ಮ್ಯಾಕ್ಸಿಕ್ಯಾಬ್, ಬಸ್ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಆದೇಶ
ಬೆಳಗಾವಿ,
ಜಿಲ್ಲೆಯಲ್ಲಿ ಕೊವಿಡ್-19 ವೈರಾಣು ಹರಡುವುದನ್ನು ತಡೆಗಟ್ಟಲು ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದ ಬೆಳಗಾವಿ ನಗರ ಹಾಗೂ ಬೆಳಗಾವಿ ಜಿಲ್ಲೆಗೆ ಆಗಮಿಸುವ ಮತ್ತು ನಿರ್ಗಮಿಸುವ ಸಾರ್ವಜನಿಕ ವಾಹನಗಳಾದ ಮ್ಯಾಕ್ಸಿಕ್ಯಾಬ್ ( 12 + 1 ) / ಬಸ್ ಸೇರಿದಂತೆ ಎಲ್ಲಾ ಭಾರಿ ಪ್ರಯಾಣಿಕರ ವಾಹನಗಳಾದ ಕಾಂಟ್ರಾಕ್ಟ್ ಕ್ಯಾರೇಜ್ / ಸ್ಟೇಜ್ ಕ್ಯಾರೇಜ್ / ಅಖಿಲ ಭಾರತ ಪ್ರವಾಸಿ ಬಸ್ ಗಳ ಸಂಚಾರವನ್ನು ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಸ್. ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಶುಕ್ರವಾರ (ಮಾ.20) ರಂದು ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಸಭೆಯ ನಿರ್ಣಯದಂತೆ ಬೆಳಗಾವಿ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಇಲ್ಲಿಗೆ ಆಗಮಿಸುವ ಮತ್ತು ನಿರ್ಗಮಿಸುವ ವಾಹನಗಳ ಸಂಚಾರ ನಿಷೇಧಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.
” The Karnataka Epidemic Diseases , COVID – 19 Regulations , 2020 ರ ಪ್ರಕಾರ ಮುಂದಿನ ಆದೇಶದ ವರೆಗೆ ವಾಹನಗಳನ್ನು ಆಗಮನ ಮತ್ತು ನಿರ್ಗಮಿಸುವುದನ್ನು ನಿಷೇಧಿಸಲಾಗಿದೆ.
ಕರೊನಾ ವೈರಸ್ ಹರಡುವುದನ್ನು ತಡೆಗಟ್ಟುವ
ಕುರಿತು ಹಲವು ಅನುಸರಣಾ ಕ್ರಮಗಳನ್ನು ಪಾಲಿಸುವಂತೆ ಅವರು ತಿಳಿಸಿದ್ದಾರೆ.
ಸಂಚಾರ ನಿಷೇಧ ಆದೇಶದ ಅನ್ವಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಬೆಳಗಾವಿ ನಗರ ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು , ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದ ವಾಹನಗಳು ಆಗಮಿಸುವುದನ್ನು ಮತ್ತು ಹೊರ ಹೋಗುವುದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಡಾ.ಎಸ್.ಬಿ . ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ.
*****