ಬೆಳಗಾವಿ, : ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಸೋಂಕು ನಿಯಂತ್ರಣಕ್ಕೆ ಜಿಲ್ಲೆಯ ಪ್ರತಿ ತಾಲ್ಲೂಕು ಮಟ್ಟದಲ್ಲಿ ಸ್ಥಳೀಯ ಅಧಿಕಾರಿಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಿಕೊಂಡು ಕೋವಿಡ್-೧೯ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ಸೂಚನೆ ನೀಡಿದ್ದಾರೆ.
ಕೋವಿಡ್-೧೯ ಮಾರ್ಗಸೂಚಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬೈಲಹೊಂಗಲ, ಕಿತ್ತೂರು ಹಾಗೂ ಖಾನಾಪುರ ತಾಲ್ಲೂಕುಗಳಿಗೆ ಮಂಗಳವಾರ ಭೇಟಿ ನೀಡಿ ಅಧಿಕಾರಿಗಳ ಜತೆ ಅವರು ಸಭೆ ನಡೆಸಿದರು.
ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರರು, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ಆರೋಗ್ಯಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ತಂಡಗಳನ್ನು ರಚಿಸಿಕೊಂಡು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು.
ಕೋವಿಡ್-೧೯ ತಪಾಸಣೆ, ಸೋಂಕಿತರ ಪತ್ತೆಹಚ್ಚುವಿಕೆ ಹಾಗೂ ಚಿಕಿತ್ಸೆಗೆ ಮತ್ತು ಕಾಲಕಾಲಕ್ಕೆ ಸರ್ಕಾರ ಪ್ರಕಟಿಸುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ತಂಡಗಳು ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ತಾಲ್ಲೂಕು ಮಟ್ಟದಲ್ಲಿ ವಾರ್ ರೂಮ್ ಸ್ಥಾಪನೆಗೆ ನಿರ್ದೇಶನ:
ಕೋವಿಡ್ ಸೋಂಕಿತರ ಮಾಹಿತಿ ಸಂಗ್ರಹ, ವಿನಿಮಯ ಮತ್ತು ತುರ್ತು ಚಿಕಿತ್ಸೆಗೆ ಅನುಕೂಲವಾಗುವಂತೆ ತಾಲ್ಲೂಕು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ನಡುವೆ ಮಾಹಿತಿ ವಿನಿಮಯಕ್ಕಾಗಿ ಪ್ರತಿ ತಾಲ್ಲೂಕು ಮಟ್ಟದಲ್ಲಿ ವಾರ್ ರೂಮ್ ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ನಿರ್ದೇಶನ ನೀಡಿದರು.
ಈ ರೀತಿಯ ವಾರ್ ರೂಮ್ ಸ್ಥಾಪಿಸುವುದರಿಂದ ಕೋವಿಡ್-೧೯ ಸೋಂಕು ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಾಕಷ್ಟು ಅನುಕೂಲವಾಗಲಿದೆ.
ತಾಲ್ಲೂಕು ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಈ ವಾರ್ ರೂಮ್ ಕಾರ್ಯನಿರ್ವಹಿಸಬೇಕು. ಪ್ರತಿದಿನದ ಸಮಗ್ರ ಮಾಹಿತಿಯನ್ನು ಜಿಲ್ಲಾ ಕೇಂದ್ರಕ್ಕೆ ಕಳಿಸಿದರೆ ಒಟ್ಟಾರೆ ಜಿಲ್ಲೆಯ ಪರಿಸ್ಥಿತಿ ಮೇಲೆ ನಿಗಾ ವಹಿಸಲು ಹಾಗೂ ಅಗತ್ಯವಿರುವ ಕಡೆಗೆ ಹೆಚ್ಚಿನ ಗಮನಹರಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪ್ರತಿದಿನ 500 ಜನರ ತಪಾಸಣೆ ಗುರಿ:
ಪ್ರತಿ ತಾಲ್ಲೂಕಿನಲ್ಲಿ ಪ್ರತಿದಿನ ಕನಿಷ್ಠ ಐದುನೂರು ಜನರ ಕೋವಿಡ್-೧೯ ತಪಾಸಣೆಗೆ ಗುರಿ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.
ಕೋವಿಡ್-೧೯ ತಪಾಸಣೆ ನಡೆಸಿ ಸೋಂಕಿತರನ್ನು ಪತ್ತೆ ಮಾಡಿ ಅವರನ್ನು ಪ್ರತ್ಯೇಕವಾಗಿರಿಸುವುದರಿಂದ ಮಾತ್ರ ಸೋಂಕು ಹರಡುವಿಕೆಯನ್ನು ನಿಯಂತ್ರಿಸಬಹುದು. ಆದ್ದರಿಂದ ಪ್ರತಿ ತಾಲ್ಲೂಕುಗಳಲ್ಲೂ ತಪಾಸಣೆ ಹೆಚ್ಚಿಸಲು ಸೂಚನೆ ನೀಡಲಾಗಿದೆ.
ಮುಂದಿನ ಒಂದು ವಾರದಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೂ ಭೇಟಿ ನೀಡಿ ಪರಿಸ್ಥಿತಿಯನ್ನು ತಾವೇ ಖುದ್ದಾಗಿ ಪರಿಶೀಲಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಆಯಾ ತಾಲ್ಲೂಕಿನ ತಹಶೀಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಆರೋಗ್ಯಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು