ಅಧಿವೇಶನದ ಮೊದಲ ದಿನವೇ ವಿಧಾನಸೌಧದ ಒಳಗಡೆ ವೀರ ಸಾವರ್ಕರ್ ಜೊತೆಗೆ ಒಟ್ಡು ಏಳು ಜನ ಮಹಾಪುರುಷರ ಭಾವಚಿತ್ರಗಳ ಅನಾವರಣ ಮಾಡಿರುವ ಸರ್ಕಾರ, ಹೊರಗಡೆ ವೀರರಾಣಿ ಚನ್ನಮ್ಮನ, ಸಂಗೊಳ್ಳಿ ರಾಯಣ್ಣ, ಮಹಾತ್ಮಾ ಗಾಂಧೀಜಿ ಹಾಗೂ ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಗಳ ಅನಾವರಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ಸರ್ಕಾರ ಸಿದ್ಧತೆ ನಡೆಸುವ ಮೂಲಕ ಅನಾವರಣಕ್ಕೆ ಭಾವನಾತ್ಮಕ ಸಂಗತಿಗಳಿಗೆ ಇಂಬು ನೀಡಲು ಮುಂದಾಗಿದೆ.
ಬೆಳಗಾವಿ-ರಾಜ್ಯ ಸರ್ಕಾರ ಸುವರ್ಣಸೌಧದ ವಿಧಾನಸಭೆಯಲ್ಲಿ ವೀರ ಸಾವರ್ಕರ್ ಭಾವಚಿತ್ರವನ್ನು ಅನಾವರಣ ಮಾಡಿದೆ. ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಸಾವರ್ಕರ್ ಫೋಟೋವನ್ನು ಅನಾವರಣ ಮಾಡಲಾಗಿದೆ.
ಸಾವರ್ಕರ್ ಜೊತೆಗೆ ಮಹಾತ್ಮ ಗಾಂಧೀಜಿ, ಅಂಬೇಡ್ಕರ್, ನೇತಾಜಿ, ಸರ್ದಾರ್ ವಲ್ಲಭ್ ಬಾಯ್ ಪಟೇಲ್, ಸ್ವಾಮಿ ವಿವೇಕಾನಂದ, ಬಸವಣ್ಣರ ಫೋಟೋಗಳನ್ನೂ ಕೂಡ ಇದೇ ವೇಳೆ ಅನಾವರಣ ಮಾಡಲಾಗಿದೆ.
ಮೂರ್ತಿಗಳ ಸ್ಥಾಪನೆಗೆ ಸಿದ್ಧತೆ…
ಬೆಳಗಾವಿಯ ಸುವರ್ಣವಿಧಾನಸೌಧದ ಆವರಣದಲ್ಲಿ ಕಿತ್ತೂರ ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಅನಾವರಣಗೊಳಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಪೂರ್ವ ತಯಾರಿಯಾಗಿ ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲರು ಇಂದು ಬೆಳಗಾವಿ ಜಿಲ್ಲಾಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಮತ್ತು ಇತರ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.