ಬೈಂದೂರು :ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿ ಅವರ ಸಾವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತೊಮ್ಮೆ ಕೆದಕಿದ್ದಾರೆ.
ಬೈಂದೂರಿನಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಕೋವಿಡ್ ಸಮಯದಲ್ಲಿ ಜನ ಸಾಕಷ್ಟು ತೊಂದರೆ ಅನುಭವಿಸಿದರು. ಬಿಜೆಪಿ ಕೇಂದ್ರ ಸಚಿವ ಸುರೇಶ್ ಅಂಗಡಿ ಸತ್ತಾಗ ಆತನನ್ನು ಅವರ ಊರಿನಲ್ಲಿ ಅಂತ್ಯ ಸಂಸ್ಕಾರ ಮಾಡಲು ಈ ಸರ್ಕಾರಗಳಿಂದ ಸಾಧ್ಯವಾಗಲಿಲ್ಲ. ಆಕ್ಸಿಜನ್ ಇಲ್ಲದೆ 36 ಜನ ಸತ್ತಾಗ ಕೇವಲ 3 ಜನ ಸತ್ತರು ಎಂದರು. ಅವರಿಗೂ ಪರಿಹಾರ ನೀಡಲ್ಲಿಲ್ಲ. ಆಟೋ ಚಾಲಕರು, ರೈತರು, ಕಾರ್ಮಿಕರು, ವ್ಯಾಪರಸ್ಥರು ಸೇರಿದಂತೆ ಯಾವುದೇ ವರ್ಗದವರಿಗೂ ಸರ್ಕಾರ ನೆರವು ನೀಡಲಿಲ್ಲ. ಮತ್ತೆ ಯಾವ ಕಾರಣಕ್ಕೆ ಈ ಸರ್ಕಾರ ಇರಬೇಕು? ಎಂದು ಟೀಕಿಸಿದರು.
ಗುಣಗಳಲ್ಲಿ ಅತ್ಯಂತ ಶ್ರೇಷ್ಠವಾದ ಗುಣ ಎಂದರೆ ನಂಬಿಕೆ. ಅದೇ ರೀತಿ ಇಂದು ಕಾಂಗ್ರೆಸ್ ಪಕ್ಷವನ್ನು ನಂಬಿ ನೂರಾರೂ ಜನ ದೇಶದ ತ್ರಿವರ್ಣ ಧ್ವಜ ಹಾಕಿಕೊಂಡು ಕಾಂಗ್ರೆಸ್ ಪಕ್ಷ ಸೇರಲು ಬಂದಿದ್ದಾರೆ. ಎಲ್ಲರಿಗೂ ಅಭಿನಂದನೆಗಳು. ಹಿಂದೂ ಧರ್ಮ ಯಾರ ಮನೆ ಸ್ವತ್ತಲ್ಲ. ನನ್ನ ಹೆಸರು ಶಿವಕುಮಾರ, ನಾನು, ಸಿದ್ದರಾಮಯ್ಯ ಅವರು ಹಿಂದೂಗಳಲ್ಲವೇ? ನಾನು ನಿನ್ನೆ ಧರ್ಮಸ್ಥಳ, ಶೃಂಗೇರಿಗೆ ಹೋಗಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದೇನೆ.
ಇಲ್ಲಿ ನಮ್ಮ ಅಭ್ಯರ್ಥಿಯನ್ನು 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಬೇಕು. ಈಗ ಪಕ್ಷಕ್ಕೆ ಬಂದಿರುವವರು ತಾವು ಹೊಸಬರು ಎಂದು ಹಿಂಜರಿಯಬೇಡಿ. ಇಲ್ಲಿ ಹೊಸಬರು, ಹಳಬರು ಎಂಬ ಬೇಧವಿಲ್ಲ. ಚುನಾವಣೆಯ ಕಷ್ಟಕಾಲದಲ್ಲಿ ಯಾರು ನಮ್ಮ ಜತೆ ನಿಲ್ಲುತ್ತಾರೋ ಅವರೆಲ್ಲರೂ ನಮ್ಮವರೆ ಎಂದು ಹೇಳಿದರು.