ಬೆಳಗಾವಿ- ಗ್ರಾಮದ ದ್ಯಾಮವ್ವನ ಜಾತ್ರೆಯಲ್ಲಿ ದಲಿತರಿಗೆ ಗ್ರಾಮದ ಸವರ್ಣೀಯರು ದೇವಸ್ಥಾನ ಪ್ರವೇಶ ಹಾಗೂ ಹಣೆಗೆ ಬಂಡಾರ ಹಚ್ಚದೇ ದಲಿತರಿಗೆ ಬಹಿಷ್ಕಾರ ಹಾಕಿದ ಘಟನೆ ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಚಿಕ್ಕ ಮುನ್ನೋಳ್ಳಿ ಗ್ರಾಮದಲ್ಲಿ ನಡೆದಿದೆ.ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ನಂದಗಡ ಠಾಣೆ ಪೋಲಿಸರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸವರ್ಣೀಯರು ಮತ್ತು ದಲಿತರ ನಡುವಿನ ಬಿಕ್ಕಟ್ಟ ಬಗೆಹರಿಸಿ, ಸಂಧಾನಕ್ಕೆ ಯತ್ನ ಮಾಡಿದ್ದಾರೆ.
ನಮ್ಮ ಗ್ರಾಮದಲ್ಲಿ ಕ್ಷೌರೀಕರು ದಲಿತರಿಗೆ ಕಟ್ಟಿಂಗ್ ಮಾಡೋದಿಲ್ಲ, ಪಕ್ಕದ ಊರಿಗೆ ಹೋಗಿ ಕಟಿಂಗ್ ಮಾಡಿಸಿಕೊಂಡು ಬರಬೇಕು. ಊರ ಭಾವಿಯ ನೀರು ಸಹ ನೀಡುವುದಿಲ್ಲ ಅಷ್ಟೇ ಅಲ್ಲ ನಿನ್ನೆ ನಡೆದ ದ್ಯಾಮವ್ವನ ಜಾತ್ರೆಯಲ್ಲಿ ದಲಿತ ಸಮುದಾಯಕ್ಕೆ ಹಣಿಗೆ ಪ್ರಸಾದ ಹಚ್ಚಲಿಲ್ಲ.ಸವರ್ಣೀಯರು ದಲಿತರಿಗೆ ಬಹಿಷ್ಕಾರ ಹಾಕಿದ್ದಾರೆ ಎಂದು ಖಾನಾಪೂರ ತಾಲೂಕಿನ ಚಿಕ್ಕ ಮುನ್ನೋಳ್ಳಿ ಗ್ರಾಮದ ದಲಿತ ಮಹಿಳೆಯರು ಗ್ರಾಮದ ಸವರ್ಣೀಯರ ಮೇಲೆ ಆರೋಪ ಮಾಡಿದ್ದಾರೆ. ಇನ್ನೂ ದಲಿತ ಮುಖಂಡರು ಅಸ್ಪೃಶ್ಯತೆ ಆಚರಣೆ ಮಾಡುವವರ ವಿರುದ್ಧ ಕೇಸ್ ದಾಖಲಿಸಬೇಕು ಇಲ್ಲದಿದ್ದರೆ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಈ ವಿಚಾರ ತಿಳಿಯುತ್ತಿದ್ದಂತೆಯೇ ಗ್ರಾಮಕ್ಕೆ ಬೆಳಗಾವಿ ಉಪ ವಿಭಾಗಾಧಿಕಾರಿ ರವೀಂದ್ರ ಕರಿ ಲಿಂಗನ್ನವರ,ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಉಮಾ ಸಾಲಿಗೌಡರ್, ಡಿವೈಎಸ್ಪಿ ಶಿವಾನಂದ ಕಟಗಿ ಸ್ಥಳಕ್ಕೆ ಧಾವಿಸಿ ದೇವಸ್ಥಾನದ ಆವರಣದಲ್ಲಿ ಸಭೆ ನಡೆಸಿ ದಲಿತ ಸಮುದಾಯಕ್ಕೆ ದ್ಯಾಮವ್ವನ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಿದರು. ನಂತರ ದಲಿತ ಕೇರಿಗೆ ತೆರಳಿ ದಲಿತ ಸಮುದಾಯದವರ ಸಮಸ್ಯೆ ಹಾಗೂ ಘಟನೆ ಕುರಿತು ಮಾಹಿತಿ ಪಡೆದು ಇಬ್ಬರ ನಡುವೆ ಸಂಧಾನ ನಡೆಸಿದರು.
ಇನ್ನೂ ಇದೇ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಸವರ್ಣೀಯರು ನಾವು ಯಾವುದೇ ಬಹಿಷ್ಕಾರ ಹಾಕಿಲ್ಲ. ದಲಿತ ಸಮುದಾಯವರು ಮಾಡುತ್ತಿರುವ ಆರೋಪ ಸದ್ಯಕ್ಕೆ ದೂರವಾಗಿದ್ದು, ಮುಂದೆ ಎಲ್ಲರೂ ಅಣ್ಣತಮ್ಮಂದಿರಂತೆ ಬದುಕುತ್ತೇವೆ ಎಂದರು.
ಖಾನಾಪೂರ ತಾಲೂಕಿನಲ್ಲಿ ಈರೀತಿಯ ದಲಿತ ಬಹಿಷ್ಕಾರದಂತಹ ಹೇಯ ಕೃತ್ಯಗಳು ಮೇಲಿಂದ ಮೇಲೆ ನಡೆಯುತ್ತಿದೆ. ಕೂಡಲೇ ಆಯಾ ಗ್ರಾಮಗಳಿಗೆ ತೆರಳಿ ಸಂಬಂಧಪಟ್ಟ ಅಧಿಕಾರಿಗಳು ದಲಿತರಿಗೆ ಆಗುತ್ತಿರುವ ಶೋಷಣೆಗಳಿಗೆ ಕಡಿವಾಣ ಹಾಕಬೇಕಿದೆ.