದ ಈ ಅಜ್ಜಿಗೆ ಮಳೆ ಮಂದಿರದ ಕಟ್ಟೆಯ ಮೇಲೂ ಬದುಕಲು ಬಿಡಲಿಲ್ಲ ಈ ವರ್ಷವೂ ಊರಲ್ಲಿ ನೀರು ನುಗ್ಗಿದ ಪರಿಣಾಮ ಸುರೇಬಾನ್ ನಿರಾಶ್ರಿತರ ಕೇಂದ್ರಕ್ಕೆ ಶಿಪ್ಟ್ ಆಗಿದ್ದ ಈ ಅಜ್ಜೆ ಕಳೆದ ಮೂರ್ನಾಲ್ಕು ದಿನಗಳಿಂದ,70 ವರ್ಷದ ತನ್ನ ಮಗಳ ಮಡಿಲಲ್ಲಿ ನರಳುತ್ತಿರುವದನ್ನು ಬೆಳಗಾವಿ ಸುದ್ಧಿ ಡಾಟ್ ಕಾಮ್ ಸುದ್ಧಿ ಮಾಡಿತ್ತು .ಇಷ್ಟೆಲ್ಲಾ ಸುದ್ಧಿ ಮಾಡಿದ ಮೇಲೂ ಜಿಲ್ಲೆಯ ಅಧಿಕಾರಿಗಳು ಈ ಅಜ್ಜಿಗೆ ಚಿಕಿತ್ಸೆ ಕೊಡಿಸುವ ಮನಸ್ಸು ಮಾಡಲಿಲ್ಲ,ಮಳೆಯ ಹೊಡೆತಕ್ಕೆ ಎಲ್ಲವನ್ನೂ ಕಳೆದುಕೊಂಡ ಈ ಮಹಾತಾಯಿಗೆ ಸರ್ಕಾರದ ಯಾವ ಸೌಲಭ್ಯವೂ ದೊರಕದೆ,ಈ ಅಜ್ಜಿ ನಿರಾಶ್ರಿತರ ಕೇಂದ್ರದಲ್ಲಿಯೇ ಇಹಲೋಕ ತ್ಯೇಜಿಸಿದ್ದಾಳೆ
ನಿರಾಶ್ರಿತರ ಕೇಂದ್ರದಲ್ಲಿ ಮಗಳ ಮಡಿಲಲ್ಲಿ 90 ವರ್ಷದ ಅಜ್ಜಿ ಪ್ರಾಣ ಬಿಡುತ್ತಿದ್ದಂತೆಯೇ ನಿರಾಶ್ರಿತರ ಕೇಂದ್ರದಲ್ಲಿ ಸೂತಕದ ಛಾಯೆ ಆವರಿಸಿತು,ತಾಯಿಯ ಅಗಲಿಕೆಯಿಂದ 70 ವರ್ಷದ ಮಗಳು ಕಣ್ಣೀರು ಸುರಿಸಿದ್ದನ್ನು ನೋಡಿದ ಕೇಂದ್ರದಲ್ಲಿರುವ ಇತರ ನಿರಾಶ್ರಿತರು ಮೊಮ್ಮಲ ಮರಗಿದರು.
ನಿರಾಶ್ರಿತರ ಕೇಂದ್ರದಲ್ಲಿ ಅಜ್ಜಿ ನಿಧನವಾದ ಸುದ್ಧಿ ತಿಳಿದು ನಿರಾಶ್ರಿತರ ಕೇಂದ್ರಕ್ಕೆ ದೌಡಾಯಿಸಿದ ರಾಮದುರ್ಗ ತಹಶೀಲದಾರ್ ಅಜ್ಜಿಗೆ ಅಂತಿಮ ನಮನ ಸಲ್ಲಿಸಿದರು