Breaking News

ಮೃತ ವ್ಯೆಕ್ತಿಯ ಹೆಸರಿನಲ್ಲಿ ಕೋಟ್ಯಾಂತರ ರೂ ಪಂಗನಾಮ…!!!

ಬೆಳಗಾವಿ- ಕ್ರಾಂತಿಯ ನೆಲ ಬೆಳಗಾವಿ ಜಿಲ್ಲೆಯ ಸಹಕಾರಿ ಕ್ಷೇತ್ರ ದಿನದಿಂದ ದಿನಕ್ಕೆ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ, ಬೆಳಗಾವಿ ಜಿಲ್ಲೆಯಲ್ಲಿ ಈಗ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

ಆಡಳಿತ ಮಂಡಳಿಯವರು ಮೃತ ವ್ಯಕ್ತಿಯ ಹೆಸರಿನಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 30 ಸಾಲದ ಖಾತೆಗಳನ್ನು ಸೃಷ್ಟಿಸಿ ಹಾಗೂ ಇತರ ಕಾರಣಕ್ಕಾಗಿ ಕಾನೂನುಬಾಹಿರವಾಗಿ ₹ 3,27,75,958 ಕೋಟಿ ದುರುಪಯೋಗ ಮಾಡಿಕೊಂಡಿರುವ, ಸಂಘದ ಸದಸ್ಯರಿಗೆ ನಂಬಿಕೆ ದ್ರೋಹ ಹಾಗೂ ಮೋಸ ಎಸಗಿರುವ ಘಟನೆ ನಡೆದಿದೆ.

ಈ ಕುರಿತು ನೆಹರೂ ನಗರದಲ್ಲಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಪತ್ತಿನ ಸಹಕಾರಿ ಸಂಘ ನಿಯಮಿತದ ಮಾಜಿ ಅಧ್ಯಕ್ಷ, ಮಾಜಿ ಕಾರ್ಯದರ್ಶಿ ಮತ್ತು ನಿರ್ದೇಶಕರ ವಿರುದ್ಧ ಇಲ್ಲಿನ ಸಿಇಎನ್‌ (ಸೈಬರ್, ಎಕನಾಮಿಕ್ ಆ್ಯಂಡ್ ನಾರ್ಕೋಟಿಕ್) ಅಪರಾಧ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.

‘2015ರ ಜೂನ್‌ 1ರಿಂದ 2020ರ ಅ.18ರ ನಡುವಿನ ಅವಧಿಯಲ್ಲಿ ಈ ಅವ್ಯವಹಾರ ನಡೆದಿದೆ. ಆರೋಪಿಗಳು, ಸದಸ್ಯರಿಂದ ಸಂಗ್ರಹಿಸಿದ ಹಣವನ್ನು ಕಾನೂನುಬಾಹಿರವಾಗಿ ತಮ್ಮ ಸ್ವಂತ ಲಾಭಕ್ಕೆ ಬಳಸಿಕೊಂಡು ಮೋಸ ಮಾಡಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದರೊಂದಿಗೆ ಮತ್ತೊಂದು ಸಹಕಾರಿ ಸಂಘದಲ್ಲಿ ನಡೆದಿರುವ ಅಕ್ರಮ ಬೆಳಕಿಗೆ ಬಂದಿದೆ.

ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಇನ್‌ಸ್ಪೆಕ್ಟರ್‌ ಬಿ.ಆರ್. ಗಡ್ಡೇಕರ್‌ ನೇತೃತ್ವದಲ್ಲಿ ತನಿಖೆ ಆರಂಭಿಸಿದ್ದಾರೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲು ಅವರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಾಜಿ ಅಧ್ಯಕ್ಷ ಸೇರಿದಂತೆ 17 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಅವರೆಲ್ಲರೂ ಬಂಧನ ಭೀತಿ ಎದುರಿಸುತ್ತಿದ್ದಾರೆ.

ಸಂಘದ ಗೌರವ ಕಾರ್ಯದರ್ಶಿ ಸುರೇಶ ವಡ್ಡರ ದೂರು ನೀಡಿದ್ದಾರೆ. ಮಾಜಿ ಅಧ್ಯಕ್ಷ ನಾತಾಜಿ ಪೀರಾಜೆ ಪಾಟೀಲ (ಹೆಸ್ಕಾಂ ಉಪವಿಭಾಗ–3ರ ಮಹಾಂತೇಶ ನಗರ ಶಾಖೆಯ ಲೈನ್‌ ಮೆಕ್ಯಾನಿಕ್‌ ಗ್ರೇಡ್‌–2 ಆಗಿರುವ ಅವರು ಇತ್ತೀಚೆಗೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ದಾಳಿಗೆ ಒಳಗಾಗಿದ್ದರು. ನ.24ರಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿ ಕಾರ್ಯಪಾಲಕ ಎಂಜಿನಿಯರ್ ಆದೇಶ ಹೊರಡಿಸಿದ್ದರು), ಮಾಜಿ ಕಾರ್ಯದರ್ಶಿ ಮಹೇಶ ಪಾಟೀಲ, ಮಾಜಿ ಉಪಾಧ್ಯಕ್ಷ ಪ್ರವೀಣಕುಮಾರ ಕೆ.ಚಿಕಡೆ, ಮಾಜಿ ನಿರ್ದೇಶಕರಾದ ಸುರೇಶ ಕಾಂಬಳೆ, ಸುರೇಶ ಪಿ. ಕೋಲಕಾರ, ಅಜಿತ ಎಂ. ಪೂಜಾರಿ, ಮಲ್ಲಸರ್ಜ ಸಿ. ಶಹಾಪೂರಕರ, ವಿಲಾಸ ಪಾವಸೆ, ಸುಭಾಷ ಹಳ್ಳೋಳ್ಳಿ, ಎಸ್. ವನಥನ್, ಹನುಮಂತರ ಪಾಟೀಲ, ಹನುಮಂತ ವಿ. ಪಾಟೀಲ, ದಾಕ್ಷಾಯಿಣಿ ನೇಸರಗಿ, ಗಾಯತ್ರಿ ಕೆ.ಆರ್., ಶಿಲ್ಪಾ ಬಿ. ಚವ್ಹಾಣ, ಬಿ.ಎಲ್. ಗೊಡಲ್‌ಕುಂದರಗಿ ಹಾಗೂ ರಾಜೇಂದ್ರಕುಮಾರ್ ಬಿ. ಹಳಿಂಗಳಿ ಎನ್ನುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಇವರೆಲ್ಲರೂ ಹೆಸ್ಕಾಂ ನೌಕರರಾಗಿದ್ದಾರೆ.

ಚುನಾವಣೆ ನಡೆದು ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ನಂತರ ದಾಖಲೆಗಳನ್ನು ಪರಿಶೀಲಿಸಿದಾಗ ಅಕ್ರಮ ನಡೆದಿರುವುದು ಗೊತ್ತಾಗಿದೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *