Breaking News

ಸುದ್ದಿಗಳ ಸತ್ಯಾಸತ್ಯತೆ ಪರಾಮರ್ಶಿಸಿ ಪ್ರಕಟಿಸಬೇಕು: ಜಿಲ್ಲಾಧಿಕಾರಿ ಹಿರೇಮಠ

ಬೆಳಗಾವಿ, ): ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿಗಳು ವ್ಯಾಪಕವಾಗಿರುವ ಪ್ರಸ್ತುತ ಸನ್ನಿವೇಶದಲ್ಲಿ ಯಾವುದೇ ಸುದ್ದಿ ಇರಲಿ ಪ್ರತ್ಯಕ್ಷವಾಗಿ ನೋಡಿದರೂ ಪ್ರಮಾಣಿಸಿ ನೋಡು ಎಂಬಂತೆ ಸುದ್ದಿಯ ಸತ್ಯಾಸತ್ಯತೆ ಪರಿಶೀಲಿಸಿದ ಬಳಿಕವೇ ಮಾಧ್ಯಮಗಳು ಪ್ರಕಟಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಾಧ್ಯಮದವರಿಗಾಗಿ ಸೋಮವಾರ(ಡಿ.14) ಏರ್ಪಡಿಸಲಾಗಿದ್ದ “ಫ್ಯಾಕ್ಟ್ ಚೆಕ್” ಕುರಿತ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಸುದ್ದಿಗಳಿಂದ ಕೆಲವೊಮ್ಮೆ ಜನರಲ್ಲಿ ಆತಂಕ ಉಂಟಾಗುತ್ತಿದೆ. ಆದ್ದರಿಂದ ಇಂತಹ ಸುದ್ದಿಗಳು ಬಂದಾಗ ಮಾಧ್ಯಮಗಳು ಸತ್ಯಾಸತ್ಯತೆ ಪರಿಶೀಲಿಸುವ ಮೂಲಕ ಜನರಿಗೆ ಸರಿಯಾದ ಮಾಹಿತಿಯನ್ನು ನೀಡುವ ಕೆಲಸ ಮಾಡಬೇಕಿದೆ ಎಂದರು.

ಸುಳ್ಳುಸುದ್ದಿ ಪ್ರಕಟಣೆ- ಶಿಕ್ಷೆ ಅಗತ್ಯ:

ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿರುವ ಸುಳ್ಳುಸುದ್ದಿ ಹರಡುವಂತವರನ್ನು ಗುರುತಿಸಿ ಶಿಕ್ಷಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಪ್ರತಿಪಾದಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಸುಳ್ಳು ಸುದ್ದಿಗಳಿಂದ ಗೊಂದಲ ಉಂಟಾದ ಕೆಲವು ಉದಾಹರಣೆಗಳನ್ನು ಅವರು ನೀಡಿದರು.

ಇದೇ ವೇಳೆ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಸುದ್ದಿಗಳ ಸತ್ಯಾಸತ್ಯತೆ ಪತ್ತೆಹಚ್ಚುವ ವಿಧಾನಗಳನ್ನು ಪತ್ರಕರ್ತರಿಗೆ ತಿಳಿಸುವ ಉದ್ಧೇಶದಿಂದ ತರಬೇತಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಘಟನೆಗಳ ಫ್ಯಾಕ್ಟ್ ಚೆಕ್ ತರಬೇತಿ:

“ಫ್ಯಾಕ್ಟ್ ಚೆಕ್” ಕುರಿತು ಗೂಗಲ್ ಸಂಸ್ಥೆಯಿಂದ ವಿಶೇಷ ತರಬೇತಿ ಪಡೆದಿರುವ ಸಂಪನ್ಮೂಲ ವ್ಯಕ್ತಿ ಹಾಗೂ ಪತ್ರಕರ್ತರಾದ ಶ್ರೀ ಪ್ರಮೋದ್ ಹರಿಕಾಂತ ಅವರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ವಿವಿಧ ಬಗೆಯ ಸುದ್ದಿಗಳ ಸತ್ಯಾಸತ್ಯತೆ ಪತ್ತೆ ಹಚ್ಚುವ ಕುರಿತು ತರಬೇತಿ ನೀಡಿದರು.

ಎಲ್ಲೋ ಯಾವಾಗಲೋ ನಡೆದ ಹಳೆಯ ಘಟನೆಗಳ ಛಾಯಾಚಿತ್ರ, ವಿಡಿಯೋ ಅಥವಾ ಧ್ವನಿ ತುಣುಕುಗಳನ್ನು ಇನ್ಯಾವುದೋ ಘಟನೆಗೆ ತಳಕುಹಾಕಿ ಸುಳ್ಳುಸುದ್ದಿ ಸೃಷ್ಟಿಸಿ ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದ ಕೆಲ ಘಟನೆಗಳನ್ನು ಪ್ರಾತ್ಯಕ್ಷಿಕೆ ಮೂಲಕ ಅವರು ವಿವರಿಸಿದರು.

ಶಿಬಿರದಲ್ಲಿ ಫೋಟೋ ವೆರಿಫಿಕೇಷನ್, ವಿಡಿಯೋ ವೆರಿಫಿಕೇಷನ್, ವೆಬ್ಸೈಟ್ ವೆರಿಫಿಕೇಷನ್, ಜಿಯೋ ಲೋಕೇಷನ್ ಪತ್ತೆ ಮತ್ತು ಸಾಮಾಜಿಕ ಜಾಲತಾಣಗಳ ಸತ್ಯಾಸತ್ಯತೆ ಪರಿಶೀಲನೆ ಸೇರಿದಂತೆ ಅನೇಕ ವಿಷಯಗಳ ಕುರಿತು ಪ್ರಮೋದ ಹರಿಕಾಂತ ತಿಳಿಸಿಕೊಟ್ಟರು.
ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳ 30 ಕ್ಕೂ ಅಧಿಕ ವರದಿಗಾರರು/ಉಪ ಸಂಪಾದಕರು ಶಿಬಿರದಲ್ಲಿ ಪಾಲ್ಗೊಂಡಿದ್ದರು.
***

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *