ಈಶ್ವರಪ್ಪ ರಾಜಿನಾಮೆ ಕೊಡಬಾರ್ದು- ರಮೇಶ್ ಜಾರಕಿಹೊಳಿ
ಸಿಡಿ ಕೇಸ್, ಈಶ್ವರಪ್ಪ ಕೇಸ್ ಸಿಐಡಿ ತನಿಖೆಗೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಒತ್ತಾಯ
ಬೆಳಗಾವಿ: ಸಿಡಿ ಪ್ರಕರಣ ಮತ್ತು ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಒತ್ತಾಯಿಸಿದ್ದಾರೆ.
ಗುರುವಾರ ಬಡಸ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರ ಸಂತೋಷ ವಿಚಾರದಲ್ಲಿ ಸಚಿವ ಈಶ್ವರಪ್ಪ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ. ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದ ಟೀಮ್ ಇದೀಗ ಈಶ್ವರಪ್ಪ ವಿರುದ್ಧ ಷಡ್ಯಂತ್ರ ಮಾಡಿದೆ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಕಿಡಿಕಾರಿದರು.
ಆತ್ಮಹತ್ಯೆಗೀಡಾದ ಸಂತೋಷ ಪಾಟೀಲ ಆತ್ಮಕ್ಕೆ ಶಾಂತಿ ಸಿಗಲಿ. ಕಾಂಗ್ರೆಸ್‌ನವರು ಸಾವಿನ ಮನೆಯಲ್ಲಿಯೂ ರಾಜಕೀಯ ಮಾಡಿದ್ದಾರೆ. ಸದ್ಯ ಯಾವುದೇ ಕಾರಣಕ್ಕೂ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬಾರದು. ಒಂದು ವೇಳೆ ತಪ್ಪಿದ್ದರೆ ಅವರಿಗೆ ಗಲ್ಲು ಶಿಕ್ಷೆ ನೀಡಲಿ ಎಂದರು.
ಕಳೆದ ಒಂದು ವರ್ಷದಿಂದ ನನ್ನನ್ನು ಷಡ್ಯಂತ್ರದಲ್ಲಿ ಸಿಲುಕಿಸಿದರು. ಅದನ್ನು ನಾವು ಎದುರಿಸಿದ್ದೇನೆ. ಸಂತೋಷ ಪಾಟೀಲ ಸಾಯಬಾರದಿದತ್ತು. ಬಿಲ್ ಸಂಬಂಧ ಗ್ರಾಪಂ ಅಧ್ಯಕ್ಷ ನಾಗೇಶ ನನಗೆ ದೂರವಾಣಿ ಕರೆ ಮಾಡಿದ್ದ. ಆದರೆ, ಸಂತೋಷ ಸಾವಿನ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ರಾಜಕೀಯ ಮಾಡಿದರು. ನನ್ನ ಹೆಸರನ್ನು ಎಳೆದು ತರಲಾಯಿತು. ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ ಅದೇ ಮಹಾನಾಯಕರೇ ಈಗ ಈಶ್ವರಪ್ಪ ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಹೈಕಮಾಂಡ್ ಒಪ್ಪಿಗೆ ಪಡೆದು, ಸೋಮವಾರ ಬೆಳಗ್ಗೆ ೧೧ ಗಂಟೆಗೆ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಈ ಎಲ್ಲ ಘಟನೆಗಳ ಕುರಿತು ಮಾಹಿತಿ ನೀಡುತ್ತೇನೆ. ನನ್ನ ಸಿಡಿ ಪ್ರಕರಣ ಮತ್ತು ಗುತ್ತಿಗೆದಾರ ಸಂತೋಷ ಪಾಟೀಲ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು ಎಂದು ರಮೇಶ ಜಾರಕಿಹೊಳಿ ಒತ್ತಾಯಿಸಿದರು.