ಬೆಳಗಾವಿ-ರಾಜ್ಯದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂಬುದು ಸರ್ಕಾರದ ಉದ್ಧೇಶ. ಆದರೆ ಶುದ್ಧ ಕುಡಿಯುವ ನೀರಿನ ಘಟಕಗಳ ಕಾರ್ಯನಿರ್ವಹಣೆಯ ಬಗ್ಗೆ ಅನೇಕ ದೂರುಗಳಿವೆ. ಆದ್ದರಿಂದ ಘಟಕಗಳ ಸಮರ್ಪಕ ಕಾರ್ಯನಿರ್ವಹಣೆಯ ಬಗ್ಗೆ ಖಚಿತಪಡಿಸಿಕೊಂಡು ಮುಂಬರುವ ದಿನಗಳಲ್ಲಿ ಘಟಕಗಳ ದುರಸ್ತಿ ಮತ್ತು ನಿರ್ವಹಣೆಯ ಬಗ್ಗೆ ಸಮರ್ಪಕ ಯೋಜನೆ ರೂಪಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಸಚಿವರಾದ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶನಿವಾರ (ಆ.29) ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಳಗಾವಿ ಉಪ ವಿಭಾಗದಲ್ಲಿ 567 ಘಟಕಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಹದಿನೈದು ದಿನಗಳಲ್ಲಿ ಮರು ಪರಿಶೀಲಿಸಿ ವರದಿ ನೀಡಲು ಸಚಿವ ಈಶ್ವರಪ್ಪ ನಿರ್ದೇಶನ ನೀಡಿದರು.
ಅದೇ ರೀತಿ ಚಿಕ್ಕೋಡಿ ಉಪ ವಿಭಾಗದಲ್ಲಿ 720 ಘಟಕಗಳಿದ್ದು, ಅದರಲ್ಲಿ 633 ಕಾರ್ಯನಿರ್ವಹಿಸುತ್ತಿವೆ. ಈ ಬಗ್ಗೆಯೂ ಸಮಗ್ರ ವರದಿ ನೀಡುವಂತೆ ತಿಳಿಸಿದರು.
ಆನಲೈನ್ ನಿಗಾ ವ್ಯವಸ್ಥೆ-ರಾಜ್ಯಕ್ಕೆ ವಿಸ್ತರಿಸಲು ಸೂಚನೆ:
ಘಟಕಗಳ ನಿರ್ಹಣೆಯ ನೆಪದಲ್ಲಿ ರಾಜ್ಯದಲ್ಲಿ ಮೋಸ ನಡೆಯುತ್ತಿದೆ. ಆದ್ದರಿಂದ ಬೆಳಗಾವಿಯಲ್ಲಿ ನೂತನವಾಗಿ ಆರಂಭಿಸಲಾಗಿರುವ ಆನಲೈನ್ ಮಾಹಿತಿ ವ್ಯವಸ್ಥೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವ ಮೂಲಕ ನಿಗಾ ವಹಿಸಬೇಕು ಎಂದು ಸಚಿವ ಈಶ್ವರಪ್ಪ ಸೂಚನೆ ನೀಡಿದರು.
ಕುಡಿಯುವ ನೀರಿನ ಘಟಕಗಳ ಕಾರ್ಯನಿರ್ವಹಣೆಯ ಮೇಲೆ ನಿರಂತರ ನಿಗಾ ವಹಿಸುವ ನೂತನ ಆನಲೈನ್ ವ್ಯವಸ್ಥೆಯನ್ನು ಇಡೀ ರಾಜ್ಯದಲ್ಲಿ ವಿಸ್ತರಿಸಲು ಅಗತ್ಯ ವ್ಯವಸ್ಥೆಯನ್ನು ಜಿಲ್ಲಾ ಪಂಚಾಯತಗಳಿಗೆ ಕಲ್ಪಿಸಲು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಕುಡಿಯುವ ನೀರಿನ ಘಟಕಗಳನ್ನು ದುರಸ್ತಿ ಮಾಡಿ ಸಂಪೂರ್ಣ ನಿರ್ವಹಣೆಯ ಹೊಣೆಯನ್ನು ಒಂದು ಏಜೆನ್ಸಿಗೆ ಮಾತ್ರ ಒದಗಿಸುವ ಬಗ್ಗೆ ಚರ್ಚೆ ನಡೆಸಿದರು.
ಪ್ರತಿ ಮನೆಗೆ ನಲ್ಲಿ ನೀರು ತಲುಪಿಸಲು ಸೂಚನೆ:
ಜಲಜೀವನ ಮಿಷನ್ ಯೋಜನೆಯಡಿ ಕೇಂದ್ರ ಸರ್ಕಾರವು ಶೇ.50 ಹಣಕಾಸಿನ ನೆರವು ಒದಗಿಸುವುದರಿಂದ ಮುಂದಿನ ಮೂರು ವರ್ಷಗಳಲ್ಲಿ ಪ್ರತಿಯೊಂದು ಮನೆಗೆ ನಲ್ಲಿ ಮೂಲಕ ನೀರು ತಲಿಪಿಸಬೇಕು ಎಂದು ಸಚಿವ ಈಶ್ವರಪ್ಪ ತಿಳಿಸಿದರು.
ಎಲ್ಲ ಜಿಲ್ಲೆಗಳಿಗೆ ಮಾಹೆವಾರು ಗುರಿ ನಿಗದಿಪಡಿಸಿ ಗುರಿಸಾಧನೆಯ ಮೇಲ್ವಿಚಾರಣೆ ನಡೆಸಬೇಕು ಎಂದು ಹೇಳಿದರು.
ಹಲವಾರು ವರ್ಷಗಳಿಂದ ಬಾಕಿ ಉಳಿದಿರುವ ಕಾಮಗಾರಿಗಳ ಕುರಿತು ವರದಿ ನೀಡುವಂತೆ ಸಿಇಓ ಅವರಿಗೆ ಸಚಿವರು ನಿರ್ದೇಶನ ನೀಡಿದರು.
ಘನತ್ಯಾಜ್ಯ ನಿರ್ವಹಣಾ ಘಟಕಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಬಾಕಿ ಉಳಿದಿರುವ 200 ಗ್ರಾಮ ಪಂಚಾಯಿತಿಗಳಲ್ಲಿ ಘಟಕ ಸ್ಥಾಪನೆ ಕುರಿತು ಜಿಲ್ಲಾಧಿಕಾರಿಗಳ ಜತೆ ಚರ್ಚಿಸುವಂತೆ ತಿಳಿಸಿದರು.
ಯೋಜನೆ ವಿಳಂಬಗೊಂಡಿರುವುದರಿಂದ ಕೇಂದ್ರ ಸರ್ಕಾರದ ಸೌಲಭ್ಯ ಪಡೆಯುವುದು ಸಾಧ್ಯವಾಗುತ್ತಿಲ್ಲ ಎಂದರು.
ಎಲ್ಲ ಗ್ರಾಮ ಪಂಚಾಯತಿಗಳಿಗೂ ಸೋಲಾರ್ ವಿದ್ಯುತ್ ವ್ಯವಸ್ಥೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಉದ್ಯೋಗ ಖಾತ್ರಿ ಯೋಜನೆಯ ಗುರಿ ಮತ್ತು ಸಾಧನೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡ ಸಚಿವರು, ಬದು ನಿರ್ಮಾಣ ಕಾರ್ಯಕ್ಕೆ ರಾಜ್ಯದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ ಎಂದರು.
ಬಾವಿ ನಿರ್ಮಾಣ ಸೇರಿದಂತೆ ನರೇಗಾ ಯೋಜನೆಯಡಿ ಕೈಗೊಳ್ಳಲಾದ ಕೆಲಸಗಳ ಬಗ್ಗೆ ಹೆಚ್ಚು ಪ್ರಚಾರಕಾರ್ಯ ಕೈಗೊಳ್ಳುವಂತೆ ಸಲಹೆ ನೀಡಿದರು.
ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ಸ್ವತಃ ಜಿಲ್ಲಾ ಪಂಚಾಯತ ಸಿಇಓ ಅವರೇ ಭೇಟಿ ನೀಡಿ ಕುಡಿಯುವ ನೀರಿನ ಘಟಕಗಳನ್ನು ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.
ಚಾಲ್ತಿಯಲ್ಲಿರುವ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿಗಳನ್ನು ಚುರುಕುಗೊಳಿಸಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದರು.
ಉದ್ಯೋಗ ಖಾತ್ರಿ ಅನುದಾನ, ಸ್ವಚ್ಛ ಭಾರತ ಮಿಷನ್ ಹಾಗೂ 15 ನೇ ಹಣಕಾಸು ಆಯೋಗದ ಅನುದಾನ ಬಳಸಿಕೊಂಡು ಮುಂದಿನ ಮಾರ್ಚ್ ವೇಳೆಗೆ ಎಲ್ಲ ಗ್ರಾಮ ಪಂಚಾಯತಗಳಲ್ಲೂ ಘನತ್ಯಾಜ್ಯ ನಿರ್ವಹಣಾ ಘಟಕ ಆರಂಭಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಆಯುಕ್ತರಾದ ಅನಿರುದ್ಧ ಶ್ರವಣ ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಮಳೆಯ ಕಾರಣಕ್ಕಾಗಿ ಕೆಲವೊಂದು ಕುಡಿಯುವ ನೀರಿನ ಘಟಕಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು.
506 ಗ್ರಾಮ ಪಂಚಾಯಿತಿಗಳಲ್ಲೂ ಘನತ್ಯಾಜ್ಯ ನಿರ್ವಹಣಾ ಘಟಕ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಸಚಿವರಿಗೆ ವಿವರಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮುಖ್ಯ ಅಭಿಯಂತರ ಪಿ.ಬಿ
ಹೊಳೆಯಾಚಿ ಅವರು, ರಾಜ್ಯದಲ್ಲಿ ಜಲಜೀವನ ಮಿಷನ್ ಅನುಷ್ಠಾನಕ್ಕೆ ಎಷ್ಟೇ ಖರ್ಚಾದರೂ ಅದರ ಶೇ.50 ರಷ್ಟು ಅನುದಾನ ನೀಡಲು ರಾಜ್ಯದ ಹಣಕಾಸು ಇಲಾಖೆ ಕೂಡ ತಾತ್ವಿಕವಾಗಿ ಒಪ್ಪಿಗೆ ನೀಡಿದೆ ಎಂದರು.
ಶುದ್ಧ ಕುಡಿಯುವ ನೀರಿನ ಘಟಕಗಳ ಮೇಲೆ ಆನ್‌ಲೈನ್ ನಿಗಾ:
ಶುದ್ಧ ಕುಡಿಯುವ ನೀರಿನ ಘಟಕಗಳ ಕಾರ್ಯನಿರ್ವಹಣೆಯ ಮೇಲೆ ಆನಲೈನ್ ಮೂಲಕ ನಿಗಾ ವಹಿಸುವ ವ್ಯವಸ್ಥೆಯನ್ನು ಸಚಿವ ಈಶ್ವರಪ್ಪ ಚಾಲನೆ ನೀಡಿದರು.
ಪ್ರತಿ ಶನಿವಾರ ಕುಡಿಯುವ ನೀರಿನ ಘಟಕಗಳ ಕಾರ್ಯನಿರ್ವಹಣೆಯ ಕುರಿತು ಪ್ರಗಿ ಶನಿವಾರ ಸಭೆ ನಡೆಸಲಾಗುವುದು ಎಂದು ಸಿಇಓ ದರ್ಶನ್ ಎಚ್.ವಿ.ತಿಳಿಸಿದರು.
ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ,
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಜಿ.ಜಯರಾಮ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
***