ಬೆಳಗಾವಿ- ಮಹಾರಾಷ್ಡ್ರದ ಪೂನೆಯಲ್ಲಿ ರಾಜ್ ಠಾಕ್ರೆ ಸಾರಥ್ಯದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಕರ್ನಾಟಕದ ಬಸ್ ಗಳ ಮೇಲೆ ದಾಳಿ ಮಾಡಿ ಪುಂಡಾಟಿಕೆ ಪ್ರದರ್ಶಿಸಿದ ಘಟನೆ ನಿನ್ನೆ ಮಂಗಳವಾರ ನಡೆದಿದೆ.
ನಿನ್ನೆ ಮಂಗಳವಾರ ಬೆಳಗ್ಗೆ ಕರವೇ ಕಾರ್ಯಕರ್ತರು ಬೆಳಗಾವಿಯ ಹಿರೇಬಾಗೇವಾಡಿ ಬಳಿ ಮಹಾರಾಷ್ಟ್ರದ ಗೂಡ್ಸ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಬೆನ್ನಲ್ಲಿಯೇ ನಿನ್ನೆ ಮಧ್ಯಾಹ್ನ ಮನಸೇ ಕಾರ್ಯಕರ್ತರು ಮಹಾರಾಷ್ಟ್ರದ ಪೂನೆಯ ಬಸ್ ನಿಲ್ದಾಣಕ್ಕೆ ನುಗ್ಗಿ ಕರ್ನಾಟಕದ ಬಸ್ ಗಳಿಗೆ ಮಸಿ ಬಳಿದು,ಬಸ್ ಗಳ ಟಾಯರ್ ಗಳಿಂದ ಗಾಳಿ ತೆಗೆದು ಪುಂಡಾಟಿಕೆ ಪ್ರದರ್ಶಿಸಿದ್ದಾರೆ.
ಮಹಾರಾಷ್ಟ್ರದ ಹಲವಾರು ಕಡೆಗಳಲ್ಲಿ ಮನಸೇ ಕಾರ್ಯಕರ್ತರು ಕರ್ನಾಟಕದ ಬಸ್ ಗಳನ್ನು ತಡೆದು ಕರ್ನಾಟಕದ ವಿರುದ್ದ ಘೋಷಣೆ ಕೂಗಿ ಪುಂಡಾಟಿಕೆ ನಡೆಸಿರುವ ಘಟನೆಗಳು ವರದಿಯಾಗಿವೆ.
ಮಹಾರಾಷ್ಟ್ರದ ಪುಂಡರು ಬೆಳಗಾವಿ ಗಡಿ ವಿಚಾರದಲ್ಲಿ ಪುಂಡಾಟಿಕೆ ನಡೆಸುತ್ತಿದ್ದು ಕಾಲು ಕೆದರಿ ಜಗಳಕ್ಕಿಳಿದು ಮುಗ್ದ ಮರಾಠಿಗರನ್ನು ಪ್ರಚೋದಿಸುವ ಕುತಂತ್ರ ನಡೆಸಿದ್ದು,ಕರ್ನಾಟಕ ಮಹಾರಾಷ್ಟ್ರ ನಡುವಿನ ಬಸ್ ಸಂಚಾರಕ್ಕೆ ಈಗ ಮತ್ತೆ ಆತಂಕ ಎದುರಾಗಿದೆ.ಉಭಯ ರಾಜ್ಯಗಳ ಪೋಲೀಸರು ಸಾರ್ವಜನಿಕ ಆಸ್ತಿಗಳನ್ನು ಹಾಳು ಮಾಡಿ ಶಾಂತಿಗೆ ಭಂಗ ತರುವ ಪುಂಡರಿಗೆ ಲಗಾಮು ಹಾಕುವದು ಅತ್ಯಗತ್ಯವಾಗಿದೆ.
ಬೆಳಗಾವಿ ಗಡಿ ವಿವಾದ ಸರ್ವೋಚ್ಚ ನ್ಯಾಯಾಲಯದಲ್ಲಿ ಅಂತಿಮ ವಿಚಾರಣೆಯ ಹಂತದಲ್ಲಿ ಇರುವಾಗ ಮಹಾರಾಷ್ಟ್ರ ಸರ್ಕಾರ ಗಡಿ ವಿಚಾರದಲ್ಲಿ ರಾಜಕೀಯ ಲಾಭ ಪಡೆಯಲು ಮಹಾರಾಷ್ಟ್ರದಲ್ಲಿ ಪುಂಡರಿಗೆ ಅವಕಾಶ ಕೊಡುತ್ತಿದ್ದು ಭಾರತದ ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರುತ್ತಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕಾಗಿದೆ.