ಬೆಳಗಾವಿ- ಕೋವೀಡ್ ತಡೆಯಲು ಸರ್ಕಾರ,ಗಡಿಭಾಗದ ಚೆಕ್ ಪೋಸ್ಟ್ ಗಳಲ್ಲಿ ಚೆಕಿಂಗ್ ಮಾಡ್ತಾ ಇದ್ರೆ,ಇದರಿಂದ ತಪ್ಪಸಿಕೊಳ್ಳಲು ಕಳ್ಳ ದಾರಿಯಲ್ಲಿ ಸಂಚರಿಸುತ್ತಿದ್ದ ಎರಡು ಖಾಸಗಿ ಬಸ್ ಗಳು ಖಾಕಿ ಬಲೆಗೆ ಬಿದ್ದಿವೆ.
ನಿಪ್ಪಾಣಿಯ ಕುಗನೋಳಿ ಚೆಕ್ ಪೋಸ್ಟ್ ನಲ್ಲಿ ,ರಾಜ್ಯದ ಗಡಿ ಪ್ರವೇಶ ಮಾಡುವ ಪ್ರತಿಯೊಬ್ಬ ಪ್ರಯಾಣಿಕನ RTPCR ರಿಪೋರ್ಟ್ ನೆಗೆಟೀವ್ ಇದ್ರೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಈ ಕಿರಿಕಿರಿ ನಮಗ್ಯಾಕೆ ಎಂದು ದಾರಿ ಬಿಟ್ಟವರು ಈಗ ಪೋಲೀಸರ ಬಲೆಗೆ ಬಿದ್ದಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪ್ರಯಾಣಿಕರ ಬಳಿ ಮಾರ್ಗಸೂಚಿ ಪ್ರಕಾರ ಆರ್‌ಟಿಪಿಸಿಆರ್‌ವ ಕೋವಿಡ್ ನೆಗೆಟಿವ್ ವರದಿ ಇರುವುದನ್ನು ಖಚಿತಪಡಿಸಿಕೊಳ್ಳದೆ ಮತ್ತು ಕಳ್ಳದಾರಿಯಲ್ಲಿ ರಾಜ್ಯ ಪ್ರವೇಶಿಸಲು ಪ್ರಯತ್ನಿಸಿದ್ದ 2 ಖಾಸಗಿ ಬಸ್‌ಗಳ ವಿರುದ್ಧ ಜಿಲ್ಲೆಯ ನಿಪ್ಪಾಣಿ ಠಾಣೆಯ ಪೊಲೀಸರು ಸಾಂಕ್ರಾಮಿಕ ರೋಗ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದಾರೆ.
ರಾಜ್ಯಕ್ಕೆ ಸಂಪರ್ಕ ನೀಡುವ ನಿಪ್ಪಾಣಿ ತಾಲ್ಲೂಕಿನ ಕೊಗನೋಳಿ ಚೆಕ್‌ಪೋಸ್ಟ್ ಸಮೀಪದಲ್ಲಿ ಬಸ್‌ಗಳನ್ನು ತಡೆದು ಪರಿಶೀಲಿಸಲಾಗಿದೆ. ಬಸ್ ಮಾಲೀಕರು, ಚಾಲಕ ಹಾಗೂ ನಿರ್ವಾಹಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಶರ್ಮಾ ಟ್ರಾನ್ಸ್‌ಪೋರ್ಟ್‌ಗೆ ಸೇರಿದ ಬಸ್‌ನಲ್ಲಿ 28 ಪ್ರಯಾಣಿಕರಿದ್ದರು. ಅವರಲ್ಲಿ 24 ಮಂದಿ ಬಳಿ ಆರ್‌ಟಿಪಿಸಿಆರ್ ಕೋವಿಡ್ ನೆಗೆಟಿವ್ ವರದಿ ಇರಲಿಲ್ಲ. ಈ ಬಸ್ ಮುಂಬೈನಿಂದ ಬೆಂಗಳೂರಿಗೆ ತೆರಳುತ್ತಿತ್ತು.
ನ್ಯಾಷನಲ್ ಟ್ರಾವೆಲ್ಸ್‌ಗೆ ಸೇರಿದ ಮತ್ತೊಂದು ಬಸ್‌ನಲ್ಲಿ 28 ಪ್ರಯಾಣಿಕರ ಪೈಕಿ 17 ಮಂದಿ ಬಳಿ ಆರ್‌ಟಿಪಿಸಿಆರ್ ಕೋವಿಡ್ ನೆಗೆಟಿವ್ ವರದಿ ಇರಲಿಲ್ಲ. ಈ ಬಸ್ ಕೂಡ ಮುಂಬೈನಿಂದ ಬೆಂಗಳೂರಿಗೆ ತೆರಳುತ್ತಿತ್ತು. ಬಸ್‌ನ ವ್ಯವಸ್ಥಾಪಕ, ಚಾಲಕರಾದ ಅಸ್ಲಂಉಲ್ಲಾಖಾನ್ ಮತ್ತು ಎನ್.ಉಲ್ಲಾಖಾನ್ ಹಾಗೂ ನಿರ್ವಾಹಕ ಟಿಪ್ಪುಸುಲ್ತಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರು ಚೆಕ್‌ಪೋಸ್ಟ್‌ನಲ್ಲಿ ತಪಾಸಣ ತಪ್ಪಿಸಿಕೊಳ್ಳುವುದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಬದಲಿಗೆ ಕಾಗಲ್, ಶೇಂಡೂರ್, ಮಾಖ್ವೆ ಹಾಗೂ ಅಪ್ಪಾಚಿವಾಡಿ ಮಾರ್ಗದಲ್ಲಿ ಸಂಚರಿಸಿ ಪುಣೆ–ಬೆಂಗಳೂರು ಹೆದ್ದಾರಿ ಸೇರಿಕೊಳ್ಳಲು ಯತ್ನಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.
‘ಬಸ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಕೋವಿಡ್ ನೆಗೆಟಿವ್ ವರದಿ ಇದ್ದವರಿಗೆ ಬೇರೆ ಬಸ್‌ಗಳಲ್ಲಿ ಪ್ರಯಾಣ ಮುಂದುವರಿಸಲು ಅವಕಾಶ ಕೊಡಲಾಗಿದೆ. ಉಳಿದವರನ್ನು ಚೆಕ್‌ಪೋಸ್ಟ್‌ನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯು ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದಾರೆ’ ಎಂದು ಇನ್‌ಸ್ಪೆಕ್ಟರ್ ಸಂಗಮೇಶ ಶಿವಯೋಗಿ ತಿಳಿಸಿದ್ದಾರೆ.